ADVERTISEMENT

‘ಕುಸುರಿ ಕಲೆಯಲ್ಲಿ ವಿಶ್ವಕರ್ಮರಿಗೆ ಸಾಟಿಯೇ ಇಲ್ಲ’

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 9:52 IST
Last Updated 18 ಸೆಪ್ಟೆಂಬರ್ 2017, 9:52 IST

ಚಿತ್ರದುರ್ಗ: ಜಿಲ್ಲಾ ವಿಶ್ವಕರ್ಮ ಸಂಘದವರು ನಿವೇಶನ ಖರೀದಿಸಿದ್ದರೆ, ಅದರಲ್ಲಿ ಕಚೇರಿ, ಕಟ್ಟಡ ನಿರ್ಮಾಣಕ್ಕೆ ಶಾಸಕರ ಅನುದಾನದಿಂದ ಹಣ ಕೊಡಬಹುದು ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಭರವಸೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಮತ್ತು ನಗರಸಭೆ ಸಹಯೋಗದಲ್ಲಿ ನಗರದ ಗುರುಭವನದಲ್ಲಿ ಭಾನುವಾರ ಆಯೋಜಸಿದ್ದ ‘ವಿಶ್ವಕರ್ಮ ಜಯಂತಿ’ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಬ್‌ರಜಿಸ್ಟ್ರಾರ್‌ ದರದಲ್ಲಿ ಇಂಥ ಸಮುದಾಯಗಳಿಗೆ ನಿವೇಶನ ಕೊಡಲು ಅವಕಾಶವಿದೆ ಎಂದು ಹೇಳಿದರು. ‘ಬಂಗಾರ, ಕಲ್ಲು, ಮರ.. ಹೀಗೆ ಯಾವುದೇ ಕುಸುರಿ ಕೆಲಸವನ್ನು ವಿಶ್ವಕರ್ಮ ಜನಾಂಗದವರು ಮಾಡಿದಷ್ಟು ಸೊಗಸಾಗಿ ಬೇರೆ ಸಮುದಾಯದವರು ಮಾಡಲು ಸಾಧ್ಯವಿಲ್ಲ.

ಇವತ್ತಿಗೂ ದೇವರ ವಿಗ್ರಹಗಳ ಕೆತ್ತನೆಗೆ ಆಂಧ್ರ, ತಮಿಳುನಾಡಿಗೆ ಹುಡುಕಿಕೊಂಡು ಹೋಗುತ್ತೇವೆ. ಅಂಥ ಸಮುದಾಯಕ್ಕೆ ವೃತ್ತಿ ಮುಂದುವರಿಸಿಕೊಂಡು ಹೋಗುವಂತಹ ವಾತಾವರಣ ನಿರ್ಮಾಣವಾಗಬೇಕು. ಇಂಥ ಹಿಂದುಳಿದ ಸಮುದಾಯಕ್ಕೆ ಶಕ್ತಿ ತುಂಬಲು ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳ ಆಯೋಗ ರಚನೆಗೆ ಕಸರತ್ತು ನಡೆಸುತ್ತಿದೆ’ ಎಂದು ತಿಳಿಸಿದರು.

ADVERTISEMENT

ನಿವೃತ್ತ ಪ್ರಾಧ್ಯಾಪಕರಾದ ಶ್ರೀಕಂಠಚಾರ್ಯ ವಿಶ್ವಕರ್ಮರ ಕುರಿತು ಉಪನ್ಯಾಸ ನೀಡಿದರು. ವಿಶ್ವಕರ್ಮ ಸಮಾಜದ ಸಾಧಕರನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಿರಿಯೂರು ಚಟುಗು ಮಲ್ಲೇಶ್ವರಸ್ವಾಮಿ ಪೀಠದ ಜ್ಞಾನ ಭಾಸ್ಕರ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಬಾಬೂ ಜಗಜೀವನ್‌ರಾಮ್ ನಿಗಮದ ಅಧ್ಯಕ್ಷ ಶಂಕರ್, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ, ತಹಶೀಲ್ದಾರ್ ಮಲ್ಲಿಕಾರ್ಜುನ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ತಿಪ್ಪೇಶಾಚಾರ್ಯ, ಗೌರವಾಧ್ಯಕ್ಷ ಎ.ಶಂಕರಾಚಾರ್ಯ, ಸಮಾಜದ ಪ್ರಮುಖರಾದ ಜೈವಿನಾಥ್, ರವಿಶಂಕರ್.ಟಿ., ಮಂಜುನಾಥಾಚಾರ್, ಗೋಪಿನಾಥ್ ಇದ್ದರು.

‌ಕಾರ್ಯಕ್ರಮಕ್ಕೂ ಮುನ್ನ ವಿಶ್ವಕರ್ಮ ಭಾವಚಿತ್ರದೊಂದಿಗೆ ನಗರದ ರಾಯಣ್ಣ ವೃತ್ತದಿಂದ ಮೆರವಣಿಗೆ ಆರಂಭಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಮೆರವಣಿಗೆಗೆ ಚಾಲನೆ ನೀಡಿದರು. ನಗರದ ವಿಶ್ವಕರ್ಮ ಕಲ್ಯಾಣ ಮಂಟಪ, ಬುರುಜನಹಟ್ಟಿಯಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಸಮುದಾಯದ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.