ADVERTISEMENT

ಮುಂದುವರೆದ ವರ್ಷಧಾರೆ

ಮೂಡಿಗೆರೆ: ಜನಜೀವನ ಅಸ್ತವ್ಯಸ್ತ l ಮುಂಜಾನೆ ಬಿಸಿಲು

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 8:33 IST
Last Updated 22 ಜುಲೈ 2017, 8:33 IST

ಮೂಡಿಗೆರೆ: ತಾಲ್ಲೂಕಿನಾದ್ಯಂತ ಶುಕ್ರ ವಾರವು ಮಳೆ ಮುಂದುವರೆದು ಜನ ಜೀವನ ಅಸ್ತವ್ಯಸ್ತಗೊಳಿಸಿತು. ನಾಲ್ಕು ದಿನಗಳಿಂದ ಕಳೆದು ಹೋಗಿದ್ದ ಸೂರ್ಯ, ಮುಂಜಾನೆ ವೇಳೆಗೆ ಕಾಣಿಸಿ ಕೊಂಡು ಮಳೆ ದೂರಾಯಿತು ಎಂಬ ಭಾವನೆ ಮೂಡಿಸಿದರೂ, ಕೆಲವೇ ಗಂಟೆಯಲ್ಲಿ ಮೋಡದ ಮರೆಯಲ್ಲಿ ಸೂರ್ಯ ಅವಿತು ಹೋಗಿ ಧಾರಾಕಾರ ಮಳೆ ಸುರಿಯಿತು.

ಮುಂಜಾನೆ ಬಿಸಿಲು ಕಾಣಿಸಿ ಕೊಂಡಿದ್ದರಿಂದ ಶಾಲಾ ಕಾಲೇಜುಗಳು ಎಂದಿನಂತೆ ಪ್ರಾರಂಭವಾಗಿದ್ದವು. ಆದರೆ, ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬರುವ ವಿದ್ಯಾರ್ಥಗಳ ಸಂಖ್ಯೆ ಕ್ಷೀಣಿಸಿತ್ತು. ಪಟ್ಟಣದಲ್ಲಿ ಶುಕ್ರವಾರ ನಡೆಯುವ ವಾರದ ಸಂತೆಗೆ ಗ್ರಾಹಕರ ಸಂಖ್ಯೆ ಕುಂಠಿತವಾಗಿತ್ತು.

ಪದೇ ಪದೇ ರಭಸವಾದ ಗಾಳಿಯೊಂದಿಗೆ ಮಳೆ ಸುರಿದಿದ್ದರಿಂದ, ಸಂತೆಯಲ್ಲಿ  ಹಣ್ಣು, ತರಕಾರಿ ದಿನಸಿ ಅಂಗಡಿಗಳಲ್ಲಿ ವರ್ತಕರು ತಮ್ಮ ಸರಕುಗಳನ್ನು ಸಂರಕ್ಷಿಸಿಕೊಳ್ಳಲು ಪರದಾಡುತ್ತಿದ್ದ ದೃಶ್ಯ ಕಂಡು ಬಂತು.

ADVERTISEMENT

ನಾಲ್ಕು ದಿನಗಳಿಂದ ಹೇಮಾವತಿ ತೀರ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ, ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಉಗ್ಗೆ ಹಳ್ಳಿ ಗದ್ದೆ ಬಯಲಿನ ಮಟ್ಟದಲ್ಲಿ ನೀರು ಹರಿಯುತ್ತಿದೆ. ಮಳೆಯ ಪ್ರಮಾಣ ಹೆಚ್ಚಾದರೆ ಉಗ್ಗೆಹಳ್ಳಿ ಕಾಲೋನಿಗೆ ನೀರು ನುಗ್ಗುವ ಅಪಾಯ ಎದುರಾಗಿದೆ.

ಮಳೆಯಿಂದಾಗಿ ಗುರುವಾರ ರಾತ್ರಿ ಮಾಕೋನಹಳ್ಳಿ ಬಳಿ ಖಾಸಗಿ ಕಾಫಿ ಎಸ್ಟೇಟಿನಲ್ಲಿ ಬೃಹತ್‌ ಮರವೊಂದು ವಿದ್ಯುತ್‌ ತಂತಿಯ ಮೇಲೆ ಬಿದ್ದಿದ್ದರಿಂದ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು. ಕೊಟ್ಟಿಗೆಹಾರ, ಬಣಕಲ್‌, ಮತ್ತಿಕಟ್ಟೆ, ತರುವೆ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದಲೂ ವಿದ್ಯುತ್‌ ಪೂರೈಕೆ ಸ್ಥಗಿತವಾಗಿದ್ದು ಜನರು ಪರದಾಡಿದರೆ, ಬಹುತೇಕ ಹೋಟೆಲ್‌, ಗುಡಿಕೈಗಾರಿ ಕೆಗಳು ಬಾಗಿಲು ಮುಚ್ಚಿದ್ದವು.

ತಾಲ್ಲೂಕಿನ ಹೀರೆಬೈಲ್‌ ಸಮೀಪ ಕೊಟ್ಟಿಗೆಹಾರ– ಕಳಸ ರಸ್ತೆ ಬಿರುಕು ಬಿಟ್ಟಿದ್ದು, ಸಂಪರ್ಕ ಕಡಿದು ಹೋಗುವ ಬೀತಿ ಎದುರಾಗಿದೆ. ಜಡಿ ಮಳೆಯ ನಡುವೆಯೇ ಹಂತೂರು, ಹೊರಟ್ಟಿ, ಗುತ್ತಿ, ಬಣಕಲ್‌ ಮುಂತಾದ ಪ್ರದೇಶ ದಲ್ಲಿ ಗದ್ದೆ ನಾಟಿ ಪ್ರಾರಂಭವಾಗಿದ್ದು, ಮಲೆನಾಡಿಗೆ ಕಳೆ ಬಂದಂತಾಗಿದೆ.

ಮಳೆ ವಿವರ: 24 ಗಂಟೆಗಳಲ್ಲಿ ಮೂಡಿಗೆರೆ 72.6 ಮಿ.ಮೀ. ಕಳಸ 42.8 ಮಿ.ಮೀ, ಕೊಟ್ಟಿಗೆಹಾರ 98.8 ಮಿ.ಮೀ, ಜಾವಳಿ 70.3 ಮಿ.ಮೀ, ಗೋಣಿಬೀಡು 18 ಮಿ.ಮೀ ನಷ್ಟು ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.