ADVERTISEMENT

ಆದಾಯ ನೀಡುವ ರಾಸು ರಕ್ಷಿಸಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 10:21 IST
Last Updated 25 ಅಕ್ಟೋಬರ್ 2016, 10:21 IST

ಚಿತ್ರದುರ್ಗ: ರೈತರಿಗೆ ಆದಾಯ ನೀಡುವ ದನಕರುಗಳನ್ನು ಕಾಲುಬಾಯಿ ರೋಗದಿಂದ ರಕ್ಷಿಸುವ ಸಲುವಾಗಿ ಜಿಲ್ಲೆಯಾದ್ಯಂತ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ತಿಳಿಸಿದರು.

ತಾಲ್ಲೂಕಿನ ತಮಟಕಲ್ಲು ಗ್ರಾಮದಲ್ಲಿ ಸೋಮವಾರ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಾನುವಾರಿಗೆ ಲಸಿಕೆ ಹಾಕುವ ರಾಷ್ಟ್ರೀಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಯಾಗದೆ, ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ರೈತರಿಗೆ ಸಾಕಷ್ಟು ತೊಂದರೆಯಾಗಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಅಲ್ಪ ಸ್ವಲ್ಪ ಆದಾಯ ನೀಡುವ ಜಾನುವಾರಿನ ರಕ್ಷಣೆ ಅತ್ಯಗತ್ಯ. ಆದ್ದರಿಂದ ರೈತರು ಕಾಲುಬಾಯಿ ರೋಗ ತಡೆಗಟ್ಟಲು ತಮ್ಮ ಜಾನುವಾರಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಕೃಷಿ ಮತ್ತು ತೋಟಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಹಿಂದೆಲ್ಲಾ ನಾಟಿ ಪದ್ಧತಿ ಮೂಲಕ ಜಾನುವಾರು ಮತ್ತು ಕುರಿಗಳಿಗೆ ರೋಗ ಹರಡದಂತೆ ರಕ್ಷಣೆ ನೀಡಲಾಗುತ್ತಿತ್ತು. ಕಾಲಕ್ರಮೇಣ ಆಧುನಿಕತೆಗೆ ತಕ್ಕಂತೆ ವೈಜ್ಞಾನಿಕ ರೀತಿಯಲ್ಲಿ ಲಸಿಕೆ ಹಾಕುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಗುರುಮೂರ್ತಿ ಮಾತನಾಡಿ, ಬರಗಾಲದಲ್ಲಿ ರಾಸುಗಳ ರಕ್ಷಣೆ ಕಷ್ಟಕರ. ಸಮರ್ಪಕವಾಗಿ ಮೇವಿಲ್ಲದೆ, ತೊಂದರೆ ಉಂಟಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ಭಾಗದಲ್ಲಿ ಇನ್ನು ದನಕರುಗಳ ಆರೋಗ್ಯ ಉತ್ತಮ ಸ್ಥಿತಿಯಲ್ಲಿ ಇರುವುದು ಆಶ್ಚರ್ಯದ ಸಂಗತಿ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸುಮಾರು 236 ರಾಸುಗಳಿಗೆ ಲಸಿಕೆ ಹಾಕಲಾಯಿತು. ಗ್ರಾಮ ಪಂಚಾಯ್ತಿ ಸದಸ್ಯೆ ಸಾಕಮ್ಮ ಅಧ್ಯಕ್ಷತೆ ವಹಿಸಿದ್ದರು. ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಪ್ರಸನ್ನಕುಮಾರ್, ಸಹಾಯಕ ನಿರ್ದೇಶಕ ಬೊಮ್ಮಯ್ಯ, ವಿಸ್ತರಣಾಧಿಕಾರಿ ಡಾ.ಸಿ.ತಿಪ್ಪೇಸ್ವಾಮಿ, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಗ್ರಾಮದ ಮುಖಂಡ ಸ್ವಾಮಿ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.