ADVERTISEMENT

ಡಿಡಿಪಿಐ ನಾಗೇಶ್‌ ಅಮಾನತಿಗೆ ನಿರ್ಣಯ

ಸರ್ಕಾರಕ್ಕೆ ಶಿಫಾರಸು ಮಾಡಲು ಜಿಲ್ಲಾ ಪಂಚಾಯಿತಿ ಸದಸ್ಯರ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 5:14 IST
Last Updated 24 ಮಾರ್ಚ್ 2017, 5:14 IST

ಚಿಕ್ಕಮಗಳೂರು: ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿ ಅಕ್ರಮ ಎಸಗಿರುವ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಜಿ.ನಾಗೇಶ್‌ ಅವರನ್ನು ತಕ್ಷಣವೇ ಅಮಾನತು ಗೊಳಿ ಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಮ್ಮತದ ನಿರ್ಣಯ ತೆಗೆದುಕೊಂಡಿದ್ದಾರೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್‌. ಚೈತ್ರಶ್ರೀ ಮಾಲತೇಶ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿ ನಡೆದಿರುವ ಅವ್ಯವಹಾರ ಮತ್ತು ಅಕ್ರಮಗಳ ಬಗ್ಗೆ ಗಂಭೀರ ಚರ್ಚೆಯಾಯಿತು.

ಸದಸ್ಯರಾದ ಮಹೇಶ್‌ ಒಡೆಯರ್, ರವೀಂದ್ರ ಬೆಳವಾಡಿ, ಆನಂದಪ್ಪ, ವನ ಮಾಲಾ ದೇವರಾಜ್‌ ಅವರು ಇಂತಹ ಭ್ರಷ್ಟ ಅಧಿಕಾರಿ ಜಿಲ್ಲೆಗೆ ಅವಶ್ಯಕತೆ ಇದೆಯೇ? ಈ ಅಧಿಕಾರಿಯನ್ನು ಕೂಡಲೇ ಅಮಾ ನತು ಪಡಿಸಲು ಏಕೆ ಸರ್ಕಾರಕ್ಕೆ ಶಿಫಾ ರಸು ಮಾಡಲಿಲ್ಲ? ಎಂದು ಅಧ್ಯ ಕ್ಷರು ಮತ್ತು ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿ ಯನ್ನು ಪ್ರಶ್ನಿಸಿದರು.

ಈ ಹಿಂದಿನ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇ ರಿಯ ಈ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ನಿರ್ಣಯ ಮಾಡಲಾಗಿತ್ತು. ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ ಡಿಡಿಪಿಐ ನಾಗೇಶ್‌ ಮತ್ತು ಕಡೂರು, ತರೀಕೆರೆ, ಚಿಕ್ಕಮಗಳೂರು ಮತ್ತು ಬೀರೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಿಂದಿನ ಸಾಮಾನ್ಯ ಸಭೆಯಲ್ಲೇ ತಪ್ಪು ಒಪ್ಪಿಕೊಂಡಿದ್ದರು.

ಅವರನ್ನು ಏಕೆ ರಜೆ ಮೇಲೆ ಕಳುಹಿಸ ಲಿಲ್ಲ. ಅವರ ಸ್ಥಾನಕ್ಕೆ ಬೇರೆಯವರನ್ನು ನೇಮಿಸಲಿಲ್ಲ. ತಪ್ಪು ಮಾಡಿರುವ ಅಧಿಕಾ ರಿಯನ್ನು ಅದೇ ಸ್ಥಾನದಲ್ಲಿ ಏಕೆ ಮುಂದು ವರಿಸಿದ್ದೀರಿ? ಎಂದು ಕಟುವಾಗಿ ಪ್ರಶ್ನಿಸಿದರು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಣಕಲ್‌ ಶಾಮಣ್ಣ ಕೂಡ ಇಂತಹ ಭ್ರಷ್ಟ ಅಧಿಕಾರಿಗಳ ಅವಶ್ಯಕತೆ ಜಿಲ್ಲೆಗೆ ಬರಬಾರದು. ಸರ್ಕಾರ ಒಂದು ಆದೇಶ ಹೊರಡಿಸಿದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಮತ್ತೊಂದು ಆದೇಶ, ಸುತ್ತೋಲೆ ಹೊರಡಿಸುತ್ತಾರೆ ಎಂದು ಕಿಡಿಕಾರಿದರು.

ಸುಮಾರು 130 ಮಂದಿ ಹೆಚ್ಚುವರಿ ಶಿಕ್ಷಕರನ್ನು ಮಲೆನಾಡು ಭಾಗಕ್ಕೆ ವರ್ಗಾವಣೆ ಮಾಡಬೇಕಿತ್ತು. ಆದರೆ, ಇದರಲ್ಲಿ ಸಾಕಷ್ಟು ನಿಯಮ ಉಲ್ಲಂಘಿಸಿ, ಹೆಚ್ಚುವರಿ ಶಿಕ್ಷಕರನ್ನು ಸ್ವಸ್ಥಾನಗಳಲ್ಲೇ ಉಳಿಸಿಕೊಳ್ಳಲಾಗಿದೆ.

ಅಲ್ಲದೆ, 40ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸ್ಪಷ್ಟವಾಗಿ ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ. ಶಿಕ್ಷಣ ಸುಧಾರಣೆ ಮತ್ತು ಶಿಕ್ಷಕರ ಕಾರ್ಯಕ್ಷಮತೆ ಹೆಚ್ಚಿಸಬೇಕಾದ ಸಾರ್ವಜನಿಕ ಶಿಕ್ಷಣ ಇಲಾಖೆಯೇ ಶಿಕ್ಷಕರ ಶೋಷಣೆಗೆ ಇಳಿದಿದೆ ಎಂದು ಸದಸ್ಯರು ಪಕ್ಷಭೇದ ಮರೆತು ವಾಗ್ದಾಳಿ ನಡೆಸಿದರು.

ಇತ್ತೀಚೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಟ್‌ ಅವರು ಕಡೂರಿಗೆ ಭೇಟಿ ನೀಡಿದ್ದಾಗ ಡಿಡಿಪಿಐ ವಿರುದ್ಧ ಜಿಲ್ಲಾ ಪಂಚಾಯಿತಿ ಸರಿಯಾದ ರೀತಿಯಲ್ಲಿ ಕ್ರಮಕ್ಕೆ ಶಿಫಾರಸು ಮಾಡಿದ್ದರೆ ಆಗಲೇ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುತ್ತಿದ್ದೆವು ಎನ್ನುವು ದನ್ನು ಬಹಿರಂಗವಾಗಿಯೇ ಹೇಳಿಕೆ ನೀಡಿರುವುದನ್ನು ಸದಸ್ಯರು ಸಭೆಯ ಗಮನಕ್ಕೆ ತಂದರು.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಜಿ. ಪಂ. ಅಧ್ಯಕ್ಷರ ನಿರಾಸಕ್ತಿ: ಆರೋಪ
‘ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮತ್ತು ನಾಲ್ಕು ಮಂದಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಪ್ಪೆಸಗಿರುವ ಬಗ್ಗೆ ತನಿಖಾ ಸಮಿತಿ ಜಿಲ್ಲಾ ಪಂಚಾಯಿತಿಗೆ ವರದಿ ಸಲ್ಲಿಸಿದೆ. ಆದರೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್‌ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ರೂಲಿಂಗ್‌ ನೀಡದೆ, ತನಿಖಾ ವರದಿ ದೂಳು ತಿನ್ನುವಂತೆ ಮಾಡಿದ್ದಾರೆ’ ಎಂದು ತನಿಖಾ ಸಮಿತಿಯ ಸದಸ್ಯರಾದ ಮಹೇಶ್‌ ಒಡೆಯರ್‌ ದೂರಿದ್ದಾರೆ.

‘ತನಿಖಾ ವರದಿ ಸಲ್ಲಿಕೆಯಾದ ನಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆರ್‌. ರಾಗಪ್ರಿಯ ಇಬ್ಬರು ಅಧಿಕಾರಿಗಳ ನೇತೃತ್ವದ ಪರಿಶೋಧನಾ ಸಮಿತಿ ನೇಮಿಸಿದ್ದರು. ಆ ಸಮಿತಿ ಕೂಡ ಡಿಡಿಪಿಐ ಅಕ್ರಮ ಎಸಗಿರುವುದನ್ನು ದೃಢಪಡಿಸಿತು.

ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಈ ಬಗ್ಗೆ ಶಿಕ್ಷಣ ಇಲಾಖೆ ಪ್ರಧಾನಕಾರ್ಯದರ್ಶಿಗಳಿಗೆ ತನಿಖೆ ನಡೆಸುವಂತೆ ಶಿಫಾರಸು ಮಾಡಿದ್ದಾರೆ. ಈಗಾಗಲೇ ತನಿಖೆ ಆರಂಭವಾಗಿದೆ. ಇಷ್ಟೆಲ್ಲ ಬೆಳವಣಿಗೆ ನಡೆದ ಮೇಲೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಕೈಕಟ್ಟಿಕೊಂಡಿರುವುದು ಏಕೆ?’ ಎಂದು ಅವರು ಪ್ರಶ್ನಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.