ADVERTISEMENT

ಎರಡುಕೆರೆ ಗ್ರಾಮದಲ್ಲಿ ಶಾಸನಗಳು ಪತ್ತೆ

ಪರಿಶೀಲನೆ ವೇಳೆ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ

​ಪ್ರಜಾವಾಣಿ ವಾರ್ತೆ
Published 27 ಮೇ 2018, 12:59 IST
Last Updated 27 ಮೇ 2018, 12:59 IST

ಚಿತ್ರದುರ್ಗ: ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗ ಅನಂತಪುರ ಜಿಲ್ಲೆಯ ಎರಡುಕೆರೆ ಗ್ರಾಮದಲ್ಲಿ 12ನೇ ಶತಮಾನದ ಮೂರು ಶಾಸನಗಳು ಪತ್ತೆಯಾಗಿವೆ.

ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಗಡಿಭಾಗದ ಓಬಳಾಪುರ ಹಾಗೂ ಎರಡುಕೆರೆ ಗ್ರಾಮಗಳಲ್ಲಿರುವ ಶಾಸನಗಳನ್ನು ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಶನಿವಾರ ಪರಿಶೀಲಿಸಿದರು.

ಎರಡುಕೆರೆ ಗ್ರಾಮದಲ್ಲಿ ಒಂದು ದಾನ ಶಾಸನ, ಇನ್ನೆರಡು ವೀರಗಲ್ಲು ಶಾಸನ ಸಿಕ್ಕಿದೆ. 50ಕ್ಕೂ ಹೆಚ್ಚು ಸಾಲುಗಳಿದ್ದು, ಹಳೆಗನ್ನಡ ಲಿಪಿಯಲ್ಲಿದೆ. ಉತ್ಖನನ ಮಾಡಿ ಅಧ್ಯಯನ ಪೂರ್ಣಗೊಳಿಸಿದ ನಂತರ ಅದರಲ್ಲಿರುವ ವಿಷಯ ಸ್ಪಷ್ಟವಾಗಲಿದೆ ಎಂದು ರಾಜಶೇಖರಪ್ಪ ಹೇಳಿದರು.

ADVERTISEMENT

ಇಲ್ಲಿನ ಶಂಕರಲಿಂಗ ದೇಗುಲದ ಮುಂಭಾಗದಲ್ಲಿನ ಶಾಸನಗಳ ಕುರಿತು ಸಂಶೋಧನೆ ಮುಂದುವರಿಯಲಿದೆ. ಮುಂದಿನ ಒಂದೆರಡು ತಿಂಗಳ ಒಳಗೆ ಸಂಪೂರ್ಣ ಮಾಹಿತಿ ತಿಳಿಯಲು ಪ್ರಯತ್ನಿಸಲಾಗುವುದು ಎಂದರು.

ಓಬಳಾಪುರದ ಸಿರಿವಾಳ ಸಿದ್ದರಾಮೇಶ್ವರ ದೇಗುಲದ ನವರಂಗದ ಒಳ ಚಾವಣಿಯಲ್ಲಿರುವ ಉಬ್ಬು ಶಿಲ್ಪಗಳು ಭೂಚೋಜ ಎಂಬ ಶಿಲ್ಪಿಯಿಂದ ನಿರ್ಮಿತವಾದವು ಎಂದು ಈಗ ದೊರೆತಿರುವ ಹೊಸ ಶಾಸನದಿಂದ ತಿಳಿದು ಬಂದಿದೆ ಎಂದು ಹೇಳಿದರು.

ಸಿದ್ದರಾಮೇಶ್ವರ ದೇಗುಲದಲ್ಲಿನ ಶಾಸನದ ಕುರಿತು 1903ರಲ್ಲಿ ಬಿ.ಎಲ್. ರೈಸ್ ಗ್ರಂಥವೊಂದರಲ್ಲಿ ಪ್ರಕಟಿಸಿದ್ದರು. ಇಲ್ಲಿನ ಶಾಸನಗಳ ಕುರಿತು ಅಂದೇ ಅವರು ಉಲ್ಲೇಖಿಸಿದ್ದರು ಎಂದರು.

ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶಾಂತವೀರ ಸ್ವಾಮೀಜಿ, ಸಂಶೋಧನಾ ಸಹಾಯಕ ಇಂದುಶೇಖರ್, ಕುಂಚಿಟಿಗ ಸಮುದಾಯದ ಯುವ ಮುಖಂಡ ಈಶ್ವರ್ ದಗ್ಗೆ, ಸಿದ್ದರಾಮೇಶ್ವರ ದೇಗುಲದ ಅರ್ಚಕ ರಾಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.