ADVERTISEMENT

ಅವಸಾನದತ್ತ ಸಾಗುತ್ತಿದೆ ಮಟ್ಟಲಗೆರೆ ಕೆರೆ

​ಪ್ರಜಾವಾಣಿ ವಾರ್ತೆ
Published 19 ಮೇ 2017, 5:22 IST
Last Updated 19 ಮೇ 2017, 5:22 IST
ಚಳ್ಳಕೆರೆ ತಾಲ್ಲೂಕಿನ ಮಟ್ಟಲಗೆರೆ ಕೆರೆಯ ಕೋಡಿ ಮತ್ತು ತೂಬಿನ ಕಲ್ಲುಗಳನ್ನು ಕಿಡಿಗೇಡಿಗಳು ಕಿತ್ತುಹಾಕಲಾಗಿದೆ
ಚಳ್ಳಕೆರೆ ತಾಲ್ಲೂಕಿನ ಮಟ್ಟಲಗೆರೆ ಕೆರೆಯ ಕೋಡಿ ಮತ್ತು ತೂಬಿನ ಕಲ್ಲುಗಳನ್ನು ಕಿಡಿಗೇಡಿಗಳು ಕಿತ್ತುಹಾಕಲಾಗಿದೆ   

ಚಳ್ಳಕೆರೆ: ತಾಲ್ಲೂಕಿನ ಬೆಳಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಟ್ಟಲಗೆರೆ ಕೆರೆಯ ಕೋಡಿ ಮತ್ತು ತೂಬಿನ ಕಲ್ಲುಗಳಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದು, ರೈತರ ಜೀವನಾಡಿ ಯಾಗಿರುವ ಕೆರೆ ಅವಸಾನದತ್ತ ಸಾಗಿದೆ.

ಕೆರೆ 300 ಎಕರೆ ಹೊಂದಿದೆ. ಉತ್ತಮ ಮಳೆಯಾದರೆ ಇದರಲ್ಲಿ ಸಂಗ್ರಹವಾಗುವ ನೀರು ಸುತ್ತಮುತ್ತಲಿನ ನೂರಾರು ಎಕರೆ ಕೃಷಿ ಭೂಮಿಯ ಅಂತರ್ಜಲ ಮಟ್ಟ ಹೆಚ್ಚಿಸಲು ನೆರವಾಗಲಿದೆ.

ಆದರೆ, ಕೆಲವು ಕಿಡಿಗೇಡಿಗಳು ಕೋಡಿಯ ಕಲ್ಲುಗಳನ್ನು ಕಿತ್ತುಕೊಂಡು ಹೋಗಿ ಮನೆ ಹಾಗೂ ತಡೆಗೋಡೆ ನಿರ್ಮಾಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಕೆರೆ ಅವಸಾನದತ್ತ ಸಾಗುತ್ತಿದೆ ಎನ್ನುತ್ತಾರೆ ಗ್ರಾಮದ ಪಟೇಲ್‌ ಗೋಪಿನಾಥ್‌.

ADVERTISEMENT

ಜಡೇಕುಂಟೆ, ಮಟ್ಟಲಗೆರೆ ಹಟ್ಟಿ, ನಾರಾಯಣಪುರ, ಬೆಳಗೆರೆ, ಯಲಗಟ್ಟೆ ಸೇರಿದಂತೆ ಸುತ್ತಮುತ್ತಲಿನ ಹಲವು ಹಳ್ಳಿಗಳ ಕೃಷಿ ಚಟುವಟಿಕೆಗಳಿಗೆ ಈ ಕೆರೆ ಆಧಾರವಾಗಿದೆ. ಅಂತರ್ಜಲ ಮಟ್ಟ ಹೆಚ್ಚಾಗುವುದರಿಂದ ಗ್ರಾಮದ ಟ್ಯಾಂಕ್‌ಗಳಿಗೆ ನೀರು ಸರಬರಾಜು ಮಾಡಲು ಅವಕಾಶವಿದೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಕೆ.ಟಿ.ನಿಜಲಿಂಗಪ್ಪ.

ಗ್ರಾಮಗಳ ಕೆರೆ, ಗೋಕಟ್ಟೆ ಮತ್ತು ಚೆಕ್‌ ಡ್ಯಾಂಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಕೆಲಸಗಳು ನಡೆಯುತ್ತಿಲ್ಲ. ಕೆರೆ ಉಳಿಸಲು ಸ್ಥಳೀಯ ಆಡಳಿತವೂ ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿ ಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಗ್ರಾಮದ ಹಲವು ಚೆಕ್‌ಡ್ಯಾಂಗಳನ್ನು ಕಿಡಿಗೇಡಿಗಳು ಜಖಂಗೊಳಿಸಿದ್ದಾರೆ. ಕೆರೆ ಏರಿಯ ಫಲವತ್ತಾದ ಮಣ್ಣನ್ನೂ ಅಗೆದು ಸಾಗಿಸುವ ದಿನ ಬರಬಹುದು. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯ್ತಿ ಸದಸ್ಯ ಗೋಪಾಲಪ್ಪ ಆಗ್ರಹಿಸಿದ್ದಾರೆ.

ಈ ಹಿಂದೆ ಉತ್ತಮ ಮಳೆಯಾದಾಗ ಮಟ್ಟಲಗೆರೆ ಕೆರೆಯಲ್ಲಿ ನೀರು ತುಂಬಿ ಕೋಡಿ ಬಿದ್ದಿರುವ ಉದಾಹರಣೆಗಳಿವೆ. ಈ ಕೆರೆ ಮೀನು ಸಾಕಾಣಿಕೆಗೂ ಹೆಸರುವಾಸಿಯಾಗಿದೆ. ಕೆರೆ ಸಂಜೀವಿನಿ ಯೋಜನೆಯಡಿ ಈಚೆಗೆ ಕೆರೆ ಏರಿ ಮೇಲಿನ ಜಂಗಲ್‌ ತೆರವುಗೊಳಿಸಲಾಗಿತ್ತು.

ರಾಜಕಾರಣಿ ಬಿ.ಎಲ್‌.ಗೌಡರು ತಮ್ಮ ಕಾಲದಲ್ಲಿ ಕಾಳಜಿ ವಹಿಸಿ ಕೆರೆಯ ಅಭಿವೃದ್ಧಿಗೆ ಒತ್ತು ನೀಡಿದ್ದರು. ಆದರೆ, ಈಗ ನೀರಿನ ಮೂಲ ಉಳಿಸಿಕೊಳ್ಳಲು ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ಗ್ರಾಮದ ಹೋರಿ ರಂಗಸ್ವಾಮಿ ಆರೋಪಿಸಿದ್ದಾರೆ.

*

ಕೆರೆ, ಗೋಕಟ್ಟೆ, ಚೆಕ್‌ಡ್ಯಾಂಗಳನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಂಡು ನೀರಿನ ಮೂಲ ಸಂರಕ್ಷಿಸಲಾಗುವುದು
ಬಿ.ಪಿ. ಪ್ರಕಾಶ್‌ಮೂರ್ತಿ
ಜಿಲ್ಲಾ ಪಂಚಾಯ್ತಿ ಸದಸ್ಯ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.