ADVERTISEMENT

ಲಗಾಮು ಇಲ್ಲದ ಮರಳು ಲಾರಿ

ಕೆ.ವಾಸುದೇವ
Published 7 ಏಪ್ರಿಲ್ 2017, 6:56 IST
Last Updated 7 ಏಪ್ರಿಲ್ 2017, 6:56 IST

ಮೂಡಿಗೆರೆ: ಮೂರು ತಿಂಗಳ ಹಿಂದೆ ಸರ್ಕಾರಿ ಒಳ ಚರಂಡಿ ಗುತ್ತಿಗೆ ಮಾಡುತ್ತಿದ್ದವನೊಬ್ಬ ಇಂದು ಮೂರು ಲಾರಿಗಳ ಮಾಲೀಕ! ಹಗಲಿಡೀ ಬ್ಯಾಟ್‌, ಬಾಲ್‌ ಹಿಡಿದು ಪಡ್ಡೆ ಹೊಡೆಯುವ ವ್ಯಕ್ತಿಯೊಬ್ಬ ಬೃಹತ್‌ ಮನೆಯ ಒಡೆಯ! ಹಗಲಿನಲ್ಲಿ ಏನೂ ಕೆಲಸ ಇಲ್ಲದಿದ್ದರೂ ತನ್ನದೇ ಕಾರಿನಲ್ಲಿ ಜೋರಾದ ಸಂಗೀತದೊಂದಿಗೆ ಓಡಾಡುವ ಶ್ರೀಮಂತ.

–ಇವು ಮಲೆನಾಡಿನಲ್ಲಿ ಇತ್ತೀಚೆಗೆ ಕಾಣಸಿಗುತ್ತಿರುವ ದೃಶ್ಯ. ಇಷ್ಟು ಶ್ರೀಮಂತಿಕೆಗೆ ಹೇಗೆ ಬಂತು ಎಂಬ ಸಂದೇಹ ಉಂಟು ಮಾಡುವುದು ಸತ್ಯ. ಆದರೆ ಈ ಎಲ್ಲ ಬೆಳವಣಿಗೆಗೆ ಕಾರಣ ಅಕ್ರಮ ಮರಳು ದಂಧೆ ಎನ್ನುತ್ತಾರೆ ಸಾರ್ವಜನಿಕರು.

ಮರಳು ಅಕ್ರಮ ಸಾಗಣೆ ಹಗಲು ರಾತ್ರಿ ಎನ್ನದೇ ನಿರಂತರವಾಗಿ ನಡೆ ಯುತ್ತಿದ್ದು, ಸಾಗಾಣಿಕೆದಾರರು ರಾತ್ರೋ ರಾತ್ರಿ ಶ್ರೀಮಂತರಾಗಲು ಹಾದಿಯಾ ಗುತ್ತಿದ್ದು, ಶ್ರಮವಿಲ್ಲದೇ ಬಂದು ಸೇರುತ್ತಿರುವ ಹಣವು ಸಾಮಾಜಿಕ ಸ್ಥಿತಿಯನ್ನು ಬದಲಾಯಿಸುತ್ತಿದೆ.

ADVERTISEMENT

ಒಂದೇ ಪರ್ಮಿಟ್ಟಿನಲ್ಲಿ ಹಲವು ಲೋಡ್‌ ಸಾಗಣೆ: ತಾಲ್ಲೂಕಿನಲ್ಲಿ ಒಟ್ಟು  ಐದು ಮರಳು ಯಾರ್ಡ್‌ಗಳಿದ್ದು, ಅಲ್ಲಿ ಮರಳು ತೆಗೆಯಲು ಪರ್ಮಿಟ್ ನೀಡಿದ ದಿನವಂತೂ ಮರಳು ಸಾಗಾಟದಾರರಿಗೆ ಸುಗ್ಗಿಹಬ್ಬ. ಜಿಲ್ಲಾಡಳಿತದಿಂದ ಪರವಾನಗಿ ಸಿಕ್ಕಿದೊಡನೆ ನಾ ಮುಂದೆ, ತಾ ಮುಂದೆ ಎಂದು ಮರಳು ಯಾರ್ಡ್‌ ಗೆ ಹೋಗಿ ಮೊದಲ ಲೋಡನ್ನು ನೈಜ ಫಲಾನುಭವಿಗಳಿಗೆ ವಿತರಿಸುತ್ತಾರೆ. ಆದರೆ ಪರ್ಮಿಟ್‌ ಸ್ಲಿಪ್‌ನ್ನು ಗ್ರಾಹಕರಿಗೆ ನೀಡದೇ ಪುನಾ ಅದೇ ಪರ್ಮಿಟ್ಟಿನಲ್ಲಿ ಸಂಜೆವರೆಗೂ ಮರಳು ಸಾಗಿಸುತ್ತಾರೆ. ಮೊದಲ ಪರ್ಮಿಟ್ಟಿನ ಹಣ ಸರ್ಕಾರಕ್ಕೆ ಸೇರಿದರೆ, ಉಳಿದ ಲೋಡುಗಳ ಹಣ ನೇರವಾಗಿ ಲಾರಿ ಮಾಲೀಕರ ಜೇಬಿಗಿಳಿಯುತ್ತದೆ. ದಿನಕ್ಕೆ ಕನಿಷ್ಠ ಎರಡು ಲೋಡ್‌ಗಳನ್ನು ಪರ್ಮಿಟ್ ಇಲ್ಲದೇ ಸಾಗಣೆ ಮಾಡುತ್ತಾರೆ ಎಂಬುದು ಸ್ಥಳೀಯರ ಆರೋಪ. ಎರಡು ಲೋಡ್‌ನಿಂದ ಕನಿಷ್ಠ ₹ 30 ಸಾವಿರವನ್ನು ಲಾರಿ ಮಾಲೀಕರು ಉಳಿಸಿಕೊಳ್ಳುತ್ತಾರೆ ಎಂಬುದು ಲೆಕ್ಕಾಚಾರ.

ಸಿಬ್ಬಂದಿಯೇ ಮಾಹಿತಿದಾರರು: ಜಿಲ್ಲಾಡಳಿತ ಅಥವಾ ಪೊಲೀಸ್‌ ಇಲಾಖೆಯಿಂದ ಯಾವುದೇ ವಿಚಕ್ಷಣ ದಳ ಮರಳು ಯಾರ್ಡಿಗೆ ಹೊರಟರೆ ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿ ಹಾಗೂ ಪೊಲೀಸ್‌ ಇಲಾಖೆಯ ಸಿಬ್ಬಂದಿಯೇ ಮರಳು ಸಾಗಣೆದಾರರಿಗೆ ಮಾಹಿತಿ ನೀಡುತ್ತಾರೆ ಎಂಬುದು ಮತ್ತೊಂದು ಆರೋಪ.  ಇದಕ್ಕೆ ಪುಷ್ಟಿ ಎಂಬಂತೆ  ಮೂಡಿಗೆರೆ ಪೊಲೀಸರು ಕೃಷ್ಣಾಪುರದ ಬಳಿ ಇತ್ತೀಚೆಗೆ ಮರಳು ಲಾರಿಗಳನ್ನು ತಡೆದು ತಪಾಸಣೆ ಮಾಡುತ್ತಿದ್ದಂತೆ, ಮೂಡಿಗೆರೆ ಪೊಲೀಸ್‌ ಠಾಣೆ ವ್ಯಾಪ್ತಿಯಿಂದ ಹೊರಗಿರುವ ಅಣಜುರು ಸೇತುವೆಯ ಬಳಿ 30 ಕ್ಕೂ ಅಧಿಕ ಲಾರಿಗಳು ಮರಳು ತುಂಬಿಕೊಂಡು ನಿಂತಿದ್ದವು. ಲಾರಿ ನಿಂತಿರುವ ಬಗ್ಗೆ ಗೋಣಿಬೀಡು ಪೊಲೀಸರಿಗೆ ಮಾಹಿತಿ ನೀಡಿದರೂ ಲಾರಿಗಳು ತೆರಳುವವರೆಗೂ ಪೊಲೀಸರು ಬರಲಿಲ್ಲ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳುತ್ತಾರೆ.

ಸರ್ಕಾರಿ ವಾಹನಗಳು ಮರಳು ಯಾರ್ಡಿನ ರಸ್ತೆಯಲ್ಲಿ ಸಾಗಿದರೆ ಮಾಹಿತಿ ಬರುವುದರಿಂದ, ಜಿಲ್ಲಾಡಳಿತವು ಉನ್ನತ ಪ್ರಾಮಾಣಿಕ ಅಧಿಕಾರಿಗಳ ತಂಡವನ್ನು ವಿಚಕ್ಷಣದಳವನ್ನಾಗಿ ರೂಪಿಸಿ, ಖಾಸಗಿ ವಾಹನಗಳಲ್ಲಿ ದಾಳಿ ನಡೆಸಿ ಪರ್ಮಿಟ್‌ ಪರೀಕ್ಷಿಸಬೇಕು, ಮರಳು ಯಾರ್ಡಿನ ಬಳಿ ಸಿಸಿ ಕ್ಯಾಮರಗಳನ್ನು ಅಳವಡಿಸಿ ಪ್ರತಿ ದಿನ ಬಂದು ಹೋಗುವ ಲಾರಿಗಳ ಮೇಲೆ ನಿಗಾ ಇಡಬೇಕು, ಈಗಾಗಲೇ ಪದೇ ಪದೇ ಅಕ್ರಮ ಮರಳು ಸಾಗಾಣೆಯಿಂದ ಪ್ರಕರಣ ದಾಖಲಾಗಿರುವ ಲಾರಿಗಳ ಪರವಾನಗಿಯನ್ನು ಸ್ಥಗಿತಗೊಳಿಸಿ ಬಿಗಿ ಕಾನೂನನ್ನು ಜಾರಿಗೊಳಿಸಿ ಬದಲಾಗುತ್ತಿರುವ ಮಲೆನಾಡಿನ ಪರಿಸ್ಥಿತಿಯನ್ನು ನಿಯಂತ್ರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.