ADVERTISEMENT

ಕಾಫಿ ಬೆಲೆ ಕುಸಿತ; ಬೆಳೆಗಾರ ಕಂಗಾಲು

ಕಾಫಿ ವಿಚಾರ ಸಂಕಿರಣ, ಸ್ವಚ್ಛ ಭಾರತ ಅಭಿಯಾನಕ್ಕೆ ಭೋಜೇಗೌಡ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 10:05 IST
Last Updated 24 ಮಾರ್ಚ್ 2018, 10:05 IST

ಚಿಕ್ಕಮಗಳೂರು: ಕಾಫಿ ಉದ್ಯಮ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರ ನಿಟ್ಟಿನಲ್ಲಿ ಕಾಫಿ ಬೆಳೆಗಾರರು ಒಗ್ಗೂಡಿ ಹೋರಾಟ ನಡೆಸುವ ಅಗತ್ಯ ಇದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ ಹೇಳಿದರು.

ಕಾಫಿ ಮಂಡಳಿ ವಿಸ್ತರಣಾ ವಿಭಾಗದ ವತಿಯಿಂದ ತಾಲ್ಲೂಕಿನ ಮಲ್ಲೇ ನಹಳ್ಳಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಫಿ ವಿಚಾರ ಸಂಕಿರಣ ಮತ್ತು ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬರಗಾಲ, ಉತ್ಪಾದನೆ ಕುಂಠಿತ, ಬೆಲೆ ಕುಸಿತ, ಕಾಫಿ ಗಿಡಗಳಿಗೆ ರೋಗ ಬಾಧೆ, ಕಾರ್ಮಿಕರ ಕೊರತೆಯಂಥ ಸಮಸ್ಯೆಗಳನ್ನು ಕಾಫಿ ಉದ್ಯಮ ಎದುರಿಸುತ್ತಿದೆ. ಈ ವರ್ಷವಂತೂ ಫಸಲು ತೀವ್ರ ಕಡಿಮೆಯಾಯಾಗಿದೆ. ಕಾಫಿ ಮತ್ತು ಕಾಳುಮೆಣಸಿನ ಬೆಲೆಯೂ ಕುಸಿದಿದೆ. ಹೀಗಾಗಿ ಬೆಳೆಗಾರರು ಸಾಲ ತೀರಿಸಲಾಗದೆ ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು.

ADVERTISEMENT

ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ದೆಹಲಿಗೆ ತೆರಳಿ ಕೇಂದ್ರ ವಾಣಿಜ್ಯ ಸಚಿವರೊಂದಿಗೆ ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ. ಸಮಸ್ಯೆ ಪರಿಹಾರವಾಗಿಲ್ಲ. ಕಾಫಿ ಉದ್ಯಮ ಬಹಳಷ್ಟು ಜನರಿಗೆ ಉದ್ಯೋಗ ನೀಡಿದೆ. ಉದ್ಯಮ ಸಂಕಷ್ಟದಲ್ಲಿದ್ದು, ಬೆಳೆಗಾರರು ಸಂಘಟಿತರಾಗಿ ಹೋರಾಟ ಮಾಡಿದರೆ ಉದ್ಯಮ ಉಳಿಸಿಕೊಳ್ಳಬಹುದು. ಸಂಘಟಿತರಾಗಿ ಬೆಳೆಗಾರರ ಕೂಗು ರಾಜ್ಯ ಮತ್ತು ಕೇಂದ್ರ ಸರ್ಕಾರ ಮುಟ್ಟಬೇಕು ಎಂದು ಹೇಳಿದರು.

ಕಾಫಿ ಮಂಡಳಿ ಸದಸ್ಯ ಕೆ.ಕೆ.ಮನುಕುಮಾರ್ ಮಾತನಾಡಿ, ಮಂಡಳಿಯಿಂದ ಸದ್ಯದಲ್ಲೇ ಬೆಂಗ ಳೂರಿನಲ್ಲಿ ಕಾಫಿ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು. ಆ ಕೇಂದ್ರದಲ್ಲಿ ಕಾಫಿ ಬೆಳೆಗಾರರ ಮಕ್ಕಳಿಗೆ ಉದ್ಯಮಕ್ಕೆ ಅನುಕೂಲವಾಗುವ ವಿವಿಧ ತರಬೇತಿ ನೀಡಲಾಗು ವುದು ಎಂದು ಹೇಳಿದರು.

ತಾಲ್ಲೂಕಿನ ನಾಲ್ಕು ಸ್ಥಳಗಳಲ್ಲಿ ಮಂಡಳಿ ವತಿಯಿಂದ ಕಾಫಿ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಸಮೀಕ್ಷೆ ನಡೆಸಲಾಗಿದೆ ಎಂದರು.

ಸ್ವಚ್ಚ ಭಾರತ ಅಭಿಯಾನದ ಯೋಜನಾ ನಿರ್ದೇಶಕ ಜಿ.ಎಲ್.ವಿಠಲ್ ಮಾತನಾಡಿ, ಪರಿಸರವನ್ನು ಸ್ವಚ್ಛವಾಗಿ ಇಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು. ಮುಂದಿನ ಪೀಳಿಗೆಗೆ ಪರಿಸರವನ್ನು ಪೋಷಿಸಬೇಕು ಎಂದು ಸಲಹೆ ನೀಡಿದರು.

ಕಾಫಿ ಮಂಡಳಿ ವಿಸ್ತರಣಾ ವಿಭಾಗದ ಜಂಟಿ ನಿರ್ದೇಶಕ ಟಿ.ಸಿ.ಹೇಮಂತ್ ಕುಮಾರ್, ಉಪನಿರ್ದೇಶಕ ಜಿ.ತಿಮ್ಮರಾಜು, ಕಾಫಿ ಮಂಡಳಿ ಸದಸ್ಯರಾದ ಎಂ.ಎಲ್.ಕಲ್ಲೇಶ್, ಉದಯಕುಮಾರ್ ಹೆಗ್ಗಡೆ, ರತೀಶ್ ಕುಮಾರ್, ಟಿ.ಡಿ.ಮಲ್ಲೇಶ್, ಕಾಫಿ ಬೆಳೆಗಾರರಾದ ಮಲ್ಲಿಕಾರ್ಜುನ್, ಗುಣಶೇಖರ್, ಸಚಿನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.