ADVERTISEMENT

ಅಂತರ್ಜಲದ ಆಳ, ನೀರಿನ ಗುಣಮಟ್ಟ ಪರೀಕ್ಷಿಸಿ

ಹೊಸದುರ್ಗ ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಗೋವಿಂದಪ್ಪ ತಾಕೀತು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 5:33 IST
Last Updated 21 ಫೆಬ್ರುವರಿ 2017, 5:33 IST

ಹೊಸದುರ್ಗ: ತಾಲ್ಲೂಕಿನ ಅಂತರ್ಜಲದ ಆಳ ಹಾಗೂ ನೀರಿನ ಗುಣಮಟ್ಟ ಪರೀಕ್ಷಿಸಬೇಕು ಎಂದು  ಶಾಸಕ ಬಿ.ಜಿ.ಗೋವಿಂದಪ್ಪ ಪಟ್ಟಣದ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಅಧಿಕಾರಿ ಕೃಷ್ಣಮೂರ್ತಿಗೆ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಪರೀಕ್ಷಿಸುವುದರಿಂದ ನೀರಿನ ಆಳ ಎಷ್ಟು ಅಡಿ ಕೆಳಗಿಳಿದಿದೆ. ಮಳೆ ಬಂದ ನಂತರ ನೀರು ಎಷ್ಟು ಅಡಿ ಮೇಲಕ್ಕೆ ಬರುತ್ತದೆ ಎಂಬುದರ ನೈಜ ಮಾಹಿತಿ ಲಭ್ಯವಾಗುತ್ತದೆ.

ಈ ಮಾಹಿತಿಯನ್ನು ಆಧಾರವಾಗಿ ಇಟ್ಟುಕೊಂಡು ತಾಲ್ಲೂಕಿನಲ್ಲಿ ಇನ್ನೊಷ್ಟು ಅಂತರ್ಜಲ ಹೆಚ್ಚಿಸುವಂತಹ ಗೋಕಟ್ಟೆ, ಬ್ಯಾರೇಜ್‌ ಕಂ ಬ್ರಿಡ್ಜ್‌, ಕೆರೆಗಳ ಅಭಿವೃದ್ಧಿ ಪಡಿಸುವಂತಹ ಕಾಮಗಾರಿ ಕೈಗೊಳ್ಳಲು ನೆರವಾಗುತ್ತದೆ ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ ಹಾಗೂ ಬಿಜೆಪಿ ಎಂಬ ಭೇದಭಾವ ಮರೆತು ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತರಲಾಗಿದೆ. ಸರ್ಕಾರದ ಕೆಲಸವನ್ನು ಅಧಿಕಾರಿಗಳು ಬೇಕಾಬಿಟ್ಟಿಮಾಡದೇ, ಕಾಯಕ ನಿಷ್ಠೆಯಿಂದ ಅನುಷ್ಠಾನಗೊಳಿಸಿದಲ್ಲಿ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ. ಕಾಮಗಾರಿಗಳ ಗುಣಮಟ್ಟ ಕಾಪಾಡದಿದ್ದಲ್ಲಿ ಕೆಲಸಕ್ಕೆ ಬಳಸಿದ ಸರ್ಕಾರದ ಹಣವೂ ವ್ಯರ್ಥವಾಗುತ್ತದೆ. ಮಳೆಗಾಲ ಆರಂಭವಾಗುವ ಮೊದಲಿಗೆ ಕೆರೆ–ಕಟ್ಟೆಗಳ ಹೂಳು ಎತ್ತಿಸಬೇಕು. ಕೆರೆ ಏರಿ ಹಾಗೂ ಕೋಡಿ ದುರಸ್ತಿ ಮಾಡಬೇಕು ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗೆ ತಾಕೀತು ಮಾಡಿದರು.

ಪಟ್ಟಣದ ನಂಜಯ್ಯನ ಕೆರೆ ದುರಸ್ತಿ ಕೈಬಿಟ್ಟು ಬಂದಿರುವ ಅನುದಾನವನ್ನು ಬೇರೆ ಕೆಲಸಕ್ಕೆ ಬಳಸಲು ಚಿಂತಿಸಬೇಕಿದೆ. ಕಾರಣ ಜನರು ಆ ಕೆರೆ ಹಾಗೂ ಕೋಡಿ ಜಾಗವನ್ನು ಒತ್ತುವರಿ ಮಾಡಿಕೊಂಡು ನಿವೇಶನ ಮಾಡಿಕೊಂಡಿದ್ದಾರೆ. ಕೆರೆ ತುಂಬಿದರೆ ಕೋಡಿ ನೀರು ಹೊರ ಹೋಗಲು ಸ್ಥಳಾವಕಾಶ ಇಲ್ಲದಂತಾಗಿದೆ. ಸ್ಮಶಾನ ಸ್ಥಳವಾಗಿದ್ದ ಕೆರೆಯೂ ಅತಿಕ್ರಮಣ ಆಗಿರುವುದು ಬೇಸರದ ಸಂಗತಿ. ಕೆರೆ ನೀರು ಹೊರ ಹೋಗಲು ರಾಜಕಾಲುವೆ ಬೇಕೇ, ಬೇಡವೇ? ಎಂಬ ಅಭಿಪ್ರಾಯವನ್ನು ಅಲ್ಲಿನ ಜನರಿಂದಲೇ ಪಡೆಯಬೇಕು. ಹಾಗೆಯೇ ಸರ್ಕಾರದ ಜಾಗ ಕಬಳಿಸಿರುವವ ವಿರುದ್ಧ ನಿರ್ದಾಕ್ಷಿಣ್ಯ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ್‌ಗೆ ಸೂಚಿಸಿದರು.

ತಾಲ್ಲೂಕಿನ ಕುಡಿಯುವ ನೀರು ಪೂರೈಕೆಗೆ ಕೋಟ್ಯಂತರ ರೂಪಾಯಿ ಅನುದಾನ ಬಂದಿದ್ದು, ಪಟ್ಟಣ ಸೇರಿದಂತೆ ತಾಲ್ಲೂಕಿನ ಯಾವ ಹಳ್ಳಿಯಲ್ಲಿಯ ಜನರಿಗೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು. ಭೂಗರ್ಭ ಶಾಸ್ತ್ರಜ್ಞರಿಂದ ನೀರಿನ ಮೂಲ ಪತ್ತೆ ಹಚ್ಚಿ ಹೊಸ ಕೊಳವೆಬಾವಿ ಕೊರೆಸಬೇಕು. ನನೆಗುದಿಗೆ ಬಿದ್ದಿರುವ ಕೊಳವೆಬಾವಿ ಯಂತ್ರೋಪಕರಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮೇ ತಿಂಗಳವರೆಗೆ ಜನ ಜಾನುವಾರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಗೆ ಮೀನಮೇಷ ಎಣಿಸಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ತಾಲ್ಲೂಕಿನ ವಿವಿಧ ಮಹಿಳಾ ಸ್ವ–ಸಹಾಯ ಸಂಘಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗಿರಿಜನ ಉಪಯೋಗಿ ಯೋಜನೆಯಡಿ ₹ 15 ಸಾವಿರದ ಚೆಕ್‌ ವಿತರಿಸಲಾಯಿತು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶಾಂತಲಾ ಗಿರೀಶ್‌, ಉಪಾಧ್ಯಕ್ಷೆ ನೇತ್ರಾವತಿ ದೇವರಾಜು, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಿ.ಟಿ.ಅಜ್ಜಪ್ಪ, ಕೆ.ಅನಂತ, ಚೇತನಾ ಪ್ರಸಾದ್‌, ಮಮತಾ ಕುಮಾರಸ್ವಾಮಿ, ವಿಶಾಲಾಕ್ಷಿ ನಟರಾಜು, ವಿಜಯಲಕ್ಷ್ಮಿ ಪ್ರಕಾಶ್‌, ತಹಶೀಲ್ದಾರ್‌ ಮಲ್ಲಿಕಾರ್ಜುನ್‌, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತೇಶ್‌ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.