ADVERTISEMENT

ಜಾತ್ರಾ ಸೇವಾಕರ್ತರಿಗೆ ಅಭಿನಂದನೆ

ನಾಯಕನಹಟ್ಟಿ: ಗ್ರಾಮಸ್ಥರನ್ನು ಸನ್ಮಾನಿಸಿದ ಉಪ ವಿಭಾಗಾಧಿಕಾರಿ ಟಿ.ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 5:29 IST
Last Updated 24 ಮಾರ್ಚ್ 2017, 5:29 IST

ನಾಯಕನಹಟ್ಟಿ: ಭೀಕರ ಬರದ ನಡುವೆ ಪಟ್ಟಣದ ತಿಪ್ಪೇರುದ್ರಸ್ವಾಮಿ ದೇವರ  ಜಾತ್ರೆಯನ್ನು ಯಶಸ್ವಿಯಾಗಿ ನೆರವೇರಿಸಲು ಶ್ರಮಿಸಿದ ಗ್ರಾಮಸ್ಥರು, ಜನಪ್ರತಿನಿಧಿಗಳನ್ನು  ಉಪ ವಿಭಾಗಾಧಿಕಾರಿ ಟಿ.ರಾಘವೇಂದ್ರ ಅಭಿನಂದಿಸಿದರು.

ಪಟ್ಟಣದ  ತಿಪ್ಪೇರುದ್ರಸ್ವಾಮಿ ಸಮುದಾಯ ಭವನದಲ್ಲಿ ಗುರುವಾರ ದೇವಾಲಯ ಹಾಗೂ ಜಿಲ್ಲಾಡಳಿತ ಹಮ್ಮಿಕೊಂಡಿದ್ದ  ಅಭಿನಂದನಾ ಕಾರ್ಯಕ್ರಮದಲ್ಲಿ  ಮಾತನಾಡಿದರು.

‘ನಾಯಕನಹಟ್ಟಿ ಜಾತ್ರೆಯು ಪ್ರತಿವರ್ಷ ಮಾರ್ಚ್‌ ತಿಂಗಳಲ್ಲಿ ನಡೆಯುತ್ತದೆ. ಈ ಅವಧಿಯಲ್ಲಿ ಹೆಚ್ಚು ಬಿಸಿಲು ಇರುತ್ತದೆ. ಇದರಿಂದ ಕುಡಿಯುವ ನೀರಿಗೆ ಅಭಾವ ಇರುತ್ತದೆ. ಹಾಗಾಗಿ ಜಿಲ್ಲಾಡಳಿತ ಜಾತ್ರೆಯ ಯಶಸ್ಸಿಗೆ ಹಲವು ರೂಪುರೇಷೆಗಳನ್ನು ತಯಾರಿಸಿ ಯೋಜನೆಗಳನ್ನು ಜಾರಿಗೊಳಿಸಿ ಯಶಸ್ವಿಯಾಯಿತು’ ಎಂದು ತಿಳಿಸಿದರು.

‘ಜಾತ್ರೆಯಲ್ಲಿ  ಕುಡಿಯುವ ನೀರಿನ ಸಮಸ್ಯೆಯಿತ್ತು. ಇದನ್ನು ಮನಗಂಡು ಜಿಲ್ಲೆಯ ಜನಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳಿಂದ ಹಾಗೂ ದಾನಿಗಳಿಂದ 52 ಕುಡಿಯುವ ನೀರಿನ ಟ್ಯಾಂಕರ್‌ಗಳನ್ನು ತರಿಸಿಕೊಂಡು ಎಲ್ಲಿಯೂ ನೀರಿನ ಕೊರತೆ ಉಂಟಾಗದಂತೆ ನೋಡಿಕೊಂಡರು ಎಂದು ಶ್ಲಾಘಿಸಿದರು.

‘ಜಾತ್ರೆಯ ಮುನ್ನ ಹಾಗೂ ಜಾತ್ರೆಯ ನಂತರ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಇದಕ್ಕಾಗಿ ಸ್ಥಳೀಯ ಪಟ್ಟಣ ಪಂಚಾಯ್ತಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ರಸ್ತೆ, ಚರಂಡಿ, ಬೀದಿದೀಪ, ಎಲ್ಲವೂ ಸುವ್ಯವಸ್ಥೆಯಲ್ಲಿತ್ತು’ ಎಂದು ತಿಳಿಸಿದರು.

‘ಜಾತ್ರೆಯ ಸಮಯದಲ್ಲಿ  ಬೆಸ್ಕಾಂ   ನಿರಂತವಾಗಿ ವಿದ್ಯುತ್ ನೀಡಿ, ಕುಡಿಯುವ ನೀರಿಗೆ ಅನುಕೂಲ ಮಾಡಿಕೊಟ್ಟಿತು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸುಮಾರು 75 ಅಡಿ ಎತ್ತರದ ರಥವನ್ನು ಪರಿಶೀಲಿಸಿದರು. ಹಾಗೂ ತೇರು ಬೀದಿ ಸೇರಿದಂತೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗೆ ಡಾಂಬರೀಕರಣ ಮಾಡಿದರು’ ಎಂದು ಶ್ಲಾಘಿಸಿದರು.

‘ಪೊಲೀಸ್ , ಕೃಷಿ, ಆರೋಗ್ಯ ಇಲಾಖೆ, ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಿ ಜಾತ್ರೆಯ ಯಶಸ್ಸಿಗೆ ಸಹಕರಿಸಿದ್ದಾರೆ’ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಂ.ವೈ.ಟಿ.ಸ್ವಾಮಿ, ಪಟ್ಟಣ ಪಂಚಾಯ್ತಿ ಸದಸ್ಯ ಎಸ್.ಉಮಾಪತಿ, ಮುಖಂಡ ಜೆ.ಪಿ.ರವಿಶಂಕರ್ ಮಾತನಾಡಿದರು. ಉದ್ಯಮಿ ಎಲ್.ಸೋಮಣ್ಣ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ, ಜಿಲ್ಲಾ ಯೋಜನಾ ನಿರ್ದೇಶಕ ಪ್ರಸನ್ನಕುಮಾರ್, ತಹಶೀಲ್ದಾರ್ ಶ್ರೀಧರಮೂರ್ತಿ ಎಸ್. ಪಂಡಿತ್, ಕಾರ್ಯ ನಿರ್ವಹಣಾಧಿಕಾರಿ ಬಿ.ಎಲ್.ಈಶ್ವರಪ್ರಸಾದ್, ಎಇಇ. ಸತೀಶ್‌ಬಾಬು, ಅರುಣ್‌ಕುಮಾರ್, ಪಿಎಸ್‌ಐ. ಟಿ.ಎಂ.ಮೋಹನ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಮಹಾಂತಣ್ಣ, ದಳವಾಯಿ ರುದ್ರಮುನಿ, ತಳಕು, ಮನ್ನೇಕೋಟೆ ಗ್ರಾಮಸ್ಥರು ಸಂಘ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.