ADVERTISEMENT

ಜನವರಿಯೊಳಗೆ ಅನುದಾನ ಬಳಸಿ

ಜಿಲ್ಲಾ ಪಂಚಾಯ್ತಿ ಮಾಸಿಕ ಕೆಡಿಪಿಯಲ್ಲಿ ಅಧಿಕಾರಿಗಳಿಗೆ ಸಿಇಒ ನಿತೇಶ್ ಪಾಟೀಲ್ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 11:09 IST
Last Updated 12 ಜನವರಿ 2017, 11:09 IST
ಚಿತ್ರದುರ್ಗ: ‘ಜಿಲ್ಲೆಗೆ ಸರ್ಕಾರ ನೀಡಿರುವ ಅನುದಾನವನ್ನು ಮಾರ್ಚ್‌ವರೆಗೂ ಕಾಯದೆ ಜನವರಿ ಅಂತ್ಯದೊಳಗೆ ಸಂಪೂರ್ಣವಾಗಿ ಬಳಸಿಕೊಂಡು ಪ್ರಗತಿ ಸಾಧಿಸಬೇಕು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ನಿತೇಶ್ ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹಣ ವ್ಯರ್ಥವಾದರೆ ಆಯಾ ಇಲಾಖೆ ಅಧಿಕಾರಿಗಳನ್ನೇ ಹೊಣೆಗಾರನ್ನಾಗಿ ಮಾಡಬೇಕಾಗುತ್ತದೆ ಎಂದು ತಾಕೀತು ಮಾಡಿದರು.
 
ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಗಳ ಅನುದಾನ ಪೂರ್ಣ ಬಳಕೆ ಮಾಡಬೇಕು. ಜನವರಿಯಲ್ಲಿಯೇ ಶೇ 100ರಷ್ಟು ಹಣ ಖರ್ಚು ಮಾಡಲು ಶ್ರಮಿಸಬೇಕು ಎಂದು ಸೂಚಿಸಿದರು.
 
ಜಿಲ್ಲಾ ಪಂಚಾಯ್ತಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ ಮಾತನಾಡಿ, ತಮ್ಮ ಕ್ಷೇತ್ರದ ಲಕ್ಷ್ಮೀಸಾಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಲವು ಹಳ್ಳಿಗಳಿಗೆ ಕಿರು ನೀರು ಸರಬರಾಜು ಯೋಜನೆ ಪುನಶ್ಚೇತನದ ಮೂಲಕ ನೀರು ಒದಗಿಸಿಕೊಟ್ಟಿದ್ದಕ್ಕೆ ಇಲಾಖೆ ಅಧಿಕಾರಿ ಮನೋಹರ್ ಅವರನ್ನು ಅಭಿನಂದಿಸಿದರು. ಇನ್ನು ಕೆಲವು ಹಳ್ಳಿಗಳಿಗೆ ನೀರಿನ ವ್ಯವಸ್ಥೆ ಆಗಬೇಕಿದೆ ಎಂದರು.
 
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಇಲಾಖೆ ಅಧಿಕಾರಿ ಮನೋಹರ್ ಮಾತನಾಡಿ, ಕೆಲವು ಹಳ್ಳಿಗಳಲ್ಲಿ 900-1000 ಅಡಿವರೆಗೆ ಕೊಳವೆಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಅಂತಹ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯ ಗ್ರಾಮಸ್ಥರು ಬೇರೆ ಕಡೆ ಕೊರೆಯಿಸುವಂತೆ ಒತ್ತಾಯಿಸುತ್ತಾರೆ. ಕೆಲವರು ನಮ್ಮ ವಿರುದ್ಧ ಗಲಾಟೆಗೆ ಬರುತ್ತಾರೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಗಮನಕ್ಕೆ ತಂದರು.
 
ಅಧ್ಯಕ್ಷೆ ಸೌಭಾಗ್ಯ ಮಾತನಾಡಿ, ನಿಗದಿ ಪಡಿಸಿದ ಸ್ಥಳದಲ್ಲಿ ಮಾತ್ರ ಒಂದು ಕಡೆ ಕೊಳವೆಬಾವಿ ಕೊರೆಸಬೇಕು. 
 
ಒಂದೇ ಊರಿನಲ್ಲಿ 2-3 ಕೊಳವೆಬಾವಿ ಕೊರೆಯಿಸಿದರೆ ಕ್ರಿಯಾ ಯೋಜನೆ ತಯಾರಿಸಿದ ಬೇರೆ ಹಳ್ಳಿಗಳು ಯೋಜನೆಯ ಅವಕಾಶದಿಂದ ವಂಚಿತವಾಗುತ್ತವೆ ಎಂದು ತಿಳಿಸಿದರು.
 
ಈ ಬಾರಿ 761 ಹೆಚ್ಚುವರಿ ಕೊಳವೆಬಾವಿ ಕೊರೆಸಲಾಗಿದೆ. ಈ ಬಗ್ಗೆ ಕೆಲವು ಜಿಲ್ಲಾ ಪಂಚಾಯ್ತಿ ಸದಸ್ಯರನ್ನು ಕೇಳಿದರೆ ತಮಗೆ ಗೊತ್ತಿಲ್ಲ ಎಂದು ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಅಗತ್ಯ ದಾಖಲೆ ಸಿದ್ಧಪಡಿಸಬೇಕು ಎಂದು ಸೂಚಿಸಿದರು. 
 
ಕೆಲವು ಹಳ್ಳಿಗಳಲ್ಲಿ ಬೀದಿ ದೀಪಗಳು ಹಾಗೂ ಮನೆ ದೀಪಗಳ ಸಂಪರ್ಕ ಒಂದೇ ಆಗಿರುವ ಪರಿಣಾಮ ಬೀದಿ ದೀಪಗಳು ಹಗಲು ಸಮಯದಲ್ಲಿಯೂ ಬೆಳಗುತ್ತಿರುತ್ತವೆ. ಈ ಕುರಿತು ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
 
ಸಿಇಒ ನಿತೇಶ್ ಪಾಟೀಲ್ ಮಾತನಾಡಿ, ಎಲ್ಲೆಲ್ಲಿ ಬೀದಿ ದೀಪಗಳು ಮತ್ತು ಮನೆಗಳಿಗೆ ಒಂದೇ ವಿದ್ಯುತ್ ಸಂಪರ್ಕ ಇದೆ. ಅವುಗಳನ್ನು ಪ್ರತ್ಯೇಕಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.
 
ಅಧ್ಯಕ್ಷೆ ಸೌಭಾಗ್ಯ ಮಾತನಾಡಿ, ಹಳ್ಳಿಗಳಲ್ಲಿ ಯಾವುದೇ ಕಾರಣಕ್ಕೂ ವಾಟರ್‌ಮ್ಯಾನ್‌ಗಳನ್ನು ವಿದ್ಯುತ್ ಕಂಬ ಹತ್ತಿಸಿ ಕೆಲಸ ಮಾಡಿಸಬೇಡಿ. ಬೆಸ್ಕಾಂಗೆ ಅಧಿಕೃತ ಪತ್ರ ಬರೆದು ಲೈನ್‌ ಮ್ಯಾನ್‌ಗಳಿಂದಲೇ ಕೆಲಸ ಮಾಡಿಸಬೇಕು ಎಂದು ಇಒಗಳಿಗೆ ಸೂಚಿಸಿದರು.
 
ಸಿಇಒ ನಿತೇಶ್‌ ಪಾಟೀಲ್ ಮಾತನಾಡಿ, ‘ಕೆಲ ಇಲಾಖೆಯ ಅಧಿಕಾರಿಗಳು ಸರ್ಕಾರದ ಪ್ರಿನ್ಸಿಪಲ್ ಕಾರ್ಯದರ್ಶಿಗೆ ಒಂದು ರೀತಿಯ ಮಾಹಿತಿ ನೀಡುತ್ತಾರೆ. ನಮಗೆ 
ಒಂದು ರೀತಿಯ ಮಾಹಿತಿ ಕೊಡುತ್ತಾರೆ. ಇದರಿಂದ ಸರ್ಕಾರವೂ ಕರೆದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ನಾವು ವಾದ ಮಾಡಬೇಕಾಗುತ್ತದೆ. ಆದ್ದರಿಂದ ಅವರಿಗೆ ಏನು ಮಾಹಿತಿ ಕೊಡುತ್ತೀರೋ ಅದೇ ಮಾಹಿತಿಯನ್ನು ನಮಗೆ ಕೊಡಬೇಕು’ ಎಂದು ಹೇಳಿದರು.
 
***
ಜ. 30, 31ರಂದು ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಒಗಳ ಜತೆ ವಿಡಿಯೊ ಕಾನ್ಫರೆನ್ಸ್ ಕರೆದಿದ್ದಾರೆ. ಅಷ್ಟರೊಳಗೆ ಶೇ  90ರಷ್ಟು ಅನುದಾನ ಖರ್ಚು ಮಾಡಬೇಕು.
– ನಿತೇಶ್‌ ಪಾಟೀಲ್, 
ಸಿಇಒ , ಜಿಲ್ಲಾ ಪಂಚಾಯ್ತಿ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.