ADVERTISEMENT

ಸೌಲಭ್ಯ ಒದಗಿಸುವಲ್ಲಿ ಕೆಸರೆರೆಚಾಟ

ಮೂಡಿಗೆರೆ ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ನಡುವೆ ತಿಕ್ಕಾಟ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 10:52 IST
Last Updated 18 ಜೂನ್ 2018, 10:52 IST
ಮೂಡಿಗೆರೆ ಪಟ್ಟಣದ ಅಂಬೇಡ್ಕರ್‌ನಗರದಲ್ಲಿ ನಿಂತಿರುವ ಕೊಳಚೆ ನೀರು.
ಮೂಡಿಗೆರೆ ಪಟ್ಟಣದ ಅಂಬೇಡ್ಕರ್‌ನಗರದಲ್ಲಿ ನಿಂತಿರುವ ಕೊಳಚೆ ನೀರು.   

ಮೂಡಿಗೆರೆ: ಪಟ್ಟಣದ ಅಂಬೇಡ್ಕರ್‌ ನಗರವು ಪಟ್ಟಣ ಪಂಚಾಯಿತಿ ಹಾಗೂ ಹಳೇ ಮೂಡಿಗೆರೆ ಗ್ರಾಮ ಪಂಚಾಯಿತಿಯ ತಿಕ್ಕಾಟದಿಂದಾಗಿ ಮೂಲ ಸೌಲಭ್ಯವಿಲ್ಲದೇ ನರಳುತ್ತಿದೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.

ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ಅಂಬೇಡ್ಕರ್‌ ನಗರವು ಪಟ್ಟಣ ಪಂಚಾಯಿತಿ ವ್ಯಾಪ್ತಿಯ 10 ಹಾಗೂ 11ನೇ ವಾರ್ಡ್‌ ವ್ಯಾಪ್ತಿ ಹಾಗೂ ಹಳೇಮೂಡಿಗೆರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಸೇರಿದ್ದು, ಸೂಕ್ತವಾಗಿ ಗಡಿ ಗುರುತಿಸದ ಕಾರಣ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ.

ಎಂಇಎಸ್‌ ಶಾಲೆಯ ಹಿಂಭಾಗದಲ್ಲಿ ಬರುವ ಅಂಬೇಡ್ಕರ್‌ ನಗರದಲ್ಲಿ ಒಂದೇ ಪ್ರದೇಶದಲ್ಲಿ ಇಪತ್ತಕ್ಕೂ ಅಧಿಕ ಮನೆಗಳಿದ್ದು, ಕೆಲವು ಮನೆಗಳು ಪಟ್ಟಣ ಪಂಚಾಯಿತಿ ವ್ಯಾಪ್ತಿಗೂ, ಇನ್ನುಳಿದ ಮನೆಗಳು ಹಳೇ ಮೂಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ನೋಂದಾಯಿತವಾಗಿವೆ. ಕೆಲವು ಮನೆಯ ಮಾಲೀಕರು ಪಟ್ಟಣ ಪಂಚಾಯಿತಿಗೆ ಮನೆಗಂದಾಯ ಪಾವತಿ
ಸಿದರೆ, ಇನ್ನುಳಿದ ಮನೆಯ ಮಾಲೀಕರು ಹಳೇ ಮೂಡಿಗೆರೆ ಗ್ರಾಮ ಪಂಚಾಯಿತಿಗೆ ಕಂದಾಯ ಪಾವತಿಸುತ್ತಾರೆ.

ADVERTISEMENT

ಇಲ್ಲಿನ ನಿವಾಸಿಗಳಿಂದ ಕಂದಾಯ ಪಡೆದುಕೊಳ್ಳುವ ಪಟ್ಟಣ ಪಂಚಾಯಿತಿ ಹಾಗೂ ಹಳೇ ಮೂಡಿಗೆರೆ ಗ್ರಾಮ ಪಂಚಾಯಿತಿಗಳು ಮಾತ್ರ ಮೂಲ ಸೌಲಭ್ಯ ಒದಗಿಸುವಲ್ಲಿ ಕೆಸರೆರೆಚಾಟದಲ್ಲಿ ತೊಡಗಿದ್ದು, ‘ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು’ ಎಂಬ ಮಾತಿನಂತೆ ಇಲ್ಲಿನ ಜನತೆ ಮಾತ್ರ ಮೂಲಸೌಲಭ್ಯವಿಲ್ಲದೇ ಜೀವನ ನಡೆಸುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪಂಚಾಯಿತಿ ಕುಡಿಯುವ ನೀರು ಪೂರೈಸದ ಕಾರಣ ಕೆಲವು ಮನೆಯ ಮಾಲೀಕರು ಸ್ವತಃ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದು, ಉಳಿದವರು ಅವರಿವರ ಮನೆಯಲ್ಲಿ ಕುಡಿಯುವ ನೀರನ್ನು ಪಡೆದುಕೊಳ್ಳುವಂತಾಗಿದೆ. ಮನೆಯ ಮಾಲೀಕರೇ ಸ್ವತಃ ಒಳಚರಂಡಿ ಮಾಡಿಕೊಂಡಿದ್ದು, ಒಳ
ಚರಂಡಿಯ ನೀರು ಸರಾಗವಾಗಿ ಹರಿಯದೇ ತುಂಬಿತುಳುಕುತ್ತಿದ್ದು, ನಿವಾಸಿಗಳು ಮೂಗು ಮುಚ್ಚಿಕೊಂಡು ಬದುಕುತ್ತಿದ್ದಾರೆ. ಗ್ರಾಮದ ಹಲವೆಡೆಗಳಲ್ಲಿ ಕೊಳಚೆ ನೀರು ಸಂಗ್ರಹವಾಗಿದ್ದು, ಸೊಳ್ಳೆ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ.

ಕೂಡಲೇ ಈ ಪ್ರದೇಶವನ್ನು ಪಟ್ಟಣ ಪಂಚಾಯಿತಿ ಅಥವಾ ಗ್ರಾಮ ಪಂಚಾಯಿತಿಗೆ ಪೂರ್ಣವಾಗಿ ವಹಿಸಿ, ರಸ್ತೆ, ನೀರು, ಒಳಚರಂಡಿ ವ್ಯವಸ್ಥೆಯಂತಹ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.