ADVERTISEMENT

ಅಸೂಕ್ಷ್ಮಮತಿಗಳು ‘ಅನ್ನಭಾಗ್ಯ’ ವಿರೋಧಿಗಳು

‘ಸಾಮಾಜಿಕ ಸಂಘರ್ಷ ಸಮಿತಿ’ ಸಂವಾದದಲ್ಲಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಟೀಕೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2015, 9:04 IST
Last Updated 3 ಆಗಸ್ಟ್ 2015, 9:04 IST

ಚಿತ್ರದುರ್ಗ:  ‘ಹಸಿವು, ಬಡತನದ ನೋವನ್ನು ಅರಿಯದಿರುವ ಅಸೂಕ್ಷ್ಮ ಮನಸ್ಸಿನವರು ಹಸಿದವರಿಗೆ ಅನ್ನ ನೀಡುವಂತಹ ‘ಅನ್ನಭಾಗ್ಯ’ ಯೋಜನೆ ಯನ್ನು ವಿರೋಧಿಸುತ್ತಿದ್ದಾರೆ’ ಎಂದು ಚಿಂತಕ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ‘ಸಾಮಾಜಿಕ ಸಂಘರ್ಷ ಸಮಿತಿ’ ಆಯೋಜಿಸಿದ್ದ ‘ಅನ್ನಭಾಗ್ಯ ಏನು? ಎತ್ತ?’ ಎಂಬ ವಿಷಯ ಕುರಿತು ನಡೆದ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅನ್ನಬಾಗ್ಯ ಟೀಕೆ’ ಮುಗಿದಿದೆ ಎನ್ನಿಸುತ್ತಿದ್ದರೂ, ಅದು ಅನ್ಯ ವಿಷಯದ ಮೇಲಾಟದಿಂದ ಮರೆಗೆ ಸರಿದಿದೆ. ಈ ಕುರಿತು ಮುಂದುವರಿಯುವ ಟೀಕೆಗಳನ್ನು ಎದುರಿಸುವುದಕ್ಕಾಗಿ ಇಂಥ ಜಾಗೃತಿ ಕಾರ್ಯಕ್ರಮ ಅಗತ್ಯವಾಗಿವೆ’ ಎಂದರು.

‘ಯಾವಾಗಲೂ ಬಡವರಪರ ಯೋಜನೆಗಳು ಘೋಷಣೆಯಾದರೂ, ಬೆಟ್ಟದಟ್ಟು ಅಸಹನೆ ವ್ಯಕ್ತವಾಗುತ್ತದೆ. ಜನಾರ್ದನ ಪೂಜಾರಿ ಸಾಲ ಮನ್ನಾ ಘೋಷಿಸಿದ ವೇಳೆ, ಅದರ ಫಲಾನುಭವಿ ಗಳಾದವರು ಇಂದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಉದ್ಯೋಗ ಕೊಡಿಸಿ, ಸುಖವಾಗಿದ್ದಾರೆ. ಆದರೂ, ಪೂಜಾರಿ ಸಾಲದಿಂದ ಬ್ಯಾಂಕ್ ದಿವಾಳಿಯಾದವು ಎಂದು ಮಾತನಾಡುತ್ತಾರೆ’ ಎಂದು ಟೀಕಿಸಿದರು.

‘ಬೋಗಸ್ ಬಿಪಿಎಲ್ ಕಾರ್ಡ್ ಹೊಂದಿರುವವರು ಮಾತ್ರ ‘ಅನ್ನ ಭಾಗ್ಯ’ದ ಅಕ್ಕಿ ಮಾರಿಕೊಳ್ಳುತ್ತಿದ್ದಾರೆ. ಸಾವಿರ ತೆಂಗಿನ ತೋಟದ ಮಾಲೀಕರಿಗೆ ಪಡಿತರ ಕಾರ್ಡ್ ದೊರೆಯುತ್ತದೆ. ಆದರೆ, ವಿಳಾಸವಿಲ್ಲ, ಗುರುತಿನ ಚೀಟಿಯಿಲ್ಲ ಎಂಬ ನೆಪದೊಂದಿಗೆ ಬಡ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ಸಿಗುವುದೇ ಕಷ್ಟವಾಗಿದೆ. ನಮ್ಮ ನೌಕರ ವರ್ಗ ಯಾಕೆ ಹೀಗಾಗಿದೆ’ ಎಂದು ಪ್ರಶ್ನಿಸಿದರು.

‘ವಾರನ್ನ ಉಂಡು ಬೆಳೆದ ಭೈರಪ್ಪ, ಬಡವರ ಹಸಿವನ್ನು ಬರೆದ ಕುಂವಿ ಯಂತಹವರು, ತಮ್ಮ ಬಡತನದ ದಿನಗಳನ್ನು ನೆನಪಿಸಿಕೊಳ್ಳ­ದಿರುವಷ್ಟು ಅಸೂಕ್ಷ್ಮರಾಗಿದ್ದಾರೆ. ಅದಕ್ಕಾಗಿಯೇ ಅನ್ನಭಾಗ್ಯವನ್ನು ಅವರು ಟೀಕಿಸುತ್ತಾರೆ. ಅವರ ಟೀಕೆಗೆ ಪ್ರತಿಕ್ರಿಯೆ­ಗಳು ವ್ಯಕ್ತವಾದ ಮೇಲೆ ಜವರೇಗೌಡರು, ಕುಂವಿ, ನಾವು ಹಾಗೆ ಹೇಳಿಲ್ಲ ಎಂದು ತಿದ್ದಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ, ಭೈರಪ್ಪವರಿಗೆ ಮಾತ್ರ ಜ್ಞಾನೋದಯ ವಾಗದೇ, ಆ ಹೇಳಿಕೆಗೇ ಅಂಟಿಕೊಂಡಿ ದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಮಾತನಾಡಿ, ‘ಸಿದ್ದರಾಮಯ್ಯ ಸರ್ಕಾರ ಅಹಿಂದ ಪರವಷ್ಟೇ ಯೋಜನೆ ರೂಪಿಸುತ್ತದೆ ಎಂದು ಟೀಕಿಸುತ್ತಾರೆ. ಆದರೆ, ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿಯಂತಹ ಯೋಜನೆಗಳನ್ನು ಕೇವಲ ಅಹಿಂದ ವರ್ಗಗಳಷ್ಟೇ ಅನುಭ ವಿಸುತ್ತಿವೆಯೇ’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ 1.25 ಕೋಟಿ ಬಿಪಿಎಲ್ ಕುಟುಂಬಗಳಿವೆ. 4 ಕೋಟಿ ಜನಸಂಖ್ಯೆ ಇದೆ. 2014-15ರ ಬಜೆಟ್‌ನಲ್ಲಿ ‘ಅನ್ನಭಾಗ್ಯ’ಕ್ಕಾಗಿ ₨ 4,500 ಕೋಟಿ ತೆಗೆದಿಡಲಾಗಿತ್ತು. ಖರ್ಚಾಗಿದ್ದು ಮಾತ್ರ ₨ 2,500 ಕೋಟಿ. ಆದರೆ, ಕೇಂದ್ರ ಸರ್ಕಾರ 2014ರಲ್ಲಿ ಕಾರ್ಪೊರೇಟ್ ಕಂಪೆನಿಗಳ ₨ 42 ಲಕ್ಷ ಕೋಟಿ ತೆರಿಗೆ ಮನ್ನಾ ಮಾಡಿದೆ. ಅನ್ನಭಾಗ್ಯ ವಿರೋಧಿ ಸುವವರು ಈ ಅಂಕಿಅಂಶಗಳನ್ನು ಹೋಲಿಸಿ ನೋಡಲಿ’ ಎಂದರು.

‘2013ರಲ್ಲಿ ಅಮೆರಿಕ ‘ಫುಡ್ ಸ್ಟಾಂಪ್’ ಕಾರ್ಯಕ್ರಮದಲ್ಲಿ ಆಹಾರ ಉತ್ಪಾದನೆಗಾಗಿ ರೈತರಿಗೆ 76 ಸಾವಿರ ಶತಕೋಟಿ ಡಾಲರ್ (₨4.5 ಲಕ್ಷ ಕೋಟಿ) ಸಬ್ಸಿಡಿ ನೀಡಿದೆ. ಆದರೆ, ನಮ್ಮ ರಾಜ್ಯದಲ್ಲಿ 4 ಕೋಟಿ ಬಡವರ ಹಸಿವು ನೀಗಿಸಲು ₨ 2.5 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಅನ್ನಭಾಗ್ಯದ ವಿಚಾರದಲ್ಲಿ ಅಮೆರಿಕವನ್ನು ಉದಾಹರಿ ಸುವ ಭೈರಪ್ಪನವರು ಈ ಹೋಲಿಕೆ ಯನ್ನೊಮ್ಮೆ ಪರಾಮರ್ಶಿಸಲಿ’ ಎಂದರು.

‘ಅನ್ನಭಾಗ್ಯದ ಬದಲು ಉದ್ಯೋಗ ಭಾಗ್ಯ ಕೊಡಿ. ಮೀನು ಕೊಡುವ ಬದಲು, ಮೀನು ಹಿಡಿಯುವುದನ್ನು ಕಲಿಸಿ ಎಂದು ಒತ್ತಾಯಿಸುವವರಿಗೆ, ಹಸಿದವರಿಗೆ ಸಮುದ್ರದಲ್ಲಿ (ನೀರಿನಲ್ಲಿ) ಇಳಿದು ಮೀನು ಹಿಡಿಯಲು ಶಕ್ತಿ ಬೇಕು ಎಂಬುದನ್ನು ತಿಳಿಯವುದು ಒಳ್ಳೆಯದು. ಏಕೆಂದರೆ ನೀರಿನ ಹೊಡೆತ ಹಸಿವು ಹೆಚ್ಚು ಮಾಡುತ್ತದೆ. ಹಾಗಾಗಿ, ಮೊದಲ ಮೀನು ತಿನ್ನಿಸಿ, ಹಸಿವು ನೀಗಿಸಿ ನಂತರ ಮೀನು ಹಿಡಿಯುವುದನ್ನು ಕಲಿಸಬೇಕು’ ಎಂದು ತಿರುಗೇಟು ನೀಡಿದರು.

ಸಾಮಾಜಿಕ ಸಂಘರ್ಷ ಸಮಿತಿ ಸಂಚಾಲಕ ಕಸವನಹಳ್ಳಿ ಶಿವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಸಿ.ಕೆ.ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಅಹಿಂದ ಮುಖಂಡ ಮುರುಘ ರಾಜೇಂದ್ರ ಒಡೆಯರ್, ಜಿಲ್ಲಾ ಯಾದವರ ಸಂಘದ ಅಧ್ಯಕ್ಷ ಸಿ.ಮಹಾಲಿಂಗಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ಈ.ಮಹೇಶ್ ಬಾಬು, ಅಣ್ಣಪ್ಪಸ್ವಾಮಿ, ವಿ.ಬಸವರಾಜು, ತಿಪ್ಪೇಸ್ವಾಮಿ, ಗೋವಿಂದಪ್ಪ, ಲಿಂಗಣ್ಣ ಜಂಗಮರಹಳ್ಳಿ ಮೊದಲಾದವರು ಇದ್ದರು.


‘ಉದ್ಯೋಗ ಭಾಗ್ಯ’ಕ್ಕೆ ‘ಅನ್ನಭಾಗ್ಯ’ ಪೂರಕ
‘ಅನ್ನಭಾಗ್ಯ’ಕ್ಕೆ ವಿನಿಯೋಗಿಸು ತ್ತಿರುವ ಹಣವನ್ನು ಭೈರಪ್ಪ ಅವರಂಥ ಸಾಹಿತಿಗಳು ದೇಶದ ಆರ್ಥಿಕತೆಯ ಏರುಪೇರಿಗೆ ಹೋಲಿಸುತ್ತಾರೆ. ಆದರೆ, ಭಾರಿ ಉದ್ಯಮಗಳಿಗೆ ನೀಡುವ ಲಕ್ಷಾಂತರ ಕೋಟಿಗಳ ತೆರಿಗೆ ಸಬ್ಸಿಡಿ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ. ಉದ್ಯೋಗ ಭಾಗ್ಯ ನೀಡಿ ಎಂದು ಕೇಳುವವರಿಗೆ ‘ಅನ್ನಭಾಗ್ಯ’ ಎನ್ನುವುದು ಉದ್ಯೋಗ ಭಾಗ್ಯಕ್ಕೆ ಪೂರಕ ಎಂಬುದನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಚಿಂತಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT