ADVERTISEMENT

ಬಿಲಗದ್ದೆ ಶಾಲೆಗೆ ಕಲುಷಿತ ನೀರು ಪೂರೈಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 8:43 IST
Last Updated 7 ಜುಲೈ 2017, 8:43 IST

ಕೊಪ್ಪ: ತಾಲ್ಲೂಕಿನ ಬಿಲಗದ್ದೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಕಲುಷಿತ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಸೋಮವಾರ ಶಾನುವಳ್ಳಿ ಪಂಚಾಯಿತಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಯಿತು.

ಸ್ಥಳೀಯ ಮುಖಂಡರಾದ ತಾಲ್ಲೂಕು ರೈತಸಂಘದ ಕಾರ್ಯಾಧ್ಯಕ್ಷ ನವೀನ್ ಕರುವಾನೆ ವಿಷಯ ಪ್ರಸ್ತಾಪಿಸಿ, ‘ಬಿಲಗದ್ದೆ ಶಾಲೆ ಮತ್ತು ಸುತ್ತಲಿನ ನಿವಾಸಿಗಳಿಗೆ ಕಲುಷಿತ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಈ ಹಿಂದೆಯೇ ಪಂಚಾಯಿತಿ ಗಮನಕ್ಕೆ ತರಲಾಗಿದ್ದು, ಶುದ್ಧ ನೀರು ಪೂರೈಸುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ.

ಈಗಲೂ ಕಲುಷಿತ ನೀರನ್ನೇ ಮಕ್ಕಳು ಕುಡಿಯುತ್ತಿದ್ದು, ಬಿಸಿಯೂಟಕ್ಕೂ ಬಳಸಲಾಗುತ್ತಿದೆ. ಮಕ್ಕಳ ಆರೋಗ್ಯ ಹದಗೆಟ್ಟರೆ ಯಾರು ಹೊಣೆ’ ಎಂದು ಪ್ರಶ್ನಿಸಿದರಲ್ಲದೆ, ‘ನೀವು ಬಿಸ್ಲೇರಿ ನೀರಿನ ಬದಲು ಮಕ್ಕಳು ಕುಡಿಯುವ ನೀರನ್ನು ಕುಡಿದು ನೋಡಿ’ ಎನ್ನುತ್ತಾ ತಾವು ಬಾಟಲಿಯಲ್ಲಿ ಸಂಗ್ರಹಿಸಿ ತಂದಿದ್ದ ಕಲುಷಿತ ನೀರಿನ ಮಾದರಿಯನ್ನು ಪಂಚಾಯಿತಿ ಸದಸ್ಯರ ಕೈಗಿತ್ತರು. 

ADVERTISEMENT

ನೀರನ್ನು ಕುಡಿದು ನೋಡಿದ ಸದಸ್ಯರಾದ ರವಿಚಂದ್ರ ಮತ್ತು ವಿಕ್ರಮಾದಿತ್ಯ ಮಾತನಾಡಿ, ‘ಈ ಹಿಂದೆ ದೂರು ಬಂದಾಗಲೇ ನೀರನ್ನು ಶುದ್ಧೀಕರಿಸಿ, ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ‘ಶುದ್ಧ ನೀರು’ ಎಂದು ಸರ್ಟಿಫಿಕೇಟ್ ಬಂದಿದೆ. ಪಕ್ಕದಲ್ಲಿರುವ ಕೆರೆಯ ಹೂಳಿನಿಂದಾಗಿ ಬಾವಿ ನೀರಿಗೆ ಕೆಸರು ಬಣ್ಣ ಬಂದಿದೆ’ ಎಂದರು.

ಕಲುಷಿತ ನೀರನ್ನು ಕೂಡಲೇ ತಡೆಹಿಡಿದು, ಶುದ್ಧ ನೀರು ಪೂರೈಸಬೇಕೆಂಬ ಗ್ರಾಮಸ್ಥರ ಆಗ್ರಹಕ್ಕೆ ಸಮ್ಮತಿಸಿದ ಅಧ್ಯಕ್ಷ ಶಿವಾಕರ ಶೆಟ್ಟಿ ‘ಇನ್ನೊಮ್ಮೆ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಕ್ಷಿತ್ ಮಾತನಾಡಿ, ‘ಹಲವು ಕಾಮಗಾರಿಗಳನ್ನು ನಿಯಮಬಾಹಿರವಾಗಿ ನಡೆಸಿದ್ದು, ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಬಾವಿ ಹೂಳೆತ್ತಲು ₹ 65 ಸಾವಿರ ಬಿಲ್ ಮಾಡಲಾಗಿದೆ. ಅಷ್ಟು ವೆಚ್ಚದಲ್ಲಿ ಬಾವಿಯನ್ನೇ ನಿರ್ಮಿಸಬಹುದಾಗಿದೆ. ಎರಡು ಬೀದಿ ದೀಪ ದುರಸ್ತಿಗೆ ₹ 35 ಸಾವಿರ ಖರ್ಚು ತೋರಿಸಲಾಗಿದೆ’ ಎಂದು ಆರೋಪಿಸಿದರು.

‘ನಾವು ಯಾವುದೇ ಅವ್ಯವಹಾರ ನಡೆಸಿಲ್ಲ. ತುರ್ತು ಅಗತ್ಯದ ಕಾಮಗಾರಿಗಳನ್ನು ಕೊಟೇಶನ್ ಆಧಾರದಲ್ಲಿ ನಡೆಸಲಾಗಿದೆ. ಜನರಿಗೆ ಒಳ್ಳೆ ಕೆಲಸ ಮಾಡಿಕೊಟ್ಟಿದ್ದು ತಪ್ಪಾ?’ ಎಂದು ಅಧ್ಯಕ್ಷರು ಹಾಗೂ ಸದಸ್ಯರು ಪ್ರತಿವಾದಿಸಿದಾಗ ಕೆಲಹೊತ್ತು ಗೊಂದಲ ಏರ್ಪಟ್ಟಿತು.          

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಜಿ. ಶೋಭಿಂತ್ ಮಾತನಾಡಿ, ‘ಗ್ರಾಮಸ್ಥರ ದೂರುಗಳನ್ನು ಸಹನೆಯಿಂದ ಕೇಳಿ ಪರಿಹಾರ ಸೂಚಿಸಬೇಕಾದುದು ಆಡಳಿತ ನಡೆಸುವವರ ಜವಾಬ್ದಾರಿ. ಅದು ಬಿಟ್ಟು ನೀವೇ ಜಗಳಕ್ಕೆ ಬರುವುದು ಸರಿಯಲ್ಲ’ ಎಂದರು.  

ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೆಟಕುವಷ್ಟು ಜೋತು ಬಿದ್ದಿರುವ ವಿದ್ಯುತ್ ಲೈನ್‌ಗಳನ್ನು ಸರಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಪಂಚಾಯಿತಿಯಿಂದ ಮುಂದಿನ 10 ವರ್ಷಗಳಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ಜಾಗವನ್ನು ಕಾದಿರಿಸಲು ತೀರ್ಮಾನಿಸಲಾಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು, ಇಲಾಖಾ ಕಾರ್ಯಕ್ರಮಗಳ ಪ್ರಗತಿ, ಸರ್ಕಾರದ ಸೌಲಭ್ಯಗಳ ಬಗ್ಗೆ ವಿವರಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಮಂಜುಳ ಮಂಜುನಾಥ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗಾಯತ್ರಿ ಆನಂದ್, ಸದಸ್ಯರಾದ ರವಿಚಂದ್ರ, ವಿಕ್ರಮಾದಿತ್ಯ, ದೇವಮ್ಮ, ಜಯಂತಿ, ನೋಡಲ್ ಅಧಿಕಾರಿ ಮಹಿಮ್, ಪಿಡಿಒ ವಸಂತಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.