ADVERTISEMENT

ನವ ವಧುವಿನಂತೆ ಸಿಂಗಾರಗೊಂಡ ರಂಭಾಪುರಿ ಪೀಠ

ನಾಳೆಯಿಂದ ಯುಗಮಾನೋತ್ಸವ: ರಜತ ಮಹೋತ್ಸವ ಸಮಾರಂಭಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 10:07 IST
Last Updated 7 ಮಾರ್ಚ್ 2017, 10:07 IST
ನವ ವಧುವಿನಂತೆ ಸಿಂಗಾರಗೊಂಡ ರಂಭಾಪುರಿ ಪೀಠ
ನವ ವಧುವಿನಂತೆ ಸಿಂಗಾರಗೊಂಡ ರಂಭಾಪುರಿ ಪೀಠ   
ಬಾಳೆಹೊನ್ನೂರು: ಇಲ್ಲಿನ ರಂಭಾಪುರಿ ಪೀಠದಲ್ಲಿ ಇದೇ 8 ರಿಂದ15ರ ವರೆಗೆ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ವೀರಭದ್ರನಾಥ ಸ್ವಾಮಿ ಮಹಾ ರಥೋತ್ಸವ ಹಾಗೂ ಪೀಠಾರೋಹಣದ ರಜತ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಬಾಳೆಹೊನ್ನೂರು ಪಟ್ಟಣ, ರಂಭಾಪುರಿ ಪೀಠ ನವ ವಧುವಿನಂತೆ ಸಿಂಗಾರಗೊಂಡಿದೆ.
 
ಇದೇ  8ರಂದು ಧ್ವಜಾರೋಹಣ, ಹರಿದ್ರಾಲೇಪನ, ಕುಂಕುಮೋತ್ಸವ ಮೂಲಕ ಪ್ರಸನ್ನ ವೀರ ಸೊಮೇಶ್ವರ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು,  ರಜತ ಮಹೋತ್ಸವದ ಅಂಗವಾಗಿ ಪೀಠದ ಮುಂಭಾಗದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಜನ ಕುಳಿತುಕೊಳ್ಳುವಂತಹ ಸಭಾಮಂಟಪ ನಿರ್ಮಿಸಲಾಗಿದೆ. ಅದಕ್ಕೆ ಪೂರಕವಾಗಿ ಬೃಹತ್ ವೇದಿಕೆ ನಿರ್ಮಾಣ ಅಂತಿಮ ಹಂತ  ತಲುಪಿದೆ. ಕಾರ್ಯಕ್ರಮಗಳ ವೀಕ್ಷಣೆಗಾಗಿ ಬೃಹತ್ ಟಿವಿ ಪರದೆಗಳನ್ನು ಅಳವಡಿಸಲಿದ್ದು, ಬರುವ ಭಕ್ತರಿಗೆ ಎಲ್ಲಾ ಸೌಲಭ್ಯಗಳನ್ನೂ ಕಲ್ಪಿಸಲು ಸ್ವಾಗತ ಸಮಿತಿ ಹಗಲಿರುಳು ಶ್ರಮಿಸುತ್ತಿದೆ.
 
ಇಡೀ ಪೀಠದ ಸುತ್ತಮುತ್ತ ಹಬ್ಬದ ವಾತಾವರಣ ಮನೆ ಮಾಡಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಭಕ್ತರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ. ಇದೇ 9ರಂದು 25 ವರ್ಷಗಳ ನಂತರ ಇಬ್ಬರು ಸ್ವಾಮೀಜಿಗಳ ಅಡ್ಡಪಲ್ಲಕ್ಕಿ  ಉತ್ಸವ ಬಾಳೆಹೊನ್ನೂರಿನ ಪಟ್ಟಣದಲ್ಲಿ ನಡೆಯ ಲಿದ್ದು,10 ರಂದು ನಡೆಯಲಿರುವ ರಜತ ಮಹೋತ್ಸವ ಹಾಗೂ ಜಾತ್ರಾ ಮಹೋ ತ್ಸವಕ್ಕೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಘಟಕರು ಮಾಹಿತಿ ನೀಡಿದರು.
 
ಪೀಠದ ಹೊರಭಾಗದಿಂದ ಬಾಳೆ ಹೊನ್ನೂರಿಗೆ ತೆರಳುವ ರಸ್ತೆಯ ಪಕ್ಕದ ಗದ್ದೆಯಲ್ಲಿ  ವಾಹನಗಳ ನಿಲುಗಡೆಗೆ ವ್ಯವಸ್ಥ ಕಲ್ಪಿಸಲಾಗುತ್ತಿದೆ. ಶಿವಮೊಗ್ಗದ ಕಡೆಯಿಂದ ಪೀಠಕ್ಕೆ ಬರುವ ವಾಹನ ಗಳನ್ನು ಕೂಡ  ಮಠದ ಸಮೀಪದ ಗದ್ದೆಯಲ್ಲಿ ನಿಲುಗಡೆ ಮಾಡಲು ಯೋಜಿಸಲಾಗಿದೆ. ಭಕ್ತರಿಗೆ ನಿತ್ಯ ದಾಸೋಹದ ಅಂಗವಾಗಿ ಪೀಠದ ನಾಲ್ಕು ಕಡೆಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿ ಸಲಾಗಿದ್ದು, ಅಲ್ಲೇ ಅಡುಗೆ ಮಾಡಲು  ಅನುಕೂಲ ಮಾಡಿ ಕೊಡಲಾಗಿದೆ.
 
 ಭಕ್ತರಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ವಸತಿ, ಶೌಚಾಲಯ, ಸಾರಿಗೆ, ಕುಡಿಯುವ ನೀರು ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲು  ಸ್ವಾಗತ ಸಮಿತಿ ಹಗಲಿರುಳು ಶ್ರಮಿಸುತ್ತಿದೆ. ಪೀಠದ  ದೇವಸ್ಥಾನಗಳು, ವಿದ್ಯಾರ್ಥಿ ನಿಲಯಗಳು ಸಮುದಾಯ ಭವನ ಸೇರಿದಂತೆ ಎಲ್ಲಾ ಕಡೆಗಳಿಗೂ ಸುಣ್ಣ ಬಣ್ಣ ಬಳಿಯಲಾಗಿದ್ದು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.
 
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ  ರಂಭಾ ಪುರೀಶ ಗುರುನಿವಾಸ, ಮೂಲ ಸೋಮೇಶ್ವರ ಶಿಲಾಮಯ ದೇವಾಲಯ ಹಾಗೂ ಪೀಠದ ಲಿಂಗೈಕ್ಯ 108 ಜಗದ್ಗು ರುಗಳ ಗದ್ದುಗೆ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು ಇದೇ 10ರಂದು ಲೋಕಾರ್ಪಣೆ ಗೊಳ್ಳಲಿದೆ. ಎಲ್ಲ ವ್ಯವಸ್ಥೆಗಳ ಮೇಲ್ವಿಚಾರಣೆಯನ್ನು ರಂಭಾಪುರಿ ಸ್ವಾಮೀಜಿಯವರೇ ವಹಿಸಿದ್ದು, ಸ್ಥಳದಲ್ಲಿ ಖುದ್ದು ವೀಕ್ಷಣೆ ಮಾಡಿ ಸೂಕ್ತ ಸಲಹೆ ಮಾರ್ಗದರ್ಶನ ನೀಡುತ್ತಿದ್ದಾರೆ. ನೂರಾರು ಕಾರ್ಮಿಕರು ಹಗಲಿರುಳು ಎನ್ನದೆ ವಿವಿಧ ಕಾಮಗಾ ರಿಗಳಲ್ಲಿ  ತೊಡಗಿಸಿಕೊಂಡಿದ್ದಾರೆ. 
 
ರಜತಮಹೋತ್ಸವದ ಯಶಸ್ಸಿಗಾಗಿ ಸ್ಥಳೀಯರು, ಸಂಘಸಂಸ್ಥೆಗಳು ಹಾಗೂ ಮುಖಂಡರನ್ನೊಳಗೊಂಡ ವಿವಿಧ ಸಮಿತಿಗಳನ್ನು ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ರಚಿಸಲಾಗಿದ್ದು, ಅವಿರತ ಕಾರ್ಯದಲ್ಲಿ ತೊಡಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.