ADVERTISEMENT

ನೀರು ಪೂರೈಕೆ: ಸದಸ್ಯರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 5:09 IST
Last Updated 20 ಏಪ್ರಿಲ್ 2017, 5:09 IST

ಚಿತ್ರದುರ್ಗ: ಕಳೆದ ತುರ್ತುಸಭೆಯಲ್ಲಿ ಕೈಗೊಂಡ ನಿರ್ಣಯಗಳು, ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ, ಸಂತೆಕಟ್ಟೆ ಹರಾಜು ಹಾಗೂ ಪೌರಾಯುಕ್ತರ ಕಾರ್ಯವೈಖರಿಗೆ ನಗರಸಭಾ ಸದಸ್ಯರ ಆಕ್ಷೇಪ– ಇವು ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾದ ವಿಷಯಗಳು.
‘ನಗರದ ಎಲ್ಲ ವಾರ್ಡ್‌ಗಳಲ್ಲೂ ನೀರಿನ ಸಮಸ್ಯೆ ತೀವ್ರವಾಗುತ್ತಿದೆ.

ನಾಗರಿಕರಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡದೆ ಪೌರಾಯುಕ್ತರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ನಗರಸಭೆ ಸದಸ್ಯ ಬಿ.ಕಾಂತರಾಜ್ ಆರೋಪಿಸುವುದರೊಂದಿಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಕಾವೇರಿತು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಚಂದ್ರಪ್ಪ, ‘ಯಾವ ವಾರ್ಡ್‌ನಲ್ಲಿ ಸಮಸ್ಯೆ ಇದೆ ಎಂದು ತಿಳಿಸಿದರೆ ತಕ್ಷಣ ಕ್ರಮ ಕೈಗೊಳ್ಳುತ್ತೇನೆ. ನಗರಕ್ಕೆ ನೀರು ಪೂರೈಕೆಯಾಗುತ್ತಿರುವ ಎರಡು ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಆದರೂ ಅಗತ್ಯವಿರುವ ಬಡಾವಣೆಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ’ ಎಂದು ವಿವರಿಸಿದರು.

ಚರ್ಚೆಯನ್ನು ಕಾಂತರಾಜ್ ಪುನಃ ಪೌರಾಯಕ್ತರ ಕಾರ್ಯವೈಖರಿ ವಿಚಾರಕ್ಕೆ ತಂದು ನಿಲ್ಲಿಸಿದರು. ‘ನೀವು ಬಂದು ವರ್ಷವಾಯಿತು. ನಗರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ನಿಮ್ಮ ಆಡಳಿತ ವೈಖರಿಯೇ ಸರಿ ಇಲ್ಲ. ಹಿಂದೆ ಇದ್ದಂಥ ಜಿಲ್ಲಾಧಿಕಾರಿಯೊಬ್ಬರು ಮನಸೋಇಚ್ಛೆ ಕಟ್ಟಡ ನಿರ್ಮಿಸಿದ್ದರಿಂದ ನೂತನ ನಗರಸಭೆ ಕಚೇರಿ ಹೆಸರು ಹೇಳಲೂ ಹಿಂದೇಟು ಹಾಕುವಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಧ್ಯ ಪ್ರವೇಶಿಸಿದ ಸದಸ್ಯ ರವಿಶಂಕರ್‌ ಬಾಬು, ‘ನೂತನ ನಗರಸಭೆ ಕಚೇರಿ ಅವೈಜ್ಞಾನಿಕವಾಗಿದೆ. ಆದರೂ ಪುನಃ ಲಕ್ಷಾಂತರ ಹಣ ಖರ್ಚು ಮಾಡಿ, ಕಟ್ಟಡ ನಿರ್ಮಿಸುವ ಅಗತ್ಯವೇನಿತ್ತು’ ಎಂದು ಪ್ರಶ್ನಿಸಿದರು. ‘ನೀರು ಪೂರೈಕೆ ವಿಷಯದಲ್ಲಿ ಪೌರಾಯುಕ್ತರಿಗಿರುವಷ್ಟೇ ಜವಾಬ್ದಾರಿ, ಅಧ್ಯಕ್ಷ, ಉಪಾಧ್ಯಕ್ಷರಿಗೂ ಇರುತ್ತದೆ. ಕೇವಲ ಪೌರಾಯುಕ್ತರನ್ನೇ ಗುರಿಯಾಗಿಸಿಕೊಳ್ಳುವುದು ಸರಿಯಲ್ಲ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

ಚರ್ಚೆಯ ದಿಕ್ಕು ಬದಲಾಗಿ ಕಾಂತರಾಜ್ ಮತ್ತು ರವಿಶಂಕರ್‌ ಬಾಬು ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಅಂತಿಮವಾಗಿ ‘ಸಭೆಯಲ್ಲಿ ಚರ್ಚೆ ನಡೆಯುವಾಗ ಅಡ್ಡಿ ಪಡಿಸುವವರನ್ನು ಹೊರಗೆ ಹಾಕಬೇಕು’ ಎಂದು ಕಾಂತರಾಜ್‌ ಅಧ್ಯಕ್ಷರನ್ನು ಒತ್ತಾಯಿಸಿದರು.‘ನಿಗದಿತ ವಿಷಯ ಬಿಟ್ಟು ಬೇರೆ ವಿಚಾರ ಚರ್ಚೆ ಮಾಡಿದರೆ ಆ ಸದಸ್ಯರನ್ನು ಹೊರಗೆ ಹಾಕಬೇಕು’ ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ನಂತರ ಕಾಂತರಾಜ್ ಮತ್ತು ಪೌರಾಯುಕ್ತರ ನಡುವೆ ಚರ್ಚೆ ನಡೆಯುತ್ತಿದ್ದಾಗ, ಇದಕ್ಕಿದ್ದಂತೆ ಮಧ್ಯ ಪ್ರವೇಶಿಸಿದ ಸದಸ್ಯ ಅಹ್ಮಮದ್ ಮಹ್ಮಮದ್ ಪಾಷಾ (ಸರ್ದಾರ್), ‘ಪೌರಾಯುಕ್ತರು ಸದಸ್ಯರಿಗೆ ಅಗೌರವ ತೋರುತ್ತಿದ್ದಾರೆ’ ಎಂದು ಅರೋಪಿಸಿ ಅವರ ವಿರುದ್ಧ ಧಿಕ್ಕಾರ ಕೂಗಿದರು.

‘ಕಳೆದ ಸಭೆಯಲ್ಲಿ  ಪೌರಾಯುಕ್ತರ ಬದಲಾವಣೆಗೆ ಸರ್ಕಾರಕ್ಕೆ ಪತ್ರ ಬರೆಯುವಂತೆ ಒತ್ತಾಯಿಸಲಾಗಿತ್ತು. ಈ ಕುರಿತು ಯಾವ ಕ್ರಮ ಕೈಗೊಂಡಿದ್ದೀರಿ’ ಎಂದು ಅಧ್ಯಕ್ಷ ಮಂಜುನಾಥ್ ಗೊಪ್ಪೆ ಅವರನ್ನು ಸದಸ್ಯ ಕಾಂತರಾಜ್ ಪ್ರಶ್ನಿಸಿದರು. ‘ವಿಷಯ ಮಂಡನೆಯಾದ ಮೇಲೆ ಬಹುತೇಕ ಸದಸ್ಯರು ಕೈ ಎತ್ತಲಿಲ್ಲ. ಈ ವಿಚಾರದಲ್ಲಿ ಗೊಂದಲ ನಿರ್ಮಾಣವಾಯಿತು. ಹಾಗಾಗಿ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಸದಸ್ಯರೆಲ್ಲರೂ ತಮ್ಮ ಅಭಿಪ್ರಾಯ ತಿಳಿಸಿದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ನಗರದ ಖಾಸಗಿ ಬಸ್ ನಿಲ್ದಾಣದ ಹಿಂದೆ ನಿರ್ಮಿಸಿರುವ ಸಂತೆಕಟ್ಟೆ ವಿಷಯ ಚರ್ಚೆಗೆ ಬಂತು. ಗುತ್ತಿಗೆ ಆಧಾರದಲ್ಲಿ ಸಂತೆಕಟ್ಟೆ ಹರಾಜು ಹಾಕುವ ಮೂಲಕ ವ್ಯಾಪಾರಸ್ಥರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಚರ್ಚೆಯಾಯಿತು. ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಪೌರಾಯುಕ್ತರನ್ನು ಒತ್ತಾಯಿಸಿದರು.
ಉಪಾಧ್ಯಕ್ಷ ಕೆ.ಮಲ್ಲೇಶಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.