ADVERTISEMENT

ನೈತಿಕತೆ ಸುಧಾರಣೆಯಿಂದ ಉತ್ತಮ ಸಮಾಜ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 7:33 IST
Last Updated 17 ಜನವರಿ 2017, 7:33 IST
ನೈತಿಕತೆ ಸುಧಾರಣೆಯಿಂದ ಉತ್ತಮ ಸಮಾಜ
ನೈತಿಕತೆ ಸುಧಾರಣೆಯಿಂದ ಉತ್ತಮ ಸಮಾಜ   

ಚಿತ್ರದುರ್ಗ: ‘ನಾಡಿನ ಎಲ್ಲ ಕ್ಷೇತ್ರಗಳಲ್ಲೂ ನೈತಿಕತೆ ಕೊರತೆ ಎದ್ದು ಕಾಣುತ್ತಿದೆ. ನೈತಿಕ ನೆಲೆಗಟ್ಟು ಸುಧಾರಣೆಯಾದರೆ   ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ’ ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಿರುವ 43ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಸೋಮವಾರ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲ ಕ್ಷೇತ್ರಗಳಲ್ಲೂ ಯೋಗ ಮರೆತು, ಭೋಗದ ಹಿಂದೆ ಓಡುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ನೈತಿಕತೆ ನೆಲೆಗಟ್ಟು ಕುಸಿದು.  ಸಮಾಜ ರೋಗಗ್ರಸ್ತವಾಗುತ್ತಿದೆ. ಹಾಗಾಗಿ ಇಲ್ಲಿ ಆಟವಾಡಲು ಬಂದಿರುವ ಕ್ರೀಡಾಪಟುಗಳು, ಕ್ರೀಡೆ ನೋಡಲು ಬಂದಿರುವ ಸಾರ್ವಜನಿಕರು ಭೋಗದ ಹಿಂದೆ ಓಡದೇ, ಯೋಗದ ಹಿಂದೆ ಹೋಗಬೇಕು’ ಎಂದು ಸಲಹೆ ನೀಡಿದರು.

‘ಮಾದಾರ ಚನ್ನಯ್ಯ ಸ್ವಾಮೀಜಿ ಇಲ್ಲೊಂದು ಅದ್ಭುತ ಕ್ರೀಡಾಲೋಕ ಸೃಷ್ಟಿಸಿದ್ದಾರೆ. ಏಕಕಾಲಕ್ಕೆ ನಾಲ್ಕು ಅಂಕಣಗಳಲ್ಲಿ  ನಾಲ್ಕು ಕಡೆ ಬಾಲಕ– ಬಾಲಕಿಯರ ವಾಲಿಬಾಲ್ ಆಡುವುದನ್ನು ಕುಳಿತು ನೋಡಲು ಅಷ್ಟೇ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದಾರೆ. ಇಂಥ ಸಂಘಟನೆ ಮಾಡುವುದು ಬಹಳ ಕಷ್ಟ. ಮನಸ್ಸು ಮಾಡಿದರೆ ಅದು ಇಷ್ಟದ ಕಾರ್ಯವಾಗುತ್ತದೆ. ಅದನ್ನು ಸ್ವಾಮೀಜಿ ಇಲ್ಲಿ ಸಾಬೀತು ಮಾಡಿದ್ದಾರೆ’ ಎಂದು ಶ್ಲಾಘಿಸಿದರು.

‘ವಾಲಿಬಾಲ್ ಆಟ ನೋಡುತ್ತಿದ್ದರೆ, ರನ್ನನ ಗದಾಯುದ್ಧ ವರ್ಣನೆ ನೆನಪಾಗುತ್ತದೆ. ಗದಾಯುದ್ಧದಲ್ಲಿ ಭೀಮ– ದುರ್ಯೋಧನರು ಗದೆಯಿಂದ ಬಡಿದಾಡುತ್ತಾರೆ ಎನ್ನುವುದನ್ನು ರನ್ನ ವರ್ಣಿಸುತ್ತಾನೆ. ಅದೇ ರೀತಿ ಕ್ರೀಡಾಪಟುಗಳು ಚಂಡನ್ನು ಅತ್ತಿಂದಿತ್ತ ದೂಡುತ್ತಾ ತಳ್ಳುತ್ತಾ ಗೆಲುವು ಸಂಪಾದಿಸುತ್ತಾರೆ’ ಎಂದು ಸ್ವಾಮೀಜಿ ವಾಲಿಬಾಲ್ ಪಂದ್ಯವನ್ನು ಗದಾಯುದ್ಧಕ್ಕೆ ಹೋಲಿಸಿದರು.

‘ಸೋಲುವುದು ಸುಲಭ. ಗೆಲ್ಲುವುದು ಕಷ್ಟ. ಕ್ರೀಡಾಕ್ಷೇತ್ರದಲ್ಲಿ ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಗೆದ್ದಾಗ ಬೀಗಬೇಡಿ. ಸೋತಾಗ ಕುಗ್ಗಬೇಡಿ. ಸೋಲ ಗೆಲುವಿನ ಮೆಟ್ಟಿಲು ಎಂದು ಭಾವಿಸಿ’ ಎಂದು ಕಿವಿಮಾತು ಹೇಳಿದರು.

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಮಾತ ನಾಡಿ, ‘ಮಾದಾರ ಚನ್ನಯ್ಯ ಸ್ವಾಮೀಜಿ ಧರ್ಮ ಬೋಧನೆ ಜತೆಗೆ ಯವಕರು ಹೇಗೆ ಇರಬೇಕೆಂದು ಈ ಕ್ರೀಡಾಕೂಟದ ಮೂಲಕ ತೋರಿಸಿದ್ದಾರೆ. ಅವರನ್ನು ಎಲ್ಲರೂ ಅಭಿನಂದಿಸಬೇಕು’ ಎಂದು ಹರ್ಷ ವ್ಯಕ್ತಪಡಿಸಿದರು.

‘ವಾಲಿಬಾಲ್ ಆರೋಗ್ಯವೃದ್ಧಿಸುವ ಕ್ರೀಡೆ. ಯುವಕರಿಗೆ ಸ್ಫೂರ್ತಿ ನೀಡುವ ಆಟ. ಇಂಥ ರಾಷ್ಟ್ರಮಟ್ಟದ ಪಂದ್ಯದಲ್ಲಿ ಆಡುತ್ತಿರುವ ತಂಡದವರು ಅಂತರರಾಷ್ಟ್ರೀಯಮಟ್ಟಕ್ಕೂ ಬೆಳೆಯಲಿ’ ಎಂದು ಈಶ್ವರಪ್ಪ ಅವರು ಶುಭ ಹಾರೈಸಿದರು.

ವೇದಿಕೆಯಲ್ಲಿ ಕೃಷ್ಣಯಾದವಾನಂದ ಸ್ವಾಮೀಜಿ, ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮೂರ್ತಿ, ರಾಷ್ಟ್ರೀಯ ವಾಲಿಬಾಲ್ ಫೆಡರೇಷನ್ ಅಧ್ಯಕ್ಷ ಬೆಟ್ಟೇಗೌಡ ಮತ್ತಿತರರು ಹಾಜರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬಿ.ನೀಲಮ್ಮ ಅವರನ್ನು ಮಾದಾರ ಚನ್ನಯ್ಯ ಸ್ವಾಮೀಜಿ ಸನ್ಮಾನಿಸಿದರು.

ಕಾರ್ಯಕ್ರಮದ ನಂತರ ತರಳಬಾಳು ಶಾಲೆ ಮಕ್ಕಳು ವಚನ ನೃತ್ಯ ಪ್ರದರ್ಶಿಸಿದರು. ಸರ್ಕಾರ ಶಾಲೆಯ ವಿದ್ಯಾರ್ಥಿಗಳ ನೃತ್ಯ ತಂಡ ನೃತ್ಯವನ್ನು ಪ್ರದರ್ಶಿಸಿದರು.

ಚಿತ್ರದುರ್ಗದಲ್ಲಿ  ವಿಭಾಗೀಯ ಕಚೇರಿ: ಭರವಸೆ
ಸಾರಿಗೆ ಇಲಾಖೆಯ ಆಡಳಿತಾತ್ಮಕ ಸಮಿತಿ ಸಭೆಯಲ್ಲಿ ಐದು ಡಿಪೊಗೊಂದು ವಿಭಾಗೀಯ ಕಚೇರಿ ಮಾಡಬೇಕೆಂದು ತೀರ್ಮಾನಿಸಲಾಗಿದೆ. ಈಗಾಗಲೇ ಶಿವಮೊಗ್ಗದಲ್ಲಿ ಕಚೇರಿ ಮಾಡಲಾಗಿದೆ. ಇನ್ನೆರಡು ತಿಂಗಳಲ್ಲಿ ಚಿತ್ರದುರ್ಗದಲ್ಲೂ ವಿಭಾಗೀಯ ಕಚೇರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದ ಅವರು   ಸುದ್ದಿಗಾರರೊಂದಿಗೆ ಮಾತನಾಡಿದರು. ಸಾರಿಗೆ ಇಲಾಖೆಯಿಂದ 5500 ಹೊಸ ಬಸ್ ಖರೀದಿಸುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.