ADVERTISEMENT

ಕೋಟೆ ವೇಣುಗೋಪಾಲ ಸ್ವಾಮಿಗೆ ‘ಮೆಟ್ಟಿಲೋತ್ಸವ’

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 6:40 IST
Last Updated 7 ಜುಲೈ 2015, 6:40 IST

ಚಿತ್ರದುರ್ಗ: ಅಧಿಕ ಆಷಾಢ ಮಾಸದ ಅಂಗವಾಗಿ ಭಾನುವಾರ ಕೋಟೆಯಲ್ಲಿ ಇರುವ ವೇಣುಗೋಪಾಲ ಸ್ವಾಮಿಗೆ ‘ಮೆಟ್ಟಿಲೋತ್ಸವ’ ವಿಶೇಷ ಪೂಜೆ ನೆರವೇರಿಸಲಾಯಿತು.

ನಗರದ ಪಾಂಡುರಂಗ ಭಜನಾ ಮಂಡಳಿಯವರು ಪಾಂಡುರಂಗಸ್ವಾಮಿ ದೇವಸ್ಥಾನದಿಂದ ಭಜನೆ, ಕೀರ್ತನೆ ಗಳೊಂದಿಗೆ ಏಳುಸುತ್ತಿನ ಕೋಟೆಗೆ ತೆರಳಿ, ಮೆಟ್ಟಿಲುಗಳ ಮೇಲೆ ವೆಂಟೇಶ್ವರ ಪ್ರತಿಮೆ ಇಟ್ಟು ಪೂಜೆ ಸಲ್ಲಿಸಿದರು.

ದೇವಸ್ಥಾನದಿಂದ ಮೆರವಣಿಗೆ ಹೊರಟ ಭಜನಾ ಮಂಡಳಿಯವರು  ಮೆರವಣಿಗೆಯುದ್ದಕ್ಕೂ ಭಜನೆ, ಕೀರ್ತನೆ, ವೇದಘೋಷ, ಹರಿನಾಮ ಕೀರ್ತನೆ ಯೊಂದಿಗೆ ಸಾಗಿದರು. ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ನಡೆಯುವ ರೀತಿಯಲ್ಲಿ ‘ಮೆಟ್ಟಿಲು ಪೂಜೆ’ ನೆರವೇರಿತು.

ಮೆಟ್ಟಿಲಿನ ಮೇಲೆ ತಿಮ್ಮಪ್ಪನ ವಿಗ್ರಹ ಕೂರಿಸಿ, ಗಣಪತಿ ಪ್ರಾರ್ಥನೆ, ಕಲಶ ಪೂಜೆಸಹಿತ ಮೆಟ್ಟಿಲ ಪೂಜೆ ನಡೆಯಿತು. ವೇದಘೋಷಗಳು, ಹರಿನಾಮ ಕೀರ್ತನೆ, ವಿಷ್ಣು ಸಹಸ್ರನಾಮ ಪಾರಾಯಣ ನಡೆ ಯಿತು. ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.

ಟಿ.ಎಸ್.ಗೋಪಾಲಕೃಷ್ಣ ದಂಪತಿ ವಿಶೇಷ ಪೂಜಾ ಕೈಂಕರ್ಯವನ್ನು ನಡೆಸಿಕೊಟ್ಟರು. ನಗರದ ಭಕ್ತರೊಂದಿಗೆ ದಾವಣಗೆರೆ, ಹರಿಯರ, ಹೊನ್ನಾಳಿ, ಬಳ್ಳಾರಿ, ಹರಿಹರ ಮತ್ತು ಕೂಡ್ಲಿಗೆ ಸೇರಿದಂತೆ ವಿವಿಧ ಕಡೆಯಿಂದ ಭಕ್ತರು ಮೆಟ್ಟಿಲೋತ್ಸವಕ್ಕೆ ಆಗಮಿಸಿದ್ದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ಎಸ್.ಅರುಣ ಕುಮಾರ್, ವಾಸವಿ ವಿದ್ಯಾ ಸಂಸ್ಥೆಯ ಪಿ.ಎಲ್.ಸುರೇಶ್ ಹುಲಿರಾಜ್ ಜೋಯಿಸ್, ಜೈನ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.