ADVERTISEMENT

ಪರಿಸರಸ್ನೇಹಿ ಗಣೇಶ ವಿಗ್ರಹ ಪ್ರತಿಷ್ಠಾಪಿಸಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 7:04 IST
Last Updated 27 ಆಗಸ್ಟ್ 2016, 7:04 IST

ಚಿಕ್ಕಮಗಳೂರು: ಸೆಪ್ಟೆಂಬರ್‌ ತಿಂಗಳಲ್ಲಿ ಆಚರಿಸಲಿರುವ ಗಣೇಶ ಚತುರ್ಥಿ ಹಬ್ಬದಲ್ಲಿ ಪರಿಸರ ಸ್ನೇಹಿ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸುವಂತೆ ಜಿಲ್ಲಾಧಿ ಕಾರಿ ಜಿ.ಸತ್ಯವತಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. 

ನಗರದಲ್ಲಿ ಶುಕ್ರವಾರ ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಕುರಿತು ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಪ್ಲಾಸ್ಟರ್‌ ಆಫ್ ಪ್ಯಾರಿಸ್‌ನಿಂದ ತಯಾರಿಸಿದ, ಸೀಸ ಮತ್ತು ಭಾರ ಲೋಹದ ಬಣ್ಣಗಳಿಂದ ಅಲಂಕರಿಸಿದ ವಿಗ್ರಹಳನ್ನು ಪ್ರತಿಷ್ಠಾಪಿಸಬೇಡಿ. ಅಂತಹ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಕೆರೆ ಅಥವಾ ಜಲಮೂಲಗಳ ನೀರಿನಲ್ಲಿ ವಿಸರ್ಜಿಸು ವುದರಿಂದ ಅದೇ ನೀರನ್ನು ಅವಲಂಬಿ ಸಿದ ಪ್ರಾಣಿ, ಪಶುಗಳು ಹಾಗೂ ಇತರೆ ಜಲಚರಗಳ ಜೀವಕ್ಕೆ ಅಪಾಯ ಉಂಟಾಗಲಿದೆ ಎಂದರು.

ಸೀಸ ಹಾಗೂ ಇತರ ಭಾರ ಲೋಹದ ಹಾಗೂ ರಾಸಾಯನಿಕ ಬಣ್ಣ ಲೇಪಿತವಾಗದೇ ಇರುವ ವಿಗ್ರಹಗಳನ್ನು ಪ್ರತಿಷ್ಠಾಪಿಸಬೇಕು. ಸಾರ್ವಜನಿಕವಾಗಿ ಪೂಜಿಸಲ್ಪಡುವ ಗಣಪತಿ ವಿಗ್ರಹ ಪೆಂಡಲ್‌ಗಳಲ್ಲಿ 55 ಡೆಸಿಬಲ್‌ಗಿಂತ ಹೆಚ್ಚು ಶಬ್ದ ಹೊರಡಿಸುವ ಧ್ವನಿ ವರ್ಧಕಗಳ ಬಳಕೆ ಮಾಡಬಾರದು. ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಧ್ವನಿವರ್ಧಕ ನಿರ್ಬಂಧಿಸಲಾಗಿದೆ ಎಂದರು.

ಪೂಜಿಸಲಾಗುವ ಗಣಪತಿಗಳ ವಿಗ್ರಹಗಳ ವಿಸರ್ಜನೆಯನ್ನು ಚಿಕ್ಕಮ ಗಳೂರಿನ ಬಸವನಹಳ್ಳಿ ಕೆರೆ, ಬೀರೂರಿನ ಬಾಕಿನಕೆರೆ, ಕಡೂರಿನ ಕೆ.ಹೊಸಳ್ಳಿ ಕೆರೆ, ಕೊಪ್ಪದ ಗೌರಿಕೆರೆ, ಎನ್‌.ಆರ್‌.ಪುರದ ಶಿವಮೊಗ್ಗ ರಸ್ತೆ ಕೆರೆಗಳಲ್ಲಿ ಸ್ಥಳೀಯ ಸಂಸ್ಥೆಗಳು ನಿಗದಿಪಡಿಸುವ ಸ್ಥಳಗಳಲ್ಲಿ ವಿಸರ್ಜಿಸಬೇಕೆಂದು ತಿಳಿಸಿದರು.

ನಗರದ ಹೊರಗಿನಿಂದ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ)ನಿಂದ ತಯಾರಿ ಸಿದ ಗಣೇಶ ವಿಗ್ರಹಗಳನ್ನು ತಂದು ಮಾರಾಟ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಂತಹ ವಿಗ್ರಹಗಳನ್ನು ಚೆಕ್‌ಪೋಸ್ಟ್‌ಗಳಲ್ಲಿ ಅಧಿಕಾರಿಗಳು ತಡೆಹಿಡಿಯಬೇಕು ಎಂದು ಸೂಚಿಸಿದರು.

ಹಬ್ಬದ ಸಂದರ್ಭದಲ್ಲಿ ಮೂರ್ತಿಗಳ ಪೂಜೆಗೆ ಉಪಯೋಗಿಸುವ ಹೂ, ಪೇಪರ್, ಪ್ಲಾಸ್ಟಿಕ್ ಸೇರಿದಂತೆ ಮತ್ತಿತರ ಅಲಂಕಾರಿಕ ವಸ್ತುಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಸ್ಥಳೀಯ ಸಂಸ್ಥೆಗಳು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲು ಮುಂದಾಗಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಪ್ಪ ನಾಯಕ್, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ರಮೇಶ್, ವಾರ್ತಾಧಿಕಾರಿ ಬಿ.ಮಂಜುನಾಥ್ ನಗರಸಭೆ ಪ್ರಭಾರ ಆಯುಕ್ತ ಆನಂದ್, ಯೋಜನಾ ನಿರ್ದೇಶಕ ರವಿಕುಮಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.