ADVERTISEMENT

ಏಕನಾಥೇಶ್ವರಿ, ಬರಗೇರಮ್ಮ ಸಿಡಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 7:52 IST
Last Updated 16 ಏಪ್ರಿಲ್ 2017, 7:52 IST

ಚಿತ್ರದುರ್ಗ: ಐತಿಹಾಸಿಕ ಕೋಟೆನಾಡಿನ ದೇವತೆಗಳಾದ ಏಕನಾಥೇಶ್ವರಿ, ಬರಗೇರಮ್ಮ ಶಕ್ತಿದೇವತೆಗಳ ಸಿಡಿ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನೆರವೇರಿತು.ಹರಕೆ ಹೊತ್ತವರು ಸಿಡಿ ಆಡುವುದನ್ನು ಬಹು ನಿರೀಕ್ಷೆಯಿಂದ ಭಕ್ತರು ಎದುರು ನೋಡುತ್ತಿದ್ದರು. ಸಿಡಿ ಮಹೋತ್ಸವ ಆರಂಭ
ವಾಗುತ್ತಿದ್ದಂತೆ ಎಲ್ಲಿ ನೋಡಿದರೂ ಭಕ್ತರಿಂದ ‘ಉಧೋ ಉಧೋ’ ಎಂಬ ಹರ್ಷೋದ್ಗಾರ ಮೊಳಗಿತು.

ಕೋಟೆ ಮಾರ್ಗದ ಫಿಲ್ಟರ್‌ ಹೌಸ್‌ ರಸ್ತೆಯ ಏಕನಾಥೇಶ್ವರಿ ಪಾದದ ಗುಡಿ ಮುಂಭಾಗದಲ್ಲಿ ಏಕನಾಥಮ್ಮ ದೇವಿಯ ಸಿಡಿ ಉತ್ಸವ ಸಂಜೆ 6ರ ಸುಮಾರಿಗೆ ನಡೆಯಿತು. ಈ ದೇವತೆ ದುರ್ಗದ ನವದುರ್ಗಿಯರಲ್ಲಿ ದೊಡ್ಡಕ್ಕ. ಆದ್ದರಿಂದ ಮೊದಲು ಇಲ್ಲಿ ಪ್ರಾರಂಭವಾಗಿ ಅರ್ಧ ಗಂಟೆಯಾದ ಬಳಿಕ ಬರಗೇರಮ್ಮ ದೇವಿಯ ಮೂಲ ದೇಗುಲದ ಮುಂಭಾಗದಲ್ಲಿ ಬರಗೇರಮ್ಮ ದೇವಿಯ ಸಿಡಿ ಮಹೋತ್ಸವ ಜರುಗಿತು.

ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಭಕ್ತರು ಇಲ್ಲಿಗೆ ಬಂದು ಸಿಡಿ ಆಡಿ ತಮ್ಮ ಹರಕೆ ಸಮರ್ಪಿಸಿದರು. ಸಿಡಿಕಂಬಕ್ಕೆ ತಮ್ಮನ್ನು ಕಟ್ಟಿಕೊಂಡು ಮೂರು ಸಲ ತಿರು
ಗುವ ದೃಶ್ಯವನ್ನು ಸಹಸ್ರಾರು ಮಂದಿ ವೀಕ್ಷಿಸಿ ಕಣ್ತುಂಬಿಕೊಂಡು ಭಕ್ತಿ ಸಮರ್ಪಿಸಿದರು.ಮಹೋತ್ಸವಕ್ಕಾಗಿ ಭೂಮಿಗೆ ನೇರವಾಗಿ ಕಂಬ ನೆಡಲಾಗಿತ್ತು. ಅದಕ್ಕೆ ಮಲ್ಲಕಂಬ ಎಂಬ ಹೆಸರಿದೆ. ಕಂಬದ ಮೇಲೆ ತಿರುಗಣಿ ಇಟ್ಟು, ಅದರ ಮೇಲೆ ಸಮಾನಾಂತರವಾಗಿ ಪ್ರತಿಷ್ಠಾಪಿಸುವ ಸಿಡಿಕಂಬ ಸುಲಭವಾಗಿ ತಿರುಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಕಂಬದ ಒಂದು ತುದಿಗೆ ಮನುಷ್ಯನನ್ನು ಬಟ್ಟೆಯಿಂದ ಕಟ್ಟಿ ಮೂರು ಸಲ ತಿರುಗಿಸುವುದು ಈ ಉತ್ಸವದ ಸಂಪ್ರದಾಯವಾಗಿದೆ.

ADVERTISEMENT

ಭಕ್ತರ ಉದ್ಗಾರ: ‘ದೊಡ್ಡ ಭಂಡಾರದೊಡತಿ ಏಕನಾಥೇಶ್ವರಿ ದೇವಿ ದುರ್ಗಕ್ಕೆ ಮಳೆ ಸುರಿಸು. ಭಕ್ತರ ಪೊರೆವ ಮಹಾಮಾತೆ ಬರಗೇರಮ್ಮ ಈ ಬಾರಿ ಚೆನ್ನಾಗಿ ಮಳೆ ಬೆಳೆಯಾಗುವಂತೆ ಆಶೀರ್ವದಿಸು’ ಎಂದು  ಭಕ್ತರು ಪ್ರಾರ್ಥಿಸಿದರು.  ಭಕ್ತರು ಏಕನಾಥೇಶ್ವರಿ ದೇವಿಗೆ ಹೂವಿನ ಹಾರಗಳನ್ನು ಶ್ರದ್ಧಾ ಭಕ್ತಿಯಿಂದ ಸಮರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.