ADVERTISEMENT

ಪ್ರಮಾಣಪತ್ರ ಪಡೆಯಲು ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 22 ಮೇ 2017, 5:14 IST
Last Updated 22 ಮೇ 2017, 5:14 IST

ಚಿಕ್ಕಜಾಜೂರು:  ಹೋಬಳಿಯ ಬಿ ದುರ್ಗ ಗ್ರಾಮದ ನಾಡ ಕಚೇರಿಯ ಲ್ಲಿರುವ ಸೌರ ವಿದ್ಯುತ್‌ ಬ್ಯಾಟರಿಗಳು ಸುಟ್ಟು ಹೋಗಿ ತಿಂಗಳು ಕಳೆದಿದೆ. ಆದರೆ ಇನ್ನೂ ದುರಸ್ತಿ ಆಗದಿರುವ ಕಾರಣ ಹೋಬಳಿಯ ಜನ ಪರದಾಡುವಂತಾಗಿದೆ.

ನಾಡ ಕಚೇರಿಯಲ್ಲಿ ನಾಲ್ಕು ವರ್ಷಗಳ ಹಿಂದೆ 16 ಸೋಲಾರ್‌ ಬ್ಯಾಟರಿಗಳನ್ನು ಅಳವಡಿಸಲಾಗಿತ್ತು. ತಿಂಗಳ ಹಿಂದೆ ಇವು ಸುಟ್ಟು ಹೋಗಿವೆ. ವಿದ್ಯುತ್‌ ಇಲ್ಲದಿದ್ದಾಗ ಕಚೇರಿಯ ಎಲ್ಲಾ ಕಾರ್ಯಗಳು ಸ್ಥಗಿತಗೊಳ್ಳುತ್ತಿವೆ.

ಈ ಬಗ್ಗೆ ತಹಶೀಲ್ದಾರ್‌ ಮತ್ತು ಜಿಲ್ಲಾ ಸಮಾಲೋ ಚಕರಿಗೆ ಮಾಹಿತಿ ನೀಡಲಾಗಿದೆ. ಆದರೂ ಸಂಬಂಧಪಟ್ಟ ಸೌರ ವಿದ್ಯುತ್‌ ಗುತ್ತಿಗೆದಾರರು ಬಂದು ದುರಸ್ತಿ ಮಾಡಿಲ್ಲ ಎಂದು ಪ್ರಭಾರ ಉಪತಹಶೀಲ್ದಾರ್‌ ಸಿದ್ದಪ್ಪ ತಿಳಿಸಿದ್ದಾರೆ.

ADVERTISEMENT

ಸೌರ ವಿದ್ಯುತ್‌ ಘಟಕದ ಗುತ್ತಿಗೆ ಯನ್ನು ಬೆಂಗಳೂರಿನ ಮಿಲೇನಿಯಂ ಸಿನಾರಿಟಿ ಸೋಲಾರ್‌ ಕಂಪೆನಿಗೆ ನೀಡಲಾಗಿತ್ತು. ಆದರೆ, ಕಂಪೆನಿ ಇತ್ತೀಚೆಗೆ ದುರಸ್ತಿ ಸೇವೆ ನಿಲ್ಲಿಸಿದೆ. ಈ ಬಗ್ಗೆ ಬೆಂಗಳೂರಿನ ಅಟಲ್‌ಜಿ ನಿರ್ದೇಶನಾಲಯಕ್ಕೂ ಜಿಲ್ಲಾಧಿಕಾರಿ ಕಚೇರಿಯಿಂದ ಮಾಹಿತಿ ನೀಡಿದ್ದೇವೆ.

ಸದ್ಯಕ್ಕೆ ಜಿಲ್ಲೆಯ ನಾಡ ಕಚೇರಿಗಳಲ್ಲಿ ವಿದ್ಯುತ್‌ ಇಲ್ಲದಿದ್ದಾಗ ಸಮಸ್ಯೆ ಎದುರಾಗುತ್ತಿದೆ. ಸರ್ಕಾರದ ಆದೇಶ ಬಂದ ನಂತರ ಹೊಸದಾಗಿ ಟೆಂಡರ್‌ ಕರೆಯಲಾಗುವುದು ಎಂದು ಜಿಲ್ಲಾ ಸಮಾಲೋಚಕ ಶ್ರೀಕಾಂತ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮೂರು ದಿನಗಳಿಂದ ವೃದ್ಧಾಪ್ಯ ವೇತನ ಅರ್ಜಿ ಸಲ್ಲಿಸಲು ಬರುತ್ತಿದ್ದೇವೆ. ನಾವು ಬಂದಾಗಲೆ ವಿದ್ಯುತ್‌ ಇರುವು ದಿಲ್ಲ. ಮನೆಯ ಕೆಲಸಗಳನ್ನು ಮುಗಿಸಿ ಬರಬೇಕು. ಬಂದರೆ, ವಿದ್ಯುತ್‌ ಇಲ್ಲ ಎಂದು ಕಚೇರಿಯವರು ಹೇಳುತ್ತಾರೆ’ ಎಂದು ಕಾಗಳಗೆರೆ ಗ್ರಾಮದ ವೃದ್ಧೆ ಹೇಮಕ್ಕ ಅಳಲು ತೋಡಿಕೊಂಡರು.

ಕಾಲೇಜಿಗೆ ಮಕ್ಕಳನ್ನು ಸೇರಿಸಬೇಕು. ಅರ್ಜಿ ಸಲ್ಲಿಸಲು ಆದಾಯ ಪ್ರಮಾಣಪತ್ರ ಹಾಗೂ ಜಾತಿ ಪ್ರಮಾಣ ಪತ್ರದ ಅವಶ್ಯಕತೆ ಇದೆ. ಕಚೇರಿ ಆರಂಭವಾದ ಸ್ವಲ್ಪ ಸಮಯದಲ್ಲೇ ವಿದ್ಯುತ್‌ ಪೂರೈಕೆ ವ್ಯತ್ಯಯವಾಗುತ್ತದೆ. ನಿತ್ಯ ಹೋಬಳಿಯ 51 ಹಳ್ಳಿಗಳಿಂದ ನೂರಾರು ಜನ ವಿವಿಧ ಪ್ರಮಾಣ ಪತ್ರಗಳಿಗಾಗಿ ಬರುತ್ತಿರುತ್ತಾರೆ.

ಆದರೆ ಬರಿಗೈಯಲ್ಲಿ ಹಿಂತಿರುಗುವ ಸ್ಥಿತಿ ನಿರ್ಮಾಣವಾಗುತ್ತದೆ. ಸಂಬಂಧಪಟ್ಟ ಇಲಾಖೆ ಜನರ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ ಎಂದು ಗ್ರಾಮದ ಲಕ್ಷ್ಮೀಪತಿ, ವೀರೇಶಪ್ಪ, ಕಾಗಳಗೆರೆಯ ನೀಲಮ್ಮ, ಕೋಟೆಹಾಳ್‌ನ ಜಯಪ್ಪ, ಚಂದ್ರಣ್ಣ ಬೇಸರ ವ್ಯಕ್ತ ಪಡಿಸಿದರು.

ಪ್ರತಿಕ್ರಿಯೆ: ವೃದ್ಧಾಪ್ಯ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಬಂದಿದ್ದೆ, ಕರೆಂಟ್‌ ಇಲ್ಲ ಬಂದ ನಂತರ ಅದನ್ನು ಕಂಪ್ಯೂಟರ್‌ಗೆ ಸೇರಿಸಲಾಗುವುದು. ಕರೆಂಟ್‌ ಇದ್ದಾಗ ಬರಬಾರದೆ ಎಂದು ಕಳೆದ ಎರಡು ಮೂರು ದಿನಗಳಿಂದ ಇಲ್ಲಿ ಹೇಳುತ್ತಿ ದ್ದಾರೆ.

ಮನೆ ಕೆಲಸ, ದನಕರುಗಳನ್ನು ನೋಡಿಕೊಂಡು ಇವರು ಹೇಳಿದ ಸಮಯಕ್ಕೆ ಬರಲು ಸಾಧ್ಯವೇ? ಎಂದು ಕಾಗಳಗೆರೆಯ ಗ್ರಾಮದ ಹೇಮಕ್ಕ, ಗಂಗಮ್ಮ ಪ್ರಶ್ನಿಸಿದರು. ಹೆಚ್ಚು ಗ್ರಾಮಸ್ಥರು ಬಂದು ಕಚೇರಿಯಲ್ಲಿ ಶಾಖಾಧಿಕಾರಿಗಾಗಿ ಅರ್ಧ ಗಂಟೆ ಕಾದರೂ, ಅವರು ಬಾರದಿದ್ದುದನ್ನು ನೋಡಿ ಮಹಿಳೆಯರೇ ಕಚೇರಿಯಲ್ಲಿನ ಅಧಿಕಾರಿಗಳನ್ನು ಹೊರಗೆ ಕಳುಹಿಸಿ, ಬಾಗಿಲು ಹಾಕಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.