ADVERTISEMENT

ಇಂದು ಚಿತ್ರದುರ್ಗಕ್ಕೆ ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 19 ಮೇ 2017, 5:18 IST
Last Updated 19 ಮೇ 2017, 5:18 IST

ಚಿತ್ರದುರ್ಗ: ರಾಜ್ಯವ್ಯಾಪಿ ಜೂ 29 ರವರೆಗೆ ಜನಸಂಪರ್ಕ ಅಭಿಯಾನ ಕೈಗೊಂಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮೇ 19 ರಂದು ಚಿತ್ರದುರ್ಗ ಜಿಲ್ಲೆ ಪ್ರವಾಸ ಕೈಗೊಂಡಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ನವೀನ್‌ ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬರ ಪರಿಸ್ಥಿತಿ ಕುರಿತು ಯಡಿಯೂರಪ್ಪ ಪರಿಶೀಲನೆ ನಡೆಸಲಿದ್ದಾರೆ. ರೈತರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯ ಸರ್ಕಾರ ಎಷ್ಟರ ಮಟ್ಟಿಗೆ ಜನರಿಗೆ ತಲುಪಿಸಿದೆ ಎಂಬುದನ್ನು ತಿಳಿದುಕೊಳ್ಳ ಲಿದ್ದಾರೆ’ ಎಂದು ಹೇಳಿದರು.

ಚಿತ್ರದುರ್ಗದಲ್ಲಿ 2–3 ಕಡೆ ಗೋಶಾಲೆ ಹಾಗೂ ಕೆರೆಗಳಿಗೆ ಭೇಟಿ ನೀಡಿ ರೈತ ಮುಖಂಡರ ಜತೆ ಚರ್ಚಿಸಲಿದ್ದಾರೆ.  ನಂತರ ಅನ್ನದಾತ ರೈತ ಹಾಗೂ ಜನಸಾಮಾನ್ಯರ ಸಮಸ್ಯೆ ತಿಳಿದುಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಕೊಡಿಸುವುದಕ್ಕಾಗಿ ಈ ಅಭಿಯಾನಕ್ಕೆ ಮುಂದಾಗಿದ್ದಾರೆ ಎಂದರು.

ADVERTISEMENT

ಎಲ್ಲ ಜಿಲ್ಲೆಗಳಲ್ಲೂ ದಲಿತರ ಕಾಲೊನಿಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸ್ಥಿತಿಗತಿ ಅರಿಯುವುದು, ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರಕ್ಕೆ ಗೌರವ ಸಮರ್ಪಣೆ, ಸಾರ್ವಜನಿಕ ಸಭೆ, ಕಾರ್ಯಕರ್ತರ ಸಭೆ ನಡೆಸುವುದು ಈ ಜನಸಂಪರ್ಕ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ವೈಫಲ್ಯಗಳನ್ನು ಯಡಿಯೂರಪ್ಪ ಜನರಿಗೆ ತಿಳಿಸಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತದಾರರು ಪಾಠ ಕಲಿಸಲಿದ್ದಾರೆ ಎಂದರು.
ಬಿಜೆಪಿ ಮುಖಂಡರಾದ ಜಿ.ಎಂ. ಸುರೇಶ್, ಮಲ್ಲಿಕಾರ್ಜುನ್, ಮುರುಳಿ, ಡಿ.ರಮೇಶ್, ರತ್ನಮ್ಮ, ದಗ್ಗೆ ಶಿವ ಪ್ರಕಾಶ್, ನಾಗರಾಜ್‌ಬೇಂದ್ರೆ, ನರೇಂದ್ರ, ಸಂಪತ್‌ಕುಮಾರ್ ಇದ್ದರು.

ಇಂದಿನ ಕಾರ್ಯಕ್ರಮ

ಬಿ.ಎಸ್.ಯಡಿಯೂರಪ್ಪ ಅವರು ಇಂದು ಬೆಳಿಗ್ಗೆ 8.30 ರಿಂದ 9.30 ರವರೆಗೆ ನಗರದ ಕೆಳಗೋಟೆ ಬೇಡರಕಣ್ಣಪ್ಪ ದೇವಸ್ಥಾನದ ಸಮೀಪವಿರುವ ಪರಿಶಿಷ್ಠ ಜಾತಿಯ ರುದ್ರಮುನಿ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಲಿದ್ದಾರೆ.

ಬೆಳಿಗ್ಗೆ 10.15 ಕ್ಕೆ ನಗರಸಭೆ ಮುಂಭಾಗವಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ, ಬೆಳಿಗ್ಗೆ 10.30 ರ ನಂತರ 40 ಮಂದಿ ಪಕ್ಷದ ಹಿರಿಯರ ಜೊತೆ ಸಮಾ ಲೋಚನೆ, ಕೊಳೆಗೇರಿ ಪ್ರದೇಶದಲ್ಲಿ ಮೂಲ ಸೌಕರ್ಯವಿಲ್ಲದೆ ವಾಸಿಸುತ್ತಿರುವ ನಿವಾಸಿಗಳ ಸ್ಥಿತಿಗತಿ ಕುರಿತು ಸಮಾಲೋಚನೆ, ಬೆಳಿಗ್ಗೆ 11 ರಿಂದ 1.30 ರವರೆಗೆ ಗೋಶಾಲೆಗಳಿಗೆ ಭೇಟಿ ನೀಡಿದ ನಂತರ ರೈತ ಮುಖಂಡರೊಂದಿಗೆ ಚರ್ಚಿಸಲಿದ್ದಾರೆ.

ಮಧ್ಯಾಹ್ನ 3 ರಿಂದ 4 ರವರೆಗೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಭೆ ನಡೆಸುವರು. ಸಂಜೆ 5 ಕ್ಕೆ ಹೊಳಲ್ಕೆರೆಯ ಕೊಟ್ರೆ ನಂಜಪ್ಪ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆ ನಡೆಸುವರು ಎಂದು ಪಕ್ಷದ ಜಿಲ್ಲಾಧ್ಯಕ್ಷ ನವೀನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.