ADVERTISEMENT

ಹೆಚ್ಚುತ್ತಿದೆ ಮಾನವ– ಪ್ರಾಣಿ ಸಂಘರ್ಷ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 7:25 IST
Last Updated 20 ಸೆಪ್ಟೆಂಬರ್ 2017, 7:25 IST
ನರಸಿಂಹರಾಜಪುರ ತಾಲ್ಲೂಕು ಹೊಸೂರು ಗ್ರಾಮದಲ್ಲಿ ಆನೆಗಳು ಅಡಿಕೆ ತೋಟ ನಾಶ ಮಾಡಿದೆ
ನರಸಿಂಹರಾಜಪುರ ತಾಲ್ಲೂಕು ಹೊಸೂರು ಗ್ರಾಮದಲ್ಲಿ ಆನೆಗಳು ಅಡಿಕೆ ತೋಟ ನಾಶ ಮಾಡಿದೆ   

ಹೊಸೂರು (ಎನ್.ಆರ್.ಪುರ): ಪ್ರಸ್ತುತ ದಿನಗಳಲ್ಲಿ ಮಲೆನಾಡಿನ ಭಾಗದಲ್ಲಿ ಮಾನವ– ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಜೀವನೋಪಾಯಕ್ಕಾಗಿ ಹಲವು ಏಳು ಬೀಳುಗಳ ನಡುವೆಯೂ ಕೃಷಿ ಕಸುಬನ್ನು ಅನುಸರಿಸಿಕೊಂಡು ಬರುತ್ತಿದ್ದ ರೈತರಿಗೆ ಕಾಡುಪ್ರಾಣಿಗಳ ಹಾವಳಿಯಿಂದ ಅದನ್ನು ರಕ್ಷಿಸುವುದೇ ದೊಡ್ಡ ಸವಾಲಾಗಿದೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಸುಮಾರು 15 ವರ್ಷಗಳಿಂದ ಈಚೆಗೆ ತೀವ್ರತರವಾದ ಆನೆ ಹಾವಳಿ ಇರಲಿಲ್ಲ. ಆದರೆ, 15 ದಿನಗಳಿಂದ ಮತ್ತೆ ಆನೆ ಹಾವಳಿ ಪ್ರಾರಂಭವಾಗಿದ್ದು, ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನು ತುಂಡು, ತುಂಡಾಗಿ ಧರೆಗುರುಳಿಸಿದ ಪರಿಣಾಮ ಲಕ್ಷಾಂತರ ಮೌಲ್ಯದ ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ.

ತಾಲ್ಲೂಕಿನ ಬಾಳೆ ಗ್ರಾಮ ಪಂಚಾಯಿತಿಯ ಅಳೇಹಳ್ಳಿ ವ್ಯಾಪ್ತಿಯ ಹೊಸೂರು ಗ್ರಾಮ ನಿವಾಸಿ ಕಟ್ಟೆಗೌಡರ 2 ಎಕರೆ ಅಡಿಕೆ ತೋಟ ದಲ್ಲಿದ್ದ 30ಕ್ಕೂ ಅಧಿಕ ವರ್ಷದ ಫಸಲಿಗೆ ಬಂದಿದ್ದ 200ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಇದೇ 14ರ ರಾತ್ರಿ 8ರಿಂದ 10 ಆನೆಗಳ ಹಿಂಡು ಏಕಾಏಕಿ ದಾಳಿ ಮಾಡಿ ಮುರಿದು ಧರೆಗುರುಳಿಸಿವೆ.

ADVERTISEMENT

ಅದೇ ರೀತಿ 8ನೇ ಮೈಲಿಕಲ್ಲು ಗ್ರಾಮದ ಗೋವಿಂದೇಗೌಡರ 300 ಅಡಿಕೆ ಮರ, ಅರಗಿ ರವಿ ಅವರ ತೋಟದಲ್ಲಿನ 5ವರ್ಷದ 100 ಅಡಿಕೆ ಗಿಡ, ಹೆನ್ನಂಗಿ ರಾಜು ಅವರ 30ಕ್ಕೂ ಅಧಿಕ ಗಿಡ, ಶೇಖರೇ ಗೌಡರ ತೋಟದಲ್ಲಿದ್ದ ಅಡಿಕೆ ಹಾಗೂ ನೇದ್ರಬಾಳೆ, ಎಚ್.ಕೆ.ಜಗದೀಶ್ ಅವರ 150ಕ್ಕೂ ಹೆಚ್ಚು ಅಡಿಕೆ ಗಿಡ, ಹೊಸೂರು ಮಹೇಶ್ ಅವರ 50ಕ್ಕೂ ಹೆಚ್ಚು ಅಡಿಕೆ ಗಿಡ ಆನೆಗಳ ಹಿಂಡಿಗೆ ಬಲಿಯಾಗಿದೆ.

ಪ್ರಮುಖವಾಗಿ ಈ ಗ್ರಾಮದಿಂದ ಭದ್ರಾನದಿಯು ಕೇವಲ 4 ಕಿ.ಮೀ ದೂರವಿರುವುದರಿಂದ ಭದ್ರಾ ಅಭಯಾರಣ್ಯದಲ್ಲಿ ಬಿಡು ಬಿಟ್ಟಿರುವ ಆನೆಗಳು ಕೂಸಗಲ್ಲು, ಹೊಸೂರು, ಹೆನ್ನಂಗಿ, ಬೆಳ್ಳಂಗಿ, ಅಳೇಹಳ್ಳಿ ಗ್ರಾಮಗಳ ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಬೆಳಿಗ್ಗೆ ವೇಳೆ ಅರಣ್ಯ ಸೇರಿಕೊಳ್ಳುವ ಆನೆಗಳು ಸಂಜೆ 5ರ ನಂತರ ಗ್ರಾಮಗಳಿಗೆ ಬರುತ್ತವೆ.

1969–1985ರ ವರೆಗೂ ಆನೆಗಳ ಹಾವಳಿಯಿತ್ತು. ನಂತರದ ಅವಧಿಯಲ್ಲಿ ಭತ್ತದ ಬೆಳೆ ಬಂದ ಸಮಯದಲ್ಲಿ ಯಾವುದಾದರೂ ಒಂದು ಆನೆ ಬರುವುದು ನಷ್ಟ ಮಾಡುವುದು ಇತ್ತು. ಈ ಪ್ರಮಾಣದ ನಷ್ಟ ಮಾಡಿರುವುದು ಇದೇ ಮೊದಲು. ಪ್ರಸ್ತುತ ಬಿದಿರು ಹುಲುಸಾಗಿ ಬೆಳೆದಿರುವುದರಿಂದ ಆನೆ ಹಾವಳಿ ಹೆಚ್ಚಾಗಿದೆ ಎನ್ನುತ್ತಾರೆ ಗ್ರಾಮಸ್ಥ ಮಾವಿನಮನೆ ನಾಗರಾಜ್.

‘ನಮ್ಮ ಪೂರ್ವಿಕರ ಕಾಲದಿಂದಲೂ ಈ ಗ್ರಾಮದ ವ್ಯಾಪ್ತಿಯಲ್ಲಿ ವಾಸವಾಗಿದ್ದೇವೆ. ಇಲ್ಲಿ 1ಎಕರೆಯಿಂದ 4 ಎಕರೆ ಜಮೀನನ್ನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರಿದ್ದಾರೆ. ಆನೆಗಳ ಹಾವಳಿಯಿಂದ ಬೆಳೆ ನಾಶವಾಗುವುದರಿಂದ ಕೈಗೆ ಬಂದು ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದೆ.

ಅರಣ್ಯ ಇಲಾಖೆ ಯವರು ಜನವಸತಿ ಪ್ರದೇಶದಲ್ಲಿ ಆನೆಗಳ ಹಾವಳಿ ತಪ್ಪಿಸಲು ಕ್ರಮಕೈಗೊಳ್ಳಬೇಕು. ರೈತರ ಜಮೀನಿನ ಸುತ್ತಾ ಸೋಲಾರ್ ಬೇಲಿ ನಿರ್ಮಿಸಲು ಕ್ರಮಕೈಗೊಳ್ಳಬೇಕು’ ಎಂಬುದು ಹೊಸೂರು ಸುರೇಶ್ ಆಗ್ರಹಿಸುತ್ತಾರೆ.

ಆನೆಗಳ ಹಾವಳಿ ತಡೆಗಟ್ಟಲು ಕಂದಕಗಳನ್ನು ನಿರ್ಮಿಸಿದರೆ ಪ್ರಯೋಜನವಿಲ್ಲ. ಆನೆಗಳು 40 ಅಡಿ ಎತ್ತರದ ಧರೆಯನ್ನು ಹತ್ತಿದ್ದನ್ನು ನಾವು ನೋಡಿದ್ದೇವೆ. ಸೋಲಾರ್ ಬೇಲಿ ನಿರ್ಮಿಸಿದರೆ ಇವುಗಳ ಹಾವಳಿ ತಡೆಗಟ್ಟಬಹುದಾಗಿದೆ. ಆನೆಗಳ ಹಾವಳಿ ಜತೆಗೆ ಗ್ರಾಮದ ವ್ಯಾಪ್ತಿಯಲ್ಲಿ ಹುಲಿಗಳ ಸಂಖ್ಯೆಯಲ್ಲೂ ಭಾರಿ ಹೆಚ್ಚಳವಾಗಿದ್ದು, 20ಕ್ಕೂ ಹೆಚ್ಚು ಹಸುಗಳನ್ನ ತಿಂದು ಹಾಕಿವೆ ಎಂದು ಗ್ರಾಮಸ್ಥರಾದ ಎ.ಆರ್.ವಿಜಯ, ವೇಣುಗೋಪಾಲ, ಶೇಖರ್ ಗೌಡ, ನಾಗೇಶ್, ಧರ್ಮರಾಜ್, ಮಂಜುನಾಥ್, ನಾರಾಯಣ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.