ADVERTISEMENT

ಡಿ.1ರಿಂದ ಕೃಷಿ ಉತ್ಸವ– ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2017, 8:54 IST
Last Updated 26 ನವೆಂಬರ್ 2017, 8:54 IST

ಕೊಪ್ಪ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಡಿಸೆಂಬರ್ 1ರಿಂದ 3ರವರೆಗೆ ಬಾಳಗಡಿಯ ಪ್ರಥಮದರ್ಜೆ ಕಾಲೇಜು ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕೃಷಿ ಉತ್ಸವಕ್ಕೆ ಭರದ ಸಿದ್ಧತೆ ನಡೆದಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕಿ ಗೀತಾ ಶನಿವಾರ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು, ‘ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಯೋಜನೆಯು ಪ್ರಗತಿಬಂಧು ಸಂಘಗಳ ಮೂಲಕ ರೈತರನ್ನು ಸಂಘಟಿಸಿ, ಮೈಯ್ಯಾಳು ಪದ್ಧತಿಯಡಿ ಶ್ರಮ ವಿನಿಮಯದೊಂದಿಗೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಧರ್ಮಸ್ಥಳ ಕ್ಷೇತ್ರದಿಂದ ಸುಧಾರಿತ ಕೃಷಿ ಮಾಹಿತಿ, ಯಾಂತ್ರಿಕ ಸೌಲಭ್ಯಗಳನ್ನು ಒದಗಿಸಿ ಕೃಷಿಗೆ ಉತ್ತೇಜನ ನೀಡಲಾಗಿದೆ’ ಎಂದರು.

‘ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಜಿಲ್ಲೆಯ ವಿವಿಧೆಡೆ ತಾಲ್ಲೂಕು ಮಟ್ಟದ 8 ಕೃಷಿ ಉತ್ಸವಗಳು ಹಾಗೂ ಕಡೂರಿನಲ್ಲಿ ರಾಜ್ಯಮಟ್ಟದ ಕೃಷಿ ಉತ್ಸವವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಕೊಪ್ಪದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕೃಷಿ ಉತ್ಸವಕ್ಕೆ ತಾಲ್ಲೂಕಿನ ವಿವಿಧ ಭಾಗಗಳ ರೈತರು ಸಮರ್ಪಿಸಲಿರುವ ಧವಸ ಧಾನ್ಯಗಳ ಹೊರೆ ಕಾಣಿಕೆಗಳ ಭವ್ಯ ಮೆರವಣಿಗೆ ಇದೇ 30ರ ಬೆಳಿಗ್ಗೆ 11ಕ್ಕೆ ಮೇಲಿನಪೇಟೆಯ ವೀರಭದ್ರ ದೇವಸ್ಥಾನದಿಂದ ಪ್ರಥಮದರ್ಜೆ ಕಾಲೇಜು ಕ್ರೀಡಾಂಗಣದವರೆಗೆ ನಡೆಯಲಿದೆ ಎಂದರು.

ADVERTISEMENT

ಅಂದು ಸಂಜೆ 4. 30ಕ್ಕೆ ಶಾಸಕ ಡಿ.ಎನ್. ಜೀವರಾಜ್ ಅಧ್ಯಕ್ಷತೆಯಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ಹರಿಹರಪುರ ಮಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಕೃಷಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. 2ರ ಬೆಳಿಗ್ಗೆ 10ಕ್ಕೆ ನಡೆಯುವ ಜಾನುವಾರು ಪ್ರದರ್ಶನವನ್ನು ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು. 3ರ ಬೆಳಿಗ್ಗೆ 10ಕ್ಕೆ ಶ್ವಾನ ಪ್ರದರ್ಶನ ನಡೆಯಲಿದೆ. ನಾಡಿನ ಖ್ಯಾತ ಕೃಷಿ ತಜ್ಞರಿಂದ ಒಟ್ಟು 7 ಕೃಷಿ ಸಂವಾದ ಗೋಷ್ಠಿಗಳು, 1 ಮಹಿಳಾ ಗೋಷ್ಠಿ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ಬೆಂಗಳೂರಿನ ಉದಯಕುಮಾರ್ ಅವರಿಂದ ಪ್ರಪಂಚದ ವಿವಿಧ ಭಾಗಗಳ 200ಕ್ಕೂ ಹೆಚ್ಚು ಅಪರೂಪದ ತರಕಾರಿಗಳ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

ವಿವಿಧ ಕೃಷಿ ತಳಿಗಳ ಬೀಜ, ಗೊಬ್ಬರ, ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ 200ಕ್ಕೂ ಹೆಚ್ಚು ಮಳಿಗೆಳನ್ನು ಸ್ಥಾಪಿಸಲಾಗಿದೆ. ಮೂರು ದಿನಗಳ ಕಾರ್ಯಕ್ರಮಕ್ಕೆ 24,000 ಅಡಿ ವಿಸ್ತೀರ್ಣದ ಭವ್ಯ ವೇದಿಕೆ ಸಿದ್ಧಪಡಿಸಲಾಗಿದ್ದು, 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದೆ. ಎಲ್ಲರಿಗೂ ಊಟೋಪಹಾರ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಕೃಷಿ ಉತ್ಸವದ ಯಶಸ್ಸಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಕೋರಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತ ಕೃಷ್ಣಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಾಣಿ ಸತೀಶ್, ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಲ್.ಎಂ. ಪ್ರಕಾಶ್ ಕೌರಿ, ಕೊಪ್ಪ ಯೋಜನಾಧಿಕಾರಿ ಡಿ. ದಿನೇಶ್, ಗೌರವ ಸಲಹೆಗಾರರಾದ ಎನ್.ಪಿ. ಶ್ರೀಪಾಲ್ ಜೈನ್, ಬಿ.ಎಂ. ಕೃಷ್ಣಪ್ಪ, ಓಣಿತೋಟ ರತ್ನಾಕರ್, ಸುಬ್ರಹ್ಮಣ್ಯ ಶೆಟ್ಟಿ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.