ADVERTISEMENT

ವಿಧವೆಯ ಏಕಾಂಗಿ ಹೋರಾಟ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 9:45 IST
Last Updated 9 ಫೆಬ್ರುವರಿ 2018, 9:45 IST

ತರೀಕೆರೆ: ತನ್ನ ಗಂಡನ ಹೆಸರಿನಲ್ಲಿದ್ದ ಆಸ್ತಿ ತನಗೆ ದಕ್ಕಿದ್ದು, ತನ್ನ ಹೆಸರಿಗೆ ಹಕ್ಕು ನಮೂದಿಸಿ ಪಹಣಿ ನೀಡಲು ಒತ್ತಾಯಿಸಿ ಪಟ್ಟಣದಲ್ಲಿ ವಿಧವೆಯೊಬ್ಬರು ‘ನ್ಯಾಯಕ್ಕಾಗಿ ಹೋರಾಟ’ ಎಂಬ ಭಿತ್ತಿಪತ್ರ ಹಿಡಿದು ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಗುರುವಾರ ಏಕಾಂಗಿ ಹೋರಾಟ ನಡೆಸಿದರು.

ಪಟ್ಟಣದ ಸಮೀಪದ ದೋರನಾಳು ಗ್ರಾಮದ ವಾಸಿಯಾಗಿರುವ ಬಸವರಾಜೇಶ್ವರಿ ಅವರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ದಿವಂಗತ ಪತ್ರಕರ್ತ ವಿಶ್ವನಾಥ ಹಸ್ಮಕಲ್ ಅವರ ಪುತ್ರಿಯಾಗಿದ್ದು, ಪಟ್ಟಣದ ವಾಸಿ ದಿವಂಗತ ಡಿ.ಕೆ ಸುರೇಶ್ ಎಂಬುವವರ ಪತ್ನಿ ಎಂಬುದಾಗಿ ಮಾಹಿತಿ ನೀಡುತ್ತಾರೆ.

‘ತನ್ನ ಗಂಡನ ಹಾಗೂ ಅತ್ತೆ, ಮೈದುನರ ಹೆಸರಿನಲ್ಲಿದ್ದ ಜಂಟಿ ಆಸ್ತಿಯಾಗಿರುವ ನಾಗಪ್ಪ ಕಾಲೋನಿಯಲ್ಲಿರುವ 22ಗುಂಟೆ ಜಾಗವನ್ನು ಗಂಡ ತೀರಿಕೊಂಡ ನಂತರ ನನ್ನ ಹೆಸರಿಗೆ ವರ್ಗಾವಣೆಯಾಗಿದೆ. ಇದೇ ಜಮೀನಿನಲ್ಲಿರುವ ಉಳಿದ ಹಿಸ್ಸೆಯು ಗಂಡನ ಕುಟುಂಬದ ಇತರೇ ಸದಸ್ಯರೊಂದಿಗೆ ಜಂಟಿಯಾಗಿಯೇ ಮುಂದುವರಿದಿದೆ. ನನ್ನ ಹಿಸ್ಸೆಯನ್ನು ಪ್ರತ್ಯೇಕಗೊಳಿಸಿ ಪಹಣಿಯಲ್ಲಿ ನಮೂದಿಸಬೇಕಿದೆ. ಇದಕ್ಕೆ ಸಂಬಂಧಿಸಿದ ಅರ್ಜಿ ಹಾಗೂ ಎಲ್ಲ ದಾಖಲೆಗಳನ್ನು ನೀಡಿ 3 ವರ್ಷಗಳು ಕಳೆದರೂ ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆಯೇ ಹೊರತು, ನನ್ನ ಬೇಡಿಕೆ ಈಡೇರಿಲ್ಲ’ ಎಂದು ತಾಲ್ಲೂಕು ಆಡಳಿತದ ವಿರುದ್ಧ ಬಸವರಾಜೇಶ್ವರಿ ಆರೋಪಿಸುತ್ತಾರೆ.

ADVERTISEMENT

‘ತಾನು ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯಕೀಯ ಖರ್ಚಿಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದೇನೆ. ಔಷಧ ವೆಚ್ಚಕ್ಕಾಗಿ ಮಾಸಿಕ ₹ 1500 ಖರ್ಚಾಗುತ್ತಿದ್ದು, ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ದೈಹಿಕವಾಗಿ ದುಡಿಯಲು ನಿತ್ರಾಣಳಾಗಿರುವ ನಾನು, ನನ್ನ ಹಿಸ್ಸೆಯ ಆಸ್ತಿಯನ್ನು ಪಡೆದುಕೊಂಡು ನೆಮ್ಮದಿಯಿಂದ ಇರಲು ಬಯಸಿದ್ದೇನೆ’ ಎಂದು ಪತ್ರಿಕೆಗೆ ತಿಳಿಸಿದ್ದಾರೆ.

ಮಹಿಳೆ ಹೋರಾಟ ನಡೆಸುತ್ತಿದ್ದ ಸ್ಥಳಕ್ಕೆ ಉಪ ತಹಶೀಲ್ದಾರ್ ಗೋವಿಂದಪ್ಪ ಬಂದು, ತಹಶೀಲ್ದಾರರರು ರಜೆಯಲ್ಲಿದ್ದು, ಕಚೇರಿಗೆ ಹಾಜರಿ ನೀಡಿದಾಗ ವಿಷಯ ತಿಳಿಸಿ ಸಮಸ್ಯೆ ಬಗೆಹರಿಸಲು ಯತ್ನಿಸುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.