ADVERTISEMENT

ಕೃಷಿ ಆದಾಯಕ್ಕೂ ತೆರಿಗೆ: ಖರ್ಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 22 ಮೇ 2017, 5:15 IST
Last Updated 22 ಮೇ 2017, 5:15 IST

ಹಿರಿಯೂರು: ‘ಆದಾಯ ಖಾತ್ರಿಯೇ ಇಲ್ಲದ ಕೃಷಿ ಆದಾಯದ ಮೇಲೆ ನೀತಿ ಆಯೋಗ ಆದಾಯ ತೆರಿಗೆ ವಿಧಿಸಲು ಚಿಂತನೆ ನಡೆಸುತ್ತಿರುವುದು ರೈತರಿಗೆ ಮಾರಕವಾಗಿದೆ. ಇದನ್ನು ಕಾಂಗ್ರೆಸ್‌ ತೀವ್ರವಾಗಿ ವಿರೋಧಿಸುತ್ತದೆ’ ಎಂದು ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ತಾಲ್ಲೂಕಿನ ತವಂದಿ ಗ್ರಾಮದ ಸಮೀಪ ಎಂಕೆಆರ್ ಸಮೂಹದ ರಾಜಶ್ರೀ ಫುಡ್ಸ್ ಸಂಸ್ಥೆ ಸ್ಥಾಪಿಸಿರುವ ಅತ್ಯಾಧುನಿಕ ಪಶು ಆಹಾರ ಉತ್ಪಾದನಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

‘ಬರ, ದರ ಕುಸಿತದಿಂದ ದೇಶದ ಎಲ್ಲ ಭಾಗದ ರೈತರು ಕಷ್ಟದಲ್ಲಿದ್ದಾರೆ. ಆಡಳಿತ ನಡೆಸುತ್ತಿರುವವರು ಬೆಂಬಲ ಬೆಲೆ ಘೋಷಿಸುತ್ತಿಲ್ಲ. ಬಹುತೇಕ ರೈತರು ಮಳೆಗಾಗಿ ಆಕಾಶವನ್ನೇ ನೋಡುತ್ತಿರುತ್ತಾರೆ. ಸಕಾಲಕ್ಕೆ ಮಳೆ ಬಂದರೆ ಮಾತ್ರ ಬೆಳೆ. ಬೆಳೆ ಬಂದೂ ಬೆಲೆ ಸಿಗದಿದ್ದರೆ ಕಷ್ಟ ತಪ್ಪದು. ಹೀಗಿರುವಾಗ ತೆರಿಗೆ ವಿಧಿಸುವುದು ಎಷ್ಟು ಸರಿ. ಸಂಸತ್ತಿನಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತೇನೆ’ ಎಂದು ಅವರು ಭರವಸೆ ನೀಡಿದರು.

ADVERTISEMENT

‘ಈ ಭಾಗದಲ್ಲಿ ಮೆಕ್ಕೆಜೋಳ ಬೆಳೆಯುವ ರೈತರಿಗೆ ಪಶು ಆಹಾರ ಘಟಕದಿಂದ ಅನುಕೂಲವಾಗಲಿದೆ. ಮಾರುಕಟ್ಟೆ ಕೂಡ  ವಿಸ್ತರಣೆಗೊಳ್ಳಲಿದೆ. ಸಾಕಷ್ಟು ಉದ್ಯೋಗಾವಕಾಶವೂ ಸಿಗಲಿದೆ’ ಎಂದು ಅವರು ಹೇಳಿದರು.

‘ಬಹಳಷ್ಟು ಜನ ಬೇಗ ಹಣ ಗಳಿಸಲು ರಿಯಲ್ ಎಸ್ಟೇಟ್, ಮೈನಿಂಗ್ ಕಡೆ ಹೆಚ್ಚು ಗಮನ ಹರಿಸುತ್ತಾರೆ. ಅದರ ಬದಲು ಕೃಷಿ ಆಧಾರಿತ ಕಾರ್ಖಾನೆಗಳನ್ನು ಹೆಚ್ಚೆಚ್ಚು ಆರಂಭಿಸಿದರೆ ರೈತರಿಗೆ, ಹಳ್ಳಿಯ ಯುವಕರಿಗೆ ಅನುಕೂಲವಾಗಲಿದೆ’ ಎಂದು ಖರ್ಗೆ ತಿಳಿಸಿದರು.

‘ಕೃಷ್ಣ, ಕಾವೇರಿಯಂತಹ ಬೃಹತ್‌ ನೀರಾವರಿ ಯೋಜನೆಗಳಿಗೆ ಅನುದಾನ ನೀಡುವ ಜೊತೆಗೆ ಸಣ್ಣ ನೀರಾವರಿಗೂ ಒತ್ತು ನೀಡಬೇಕು. ಕೆರೆಗಳಿಗೆ ಕಾಯಕಲ್ಪ ಕಲ್ಪಿಸಿ, ಮಳೆ ನೀರನ್ನು ಹಿಡಿದಿಡಬೇಕು’ ಎಂದು ಅವರು ಸಲಹೆ ನೀಡಿದರು.

ಜಿಎಂಆರ್ ಗ್ರೂಪ್ ಅಧ್ಯಕ್ಷ ಜಿ. ಮಲ್ಲಿಕಾರ್ಜುನರಾವ್, ‘ನಾನು ದೈಹಿಕವಾಗಿ ದೆಹಲಿಯಲ್ಲಿದ್ದರೂ, ಭಾವನಾತ್ಮಕವಾಗಿ ಕರ್ನಾಟಕದಲ್ಲಿದ್ದೇನೆ. ಎಂಕೆಆರ್ ಗ್ರೂಪ್ ಏನೇ ಮಾಡಿದರೂ ವ್ಯವಸ್ಥಿತವಾಗಿ, ಅತ್ಯಾಧುನಿಕವಾಗಿ ಮಾಡುತ್ತದೆ. ನಮ್ಮ ದೇಶದಲ್ಲಿ ಹಸು ದಿನಕ್ಕೆ 8ರಿಂದ 10 ಲೀಟರ್ ಹಾಲು ಕರೆದರೆ, ವಿದೇಶಗಳಲ್ಲಿ ಸರಾಸರಿ 15ರಿಂದ 20 ಲೀಟರ್ ಹಾಲು ಕರೆಯುತ್ತವೆ.

ನಮ್ಮಲ್ಲಿ ಉತ್ಪಾದಿಸುವ ಪೌಷ್ಟಿಕ ಆಹಾರ ಬಳಸಿದಲ್ಲಿ ವಿದೇಶಗಳಲ್ಲಿ ಉತ್ಪಾದಿಸುವಷ್ಟೇ ಹಾಲನ್ನು ಇಲ್ಲೂ ಉತ್ಪಾದಿಸಬಹುದು’ ಎಂದರು.ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾಂಡುರಂಗ ಶೆಟ್ಟಿ, ಸಿಪಿಎಫ್ ಇಂಡಿಯಾ ಉಪಾಧ್ಯಕ್ಷ ಸಾಂತಿ ಫೊಂಗ್ಚೆಸೊಫೊನ್ ಮಾತನಾಡಿದರು. ಶಾಸಕರಾದ ಡಿ. ಸುಧಾಕರ್, ರಘುಮೂರ್ತಿ, ಪಿ.ಎಂ. ಅಶೋಕ್, ದಿನೇಶ್, ರಮೇಶ್ ಗೆಲ್ಲಿ ಹಾಜರಿದ್ದರು. ಎಂ.ಕೆ. ರಾಮಚಂದ್ರ ಸ್ವಾಗತಿಸಿದರು. ಅಪರ್ಣಾ ಕಾರ್ಯಕ್ರಮ ನಿರೂಪಿಸಿದರು. ಕಾಂತಿಲಕ್ಷ್ಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.