ADVERTISEMENT

ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ದಿನಗಣನೆ ಶುರು

ಉತ್ತರ ಪ್ರದೇಶದ ಸಂತಕಬೀರ ಕ್ಷೇತ್ರದ ಸಂಸದ ಶರತ್ ತ್ರಿಪಾಠಿ ಭವಿಷ್ಯ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 10:30 IST
Last Updated 19 ಮಾರ್ಚ್ 2018, 10:30 IST
ಚಿತ್ರದುರ್ಗದ ಜೆ.ಎಂ.ಟವರ್ ನಲ್ಲಿ ಜಿಲ್ಲಾ ಬಿಜೆಪಿ ಘಟಕ ಶನಿವಾರ ಆಯೋಜಿಸಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳ ಸಭೆಯಲ್ಲಿ ಉತ್ತರ ಪ್ರದೇಶದ ಸಂಸದ ಶರತ್ ತ್ರಿಪಾಠಿ ಮಾತನಾಡಿದರು.
ಚಿತ್ರದುರ್ಗದ ಜೆ.ಎಂ.ಟವರ್ ನಲ್ಲಿ ಜಿಲ್ಲಾ ಬಿಜೆಪಿ ಘಟಕ ಶನಿವಾರ ಆಯೋಜಿಸಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳ ಸಭೆಯಲ್ಲಿ ಉತ್ತರ ಪ್ರದೇಶದ ಸಂಸದ ಶರತ್ ತ್ರಿಪಾಠಿ ಮಾತನಾಡಿದರು.   

ಚಿತ್ರದುರ್ಗ: ‘ಕಾಂಗ್ರೆಸ್ ಮುಕ್ತ ಭಾರತ ಆರಂಭವಾಗಿದ್ದು, ಕಾಂಗ್ರೆಸ್ ಮುಕ್ತ ಕರ್ನಾಟಕವಾಗುವ ದಿನಗಳು ಸನ್ನಿಹಿತವಾಗುತ್ತಿವೆ’ ಎಂದು ಉತ್ತರ ಪ್ರದೇಶದ ಸಂತಕಬೀರ್ ಕ್ಷೇತ್ರದ ಸಂಸದ ಶರತ್ ತ್ರಿಪಾಠಿ ಅಭಿಪ್ರಾಯಪಟ್ಟರು.

ಜಿಲ್ಲಾ ಬಿಜೆಪಿ ಘಟಕದಿಂದ ನಗರದ ಜೆ.ಎಂ.ಟವರ್ ನಲ್ಲಿ ಶನಿವಾರ ಆಯೋಜಿಸಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಮುಕ್ಕಾಲು ಪಾಲು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಾಗಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೇಶದಾದ್ಯಂತ ‘ಕಾಂಗ್ರೆಸ್ ಮುಕ್ತ ಭಾರತ’ ಅಭಿಯಾನ ಆರಂಭಿಸಿದ್ದಾರೆ. ಈಗ ಕರ್ನಾಟಕದಲ್ಲೂ ಅಭಿಯಾನ ಶುರುವಾಗಿದೆ. ಶೀಘ್ರದಲ್ಲೇ ಅದು ಈಡೇರಲಿದೆ’ ಎಂದರು.

ADVERTISEMENT

ಬಿಜೆಪಿ ನೇತೃತ್ವದ ಎರಡು ಅವಧಿಯ ಎನ್‌ಡಿಎ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿವೆ. ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿದ್ದ ರಾಜ್ಯಗಳಲ್ಲಿ ಹಗರಣಗಳೇ ಹೆಚ್ಚಾಗಿದ್ದವು. ಪ್ರಧಾನಿ ಮೋದಿ ಸರ್ಕಾರದಲ್ಲಿ ನಾಲ್ಕು ವರ್ಷಗಳಲ್ಲಿ ಒಂದೇ ಒಂದು ಹಗರಣವಿಲ್ಲ. ವಿಶ್ವಮಟ್ಟದಲ್ಲಿ ಭಾರತವನ್ನು ಗುರುತಿಸುವಂತಹ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈ ಎಲ್ಲ ಬೆಳವಣಿಗೆಗಳು ಕರ್ನಾಟಕದ ಚುನಾವಣೆ ಮೇಲೆ ಪ್ರಭಾವ ಬೀರಲಿವೆ’ ಎಂದರು.

ಬಿಜೆಪಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಈ ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ಇದೆ. ಹಾಗಾಗಿ, ಇಲ್ಲಿ ಡಿಆರ್‌ಡಿಒ ಸೇರಿದಂತೆ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳನ್ನು ಆರಂಭಿಸಿದೆ. ರೈತರಿಗಾಗಿ ಫಸಲ್ ಬಿಮಾ ಯೋಜನೆ, ಹೆಣ್ಣ ಮಕ್ಕಳ ಅಭಿವೃದ್ಧಿಗಾಗಿ ‘ಬೇಟಿ ಬಚಾವೋ ಬೇಟಿ ಪಡಾವೋ’ ಸೇರಿದಂತೆ ಹಲವು ವರ್ಗಗಳಿಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಉಜ್ವಲ ಯೋಜನೆಯಡಿ 5 ಕೋಟಿ ಬಡ ಕುಟುಂಬದವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ’ ಎಂದು ಸರ್ಕಾರದ ಯೋಜನೆಗಳನ್ನು ಉಲ್ಲೇಖಿಸಿದರು.

ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ಉಪಾಧ್ಯಕ್ಷ ರೇವಣಸಿದ್ದಪ್ಪ (ಕೆಎಂಎಫ್), ವೆಂಕಟಸ್ವಾಮಿ, ಜಿಲ್ಲಾ ಚುನಾವಣಾ ಸಂಚಾಲಕ ಟಿ.ಜಿ.ನರೇಂದ್ರನಾಥ್, ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರತ್ನಮ್ಮ, ಮುರುಳಿ, ಮಲ್ಲಿಕಾರ್ಜುನ್, ಗ್ರಾಮಾಂತರ ಅಧ್ಯಕ್ಷ ಸುರೇಶ್ ಸಿದ್ದಾಪುರ ಅವರೂ
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.