ADVERTISEMENT

‘ವಿಧಾನಸಭೆ ಚುನಾವಣೆಗೆ ಯಡಿಯೂರಪ್ಪ ನೇತೃತ್ವ’

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 6:29 IST
Last Updated 8 ನವೆಂಬರ್ 2017, 6:29 IST
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು, ಶಾರದಾ ಮಠದ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಮಂಗಳವಾರ ಆಶೀರ್ವಾದ ಪಡೆದರು.
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು, ಶಾರದಾ ಮಠದ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಮಂಗಳವಾರ ಆಶೀರ್ವಾದ ಪಡೆದರು.   

ಶೃಂಗೇರಿ: ಕೇಂದ್ರ ಕೌಶಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಹಾಗೂ ಅವರ ಧರ್ಮಪತ್ನಿ ರೂಪಾ ಅವರು, ಮಂಗಳವಾರ ಶಾರದಾ ಮಠಕ್ಕೆ ಭೇಟಿ ನೀಡಿದರು. ನರಸಿಂಹವನದ ಗುರು ನಿವಾಸದಲ್ಲಿ ಮಠದ ಗುರುಗಳಾದ ಭಾರತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರಭಾರತೀ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದರು. ಶಾರದೆಯ ಸನ್ನಿಧಿಯಲ್ಲಿ ವಿಶೇಷಪೂಜೆ ಸಲ್ಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಟಿಪ್ಪುಜಯಂತಿ ಆಚರಣೆಯ ಬಗ್ಗೆ ನನ್ನ ನಿಲುವು ಅಚಲ. ನಾನು ಹೇಳುವ ವಿಷಯವನ್ನು ನೇರವಾಗಿ ಹೇಳುತ್ತೇನೆ. ಅದು ಕೆಲವರಿಗೆ ಅಪಥ್ಯವಾಗುತ್ತದೆ’ ಎಂದರು.

‘ರಾಜ್ಯ ವಿಧಾನಸಭಾ ಚುನಾವಣೆಯ ನೇತೃತ್ವವನ್ನು ಯಡಿಯೂರಪ್ಪ ವಹಿಸಲಿದ್ದಾರೆ. ಬಿಜೆಪಿ ಪಕ್ಷ ಸರ್ಕಾರ ರಚಿಸುವ ಭರವಸೆ ನಮ್ಮಲ್ಲಿದೆ. ಪಕ್ಷದಲ್ಲಿ ಎಲ್ಲರೂ ಪರಸ್ಪರ ವಿಶ್ವಾಸ ಹಾಗೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಜನಪರ ಕೆಲಸ ಮಾಡಿಲ್ಲ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷದ ಏಳಿಗೆಗಾಗಿ ನಿರಂತರವಾಗಿ ದುಡಿಯಬೇಕಿದೆ’ ಎಂದು ತಿಳಿಸಿದರು.

ADVERTISEMENT

ಶಾರದೆಯ ಸನ್ನಿಧಿಗೆ ಬರಬೇಕೆಂಬ ಆಶಯವಿತ್ತು. ಶಾರದೆಯ ಆಶೀರ್ವಾದ ಹಾಗೂ ಗುರುಗಳ ಆಶೀರ್ವಾದದಿಂದ ಮನಸ್ಸಿಗೆ ಶಾಂತಿ ಉಂಟಾಗಿದೆ ಎಂದರು. ಬಿಜೆಪಿ ರಾಜ್ಯ ರಾಜಕಾರಣಿ ಸದಸ್ಯ ಕೆ.ಎಸ್.ಶ್ರೀಧರರಾವ್ ,ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಶಿವಶಂಕರ್, ಶಿಲ್ಪಾರವಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಶೀಲ ಚಂದ್ರಶೇಖರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಡಾ.ಲಕ್ಷ್ಮೀಪ್ರಸಾದ್, ಪಟ್ಟಣ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ, ಸದಸ್ಯರಾದ ಶಿಲ್ಪಾ ಮಂಜುನಾಥ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪುಣ್ಯಪಾಲ್ ಹಾಜರಿದ್ದರು. ಸಚಿವರು ಶೃಂಗೇರಿಯಿಂದ ಹೊರನಾಡಿಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.