ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ; ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ

ಅಧಿಕಾರಿಗಳಿಗೆ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 5:10 IST
Last Updated 23 ಮಾರ್ಚ್ 2017, 5:10 IST

ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ನಿಯೋಜಿತ ಅಧಿಕಾರಿಗಳು ಜಾಗೃತೆಯಿಂದ ಕರ್ತವ್ಯ ನಿರ್ವಹಿಸಿ, ಮರುಪರೀಕ್ಷೆಯಂತಹ ಅವಘಡಗಳಿಗೆ ಅವಕಾಶ ನೀಡದಂತೆ ಎಚ್ಚರವಹಿಸಿ’ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಪಿ.ಯು ಪರೀಕ್ಷೆಯಲ್ಲಿ ನಡೆದಿರುವ ಸಣ್ಣಪುಟ್ಟ ನ್ಯೂನತೆಗಳನ್ನು ಗಮನದಲ್ಲಿ ಟ್ಟುಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆ ಯನ್ನು ನಿಷ್ಕಳಂಕವಾಗಿ, ಸಾಂಗವಾಗಿ ನಡೆಸಲು’ ಅಧಿಕಾರಿಗಳಿಗೆ ಸೂಚಿಸಿದರು.

‘ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 23,235 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಲಿದ್ದು, ಇದಕ್ಕಾಗಿ ಜಿಲ್ಲೆಯಾದ್ಯಂತ 92 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತದೆ’ ಎಂದು ಅವರು ತಿಳಿಸಿದರು.

ಇದೇ 29 ಮತ್ತು 30ರಂದು ಯುಗಾದಿ ಹಬ್ಬವಿದ್ದು, ಅದಕ್ಕಾಗಿ ಸರ್ಕಾರಿ, ಖಾಸಗಿ ಬಸ್ಸುಗಳ ಚಾಲಕರು ರಜೆ ಮೇಲೆ ಹೋಗುವ ಸಾಧ್ಯತೆ ಇರುತ್ತದೆ. 30ರಂದು ಪರೀಕ್ಷೆ ಪ್ರಾರಂಭವಾಗುವುದರಿಂದ, ವಿದ್ಯಾರ್ಥಿ ಗಳಿಗೆ ಮತ್ತು ಸಿಬ್ಬಂದಿಗೆ ತುಂಬಾ ತೊಂದರೆಯಾಗುತ್ತದೆ. ಚಾಲಕರು, ಮಕ್ಕಳ ಬಗ್ಗೆ ಪ್ರೀತಿ ತೋರಿಸಿ, ರಜೆಗಳನ್ನು ಹಾಕದೇ, ಎಂದಿನಂತೆ ಕೆಲಸಕ್ಕೆ ಹಾಜರಾಗಿ, ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದರು.

ವಾಹನ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಗಮನದಲ್ಲಿಟ್ಟುಕೊಂಡು ಪೋಷಕರು ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಮನವಿ ಮಾಡಿದರು.

30ರಿಂದ ಏಪ್ರಿಲ್ 12 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಪ್ರಶ್ನೆ ಪತ್ರಿಕೆ ಉಸ್ತುವಾರಿಗಾಗಿ ಮೂವರು ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿದೆ.

ಬೆಳಿಗ್ಗೆ 9.30 ರಿಂದ ಪರೀಕ್ಷೆ ಆರಂಭವಾಗುತ್ತದೆ. ಹಾಗಾಗಿ ಜಿಲ್ಲಾ ಮತ್ತು ತಾಲ್ಲೂಕು ಖಜಾನೆಗಳಿಂದ ಮಾರ್ಗಾಧಿಕಾರಿಗಳು ಪೊಲೀಸ್ ಬಿಗಿ ಭದ್ರತೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಆಯಾ ಪರೀಕ್ಷಾ ಕೇಂದ್ರಗಳಿಗೆ ಸರಿಯಾಗಿ 9ಗಂಟೆಗೆ ತಲುಪುವಂತೆ ಕ್ರಮ ಜರುಗಿಸಬೇಕು.

ADVERTISEMENT

ದೂರದ ಪರೀಕ್ಷಾ ಕೇಂದ್ರಗಳಿಗೆ ಮೊದಲ ಆದ್ಯತೆ ನೀಡಬೇಕು. ಉತ್ತರ ಪತ್ರಿಕೆಗಳನ್ನು ಸಹ ಮುಂಜಾಗ್ರತೆಯಿಂದ ಸಂಗ್ರಹಿಸುವ ಗುರುತರ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

‘ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಲಾಗಿರುವ ಸಿಬ್ಬಂದಿಯವರು ಪೊಲೀಸ್ ಇಲಾಖೆ ಅಧಿಕಾರಿಗಳು ಸರಿಯಾಗಿ ಬೆಳಿಗ್ಗೆ 8.30ಕ್ಕೆ ಹಾಜರಿರಬೇಕು. ಪರೀಕ್ಷಾ ಕೇಂದ್ರಗಳಲ್ಲಿ  ಆಸನದ ವ್ಯವಸ್ಥೆ, ಸೂಚನಾ ಫಲಕದಲ್ಲಿ ರಿಜಿಸ್ಟರ್ ನಂಬರ್ ನಮೂದಿಸುವುದು, ಕುಡಿಯುವ ನೀರು, ಶೌಚಾಲಯ, ಆರೋಗ್ಯ ಸಹಾಯಕರ ಸೇವೆ ಸೇರಿದಂತೆ ಮೂಲ ಸೌಲಭ್ಯಗಳಿರುವಂತೆ ನೋಡಿಕೊಳ್ಳಬೇಕು’ ಎಂದರು.

‘ಪರೀಕ್ಷಾ ಕೇಂದ್ರದಲ್ಲಿ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಯಾರೂ ಮೊಬೈಲ್ ತೆಗೆದುಕೊಂಡು ಹೋಗಬಾರದು. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗುವುದು. ವಿದ್ಯಾರ್ಥಿಗಳನ್ನು ಹೊರತುಪಡಿಸಿ ಪರೀಕ್ಷಾ ಕೇಂದ್ರಗಳಿಗೆ ಯಾರೂ ಪ್ರವೇಶಿಸದಂತೆ, ನಿಷೇಧಿಸಲಾಗುವುದು. ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲಾಗುವುದು, ಎಲ್ಲಾ ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿ ಸಲು ಮತ್ತು ವಿಡಿಯೊ ಚಿತ್ರೀಕರಣ ಮಾಡಿಸಲಾಗುವುದು’ ಎಂದರು.

ಪರೀಕ್ಷಾ ಕಾರ್ಯಕ್ಕೆ ಸರ್ಕಾರಿ ಮತ್ತು ಖಾಸಗಿ ವಾಹನಗಳನ್ನು ಬಳಸಿಕೊಳ್ಳು ವಂತೆ ಸಲಹೆ ನೀಡಿದ ಜಿಲ್ಲಾಧಿಕಾರಿ,  ಯಾವುದೇ ಸಮಸ್ಯೆಯಿಲ್ಲದೇ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರೇವಣ ಸಿದ್ದಪ್ಪ, ಜಿಲ್ಲಾ ಖಜಾನಾಧಿಕಾರಿ ಶಂಕರ ಲಿಂಗಯ್ಯ, ಡಯಟ್ ಉಪನಿರ್ದೇಶಕಿ ಲೀಲಾವತಿ ಮತ್ತು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.