ADVERTISEMENT

ಬರಗಾಲದಲ್ಲೂ ಬಂಪರ್ ನವಣೆ ಬೆಳೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 5:10 IST
Last Updated 19 ನವೆಂಬರ್ 2017, 5:10 IST
ಹೊಳಲ್ಕೆರೆ ತಾಲ್ಲೂಕಿನ ಮುಗುಳಿಕಟ್ಟೆಯಲ್ಲಿ ಈಚೆಗೆ ನಡೆದ ನವಣೆ ಬೆಳೆ ಕ್ಷೇತ್ರೋತ್ಸವದಲ್ಲಿ ಯಂತ್ರದ ಮೂಲಕ ಕಟಾವು ಮಾಡುವ ಪ್ರಾತ್ಯಕ್ಷಿಕೆ ನಡೆಯಿತು
ಹೊಳಲ್ಕೆರೆ ತಾಲ್ಲೂಕಿನ ಮುಗುಳಿಕಟ್ಟೆಯಲ್ಲಿ ಈಚೆಗೆ ನಡೆದ ನವಣೆ ಬೆಳೆ ಕ್ಷೇತ್ರೋತ್ಸವದಲ್ಲಿ ಯಂತ್ರದ ಮೂಲಕ ಕಟಾವು ಮಾಡುವ ಪ್ರಾತ್ಯಕ್ಷಿಕೆ ನಡೆಯಿತು   

ಹೊಳಲ್ಕೆರೆ: ತಾಲ್ಲೂಕಿನಲ್ಲಿ ಈ ವರ್ಷ ಕಡಿಮೆ ಮಳೆ ಬಂದರೂ ನವಣೆ ಬೆಳೆ ಉತ್ತಮ ಇಳುವರಿ ಬಂದಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಕೆಂಗೇಗೌಡ ಹೇಳಿದರು. ತಾಳ್ಯ ಹೋಬಳಿಯ ಮುಗಳಿಕಟ್ಟೆ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಲ್ಲಿ ಈಚೆಗೆ ನಡೆದ ನವಣೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬರಗಾಲದ ಮಧ್ಯೆಯೂ ಪ್ರತಿ ಎಕರೆಗೆ ಐದರಿಂದ ಆರು ಕ್ವಿಂಟಲ್ ಕಾಳು ಹಾಗೂ ದನಕರುಗಳಿಗೆ ಉತ್ತಮ ಮೇವು ಲಭಿಸಿದೆ. ನವಣೆ, ಸಜ್ಜೆ, ಸಾಮೆ ಬೆಳೆಗಳು ಗಾತ್ರದಲ್ಲಿ ಕಿರಿದಾದರೂ ಪೌಷ್ಟಿಕಾಂಶಗಳಲ್ಲಿ ಹಿರಿದಾಗಿವೆ. ಸಿರಿಧಾನ್ಯಗಳು ಬರಗಾಲವನ್ನು ಎದುರಿಸಿ ಬೆಳೆಯುವ ಸಾಮರ್ಥ್ಯ ಹೊಂದಿವೆ.

ಅವು ಮೂರು ತಿಂಗಳಲ್ಲಿ ಕಟಾವಿಗೆ ಬರುತ್ತವೆ. ಈ ಪ್ರದೇಶದಲ್ಲಿ 200 ಮಿ.ಮೀ.ಗಿಂತ ಕಡಿಮೆ ಮಳೆ ಬಿದ್ದಿದ್ದರೂ ಉತ್ತಮ ಬೆಳೆ ಬಂದಿದೆ. ಅಕ್ಕಿ, ಗೋಧಿಗಿಂತ ಐದು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್, ವಿಟಮಿನ್ ಹಾಗೂ ಖನಿಜಗಳನ್ನು ಹೊಂದಿರುವ ಸಿರಿಧಾನ್ಯಗಳು ಮನುಷ್ಯನ ಆರೋಗ್ಯಕ್ಕೆ ಸಂಜೀವಿನಿ ಇದ್ದಂತೆ ಎಂದರು.

ADVERTISEMENT

ರೈತರು ಸಿರಿಧಾನ್ಯ ಬೆಳೆಗಾರರ ಸಂಘ ರಚಿಸಿಕೊಂಡು ಸಂಸ್ಕರಣಾ ಘಟಕ ಸ್ಥಾಪಿಸಬೇಕು. ಸಂಸ್ಕರಿಸಿದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಿ ಹೆಚ್ಚು ಲಾಭ ಗಳಿಸಬಹುದು. ಸಿರಿಧಾನ್ಯ ಬೆಳೆಗಾರರನ್ನು ಪ್ರೇರೇಪಿಸಲು ಪ್ರತಿ ಎಕರೆಗೆ ₹ 600 ಪ್ರೋತ್ಸಾಹಧನವನ್ನು ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ.

ಬೆಳೆ ಕಟಾವು ಮಾಡಲು ತಗಲುತ್ತಿದ್ದ ಖರ್ಚನ್ನು ಕಡಿತಗೊಳಿಸಲು ಕಟಾವು ಯಂತ್ರ ಪರಿಚಯಿಸಲಾಗಿದೆ. ಪ್ರತಿ ಗಂಟೆಗೆ ₹ 800 ಬಾಡಿಗೆಯಂತೆ ಕೃಷಿ ಯಂತ್ರಧಾರೆ ಕೇಂದ್ರಗಳಿಂದ ಕಟಾವು ಯಂತ್ರ ಪಡೆಯಬಹುದು ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭಾಗ್ಯಮ್ಮ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯ್ತಿ ಸದಸ್ಯ ಮಂಜುನಾಥ್‌, ಕೃಷಿ ಅಧಿಕಾರಿ ಎನ್‌.ಚಂದ್ರಕುಮಾರ್, ಪ್ರಗತಿಪರ ರೈತ ಮಂಜುನಾಥ್‌, ಗ್ರಾಮದ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.