ADVERTISEMENT

‘ಕಸ್ತೂರಿರಂಗನ್ ವರದಿ: ಮಾನವೀಯತೆ ನೆಲೆಯಿಲ್ಲ’

ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿಯಿಂದ ಪ್ರತಿಭಟನೆಯಲ್ಲಿ : ದಯಾನಂದ್

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 7:07 IST
Last Updated 18 ಏಪ್ರಿಲ್ 2017, 7:07 IST
ನರಸಿಂಹರಾಜಪುರ ತಾಲ್ಲೂಕು ಶೆಟ್ಟಿಕೊಪ್ಪ ಗ್ರಾಮದಲ್ಲಿ ಸೋಮವಾರ ಕಸ್ತೂರಿರಂಗನ್ ವರದಿ ವಿರೋಧಿಸಿ ರಸ್ತೆ ತಡೆ ನಡೆಸ ಲಾಯಿತು.
ನರಸಿಂಹರಾಜಪುರ ತಾಲ್ಲೂಕು ಶೆಟ್ಟಿಕೊಪ್ಪ ಗ್ರಾಮದಲ್ಲಿ ಸೋಮವಾರ ಕಸ್ತೂರಿರಂಗನ್ ವರದಿ ವಿರೋಧಿಸಿ ರಸ್ತೆ ತಡೆ ನಡೆಸ ಲಾಯಿತು.   
ಶೆಟ್ಟಿಕೊಪ್ಪ(ಎನ್.ಆರ್.ಪುರ): ‘ಕಸ್ತೂರಿ ರಂಗನ್ ವರದಿ ಮಾನವೀಯತೆಯ ನೆಲೆಯಿಲ್ಲದ, ಹವಾನಿಯಂತ್ರಿತ ಕೊಠಡಿ ಯಲ್ಲಿ ಕುಳಿತು ತಯಾರಿಸಿದ ಅವೈಜ್ಞಾನಿಕ ವರದಿಯಾಗಿದೆ’ ಎಂದು ಡಾ.ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಆಲಂದೂರು ಎಂ.ಕೆ.ದಯಾನಂದ ತಿಳಿಸಿದರು.
 
ತಾಲ್ಲೂಕಿನ ಶೆಟ್ಟಿಕೊಪ್ಪ ಗ್ರಾಮದಲ್ಲಿ ಸೋಮವಾರ ಕಸ್ತೂರಿರಂಗನ್ ವಿರೋಧಿ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಹಾಗೂ ರಸ್ತೆ ತಡೆ ಚಳವಳಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  
 
‘ಪರಿಸರವನ್ನು ಉಳಿಸುವ ಕೆಲಸ ಗ್ರಾಮೀಣ ಭಾಗದ ಜನರು ತಲಾತಲಾಂತರಗಳಿಂದ ಮಾಡುತ್ತಿದ್ದು,  ಪರಿಸರದೊಂದಿಗೆ ಅನುಸರಿಸಿಕೊಂಡು ಹೋಗುವ ಬುದ್ಧಿ ಗ್ರಾಮೀಣ ಜನರಿಗಿದೆ. ಹಿಂದೆ ಗುರುಕುಲದಲ್ಲಿ ನೈತಿಕ ಶಿಕ್ಷಣ ದೊರೆಯುತ್ತಿತ್ತು.

ಆದರೆ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ, ಮಾನವೀಯ ಮೌಲ್ಯಗಳು ಇಲ್ಲದಿರುವುದರಿಂದ  ಕಾನೂನುಗಳು ಮಾರಕವಾಗಿ ರೂಪಿತವಾಗುತ್ತಿವೆ. ಹಾಗಾಗಿ ಇಂತಹ ವ್ಯವಸ್ಥೆ ಯನ್ನು ಬದಲಾಯಿಸಲು ಅಹಿಂಸಾತ್ಮಕ ಪ್ರಗತಿಶೀಲ ಉಪಯೋಗತತ್ವ ಪ್ರಯೋಗ ಅನಿವಾರ್ಯ’ ಎಂದರು.
 
ಪ್ರಾಸ್ತಾವಿಕವಾಗಿ ಮಾತನಾಡಿದ ಹೋರಾಟ ಸಮಿತಿ ಕಾರ್ಯದರ್ಶಿ ವಕೀಲ ಎಚ್.ಎ.ಸಾಜು, ‘ದೇಶದ 6 ರಾಜ್ಯಗಳಲ್ಲಿ ಹಾದು ಹೋಗುವ ಪಶ್ಚಿಮಘಟ್ಟವನ್ನು ಯುನೆಸ್ಕೊ ವಿಶ್ವಪಾರಂಪರಿಕ ತಾಣವೆಂದು ಘೋಷಿಸಿದ್ದು, ಇದನ್ನು ಸಂರಕ್ಷಿಸಲು ಮೊದಲು ಮಾಧವ್ ಗಾಡ್ಗೀಳ್ ವರದಿ ನೀಡಿದರು.
 
ನಂತರ ಕಸ್ತೂರಿರಂಗನ್ ವಿಸ್ತರಿಸಿ ವರದಿ ನೀಡಿದರು. ಇದನ್ನು ಯಥಾವತ್ತಾಗಿ ಜಾರಿಗೆ ತಂದರೆ ಶೇ 60ಕ್ಕಿಂತ ಹೆಚ್ಚು ಜನವಸತಿ ಪ್ರದೇಶ ಪರಿಸರಸೂಕ್ಷ್ಮ ಪ್ರದೇಶಕ್ಕೆ ಸೇರಿದೆ. ಇದರಿಂದ ಜನರ ಬದುಕು ದುಸ್ತರವಾಗಲಿದೆ’ ಎಂದು ಹೇಳಿದರು.
 
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಡಿ.ರಾಜೇಂದ್ರ ಮಾತನಾಡಿ, ‘ಕಸ್ತೂರಿರಂಗನ್ ವರದಿ ಜಾರಿಯಾದರೆ ಜನರ ಬದುಕಿನ ಪ್ರಶ್ನೆಯಾಗಿದೆ. ಇದು ಪಕ್ಷಾತೀತ,ಜಾತ್ಯತೀತವಾದ ಹೋರಾಟ ವಾಗಿದ್ದು, ಗ್ರಾಮೀಣ ಭಾಗದ ಎಲ್ಲಾ ಜನರು ಕೈಜೋಡಿಸ ಬೇಕು’ ಎಂದರು.
 
ಬಿಜೆಪಿ ಮುಖಂಡ ಕೆ.ಪಿ.ಸಂಪತ್ ಕುಮಾರ್ ಮಾತನಾಡಿ, ‘ವಿದೇಶದ ಎನ್‌ಜಿಓಗಳು, ಸರ್ಕಾರಗಳು ವರದಿ ಸಮರ್ಥಿಸುವ ಮೂಲಕ ಮಲೆನಾಡಿನ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದು, ಅರಣ್ಯದ ಜತೆಗೆ ಮಲೆನಾಡಿಗರು ಬದುಕಿದ್ದು, ನಮ್ಮಿಂದ ಅರಣ್ಯ ಉಳಿದಿದೆ ಹೊರತು ಇಲಾಖೆಯಿಂದಲ್ಲ ಎಂದರು.
 
ಸಭೆಯಲ್ಲಿ ಜೆಡಿಎಸ್‌ನ ಬಿ.ಕೆ.ಜಾನಕೀರಾಂ, ಗ್ರಾಮಸ್ಥರಾದ ಜಯಂತ್, ಎಲ್.ನಾಗರಾಜ್, ಜೇಮ್ಸ್, ಗ್ರಾಮ ಪಂಚಾಯಿತಿ ಸದಸ್ಯೆ ವಿಂದ್ಯಾಹೆಗ್ಡೆ ಮಾತನಾಡಿದರು.
 
ಸಭೆಯಲ್ಲಿ ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಜಾಲಿಬಿ, ತಾಲ್ಲೂಕು ಪಂಚಾಯಿತಿ ಸದಸ್ಯ ಸುಧಾಕರ ಆಚಾರಿ, ಗ್ರಾಮಸ್ಥ ಎನ್.ಎಂ.ಕಾಂತರಾಜ್, ಎ.ಬಿ.ಮಂಜು ನಾಥ್, ಎಲ್ದೋ ಇದ್ದರು. ಸಭೆಯ ನಂತರ ರಸ್ತೆ ತಡೆ ನಡೆಸ ಲಾಯಿತು. ಪ್ರತಿಭಟನಾ ನಿರತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಗೊಳಿಸಿದರು. 
****
ಪ್ರತಿಯೊಂದು ಕಾನೂನಿಗೂ ಪರ್ಯಾಯ ಕಾನೂನಿದೆ. ಪ್ರತಿಯೊಂದು ಸಮಸ್ಯೆಗೂ ಸಹ ಪರಿಹಾರವೂ ಇದೆ. ಜನರ ಅನುಕೂಲಕ್ಕೆ   ಕಾನೂನು ಮಾಡಬೇಕು
ದಯಾನಂದ್, ಡಾ.ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.