ADVERTISEMENT

ಬರದಲ್ಲೂ ಬಂತು ಬಂಪರ್‌ ದಾಳಿಂಬೆ ಫಸಲು

ಧರ್ಮಪುರ: ಸಾವಯವ ಕೃಷಿ ಪದ್ಧತಿ ಅಳವಡಿಸಿ ಯಶಸ್ಸು ಪಡೆದ ರೈತ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 5:40 IST
Last Updated 9 ಮಾರ್ಚ್ 2017, 5:40 IST
ಧರ್ಮಪುರ: ವಯಸ್ಸು ಚಿಕ್ಕದಾದರೂ ಅನುಭವವನ್ನೇ ಅನುಭೂತಿಯನ್ನಾಗಿಸಿಕೊಂಡ ಧರ್ಮಪುರದ ರೈತ ತಿಪ್ಪೇಸ್ವಾಮಿ ದಾಳಿಂಬೆ ಬೆಳೆಯಲ್ಲಿ ಯಶಸ್ಸು ಸಾಧಿಸಿ ತಾಲ್ಲೂಕಿನ ರೈತರಿಗೆ ಆಶಾಭಾವನೆ ಮೂಡಿಸಿದ್ದಾರೆ.
 
ಹೆಚ್ಚಿನ ವಿದ್ಯಾಭ್ಯಾಸ ಮಾಡದೆ ಸಂಪೂರ್ಣ ಕೃಷಿಯತ್ತ ದೃಷ್ಟಿ ನೆಟ್ಟ ಇವರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಹೋಬಳಿಯಲ್ಲಿ ಅಧಿಕ ದಾಳಿಂಬೆ ಬೆಳೆದು ಇತರ ರೈತರಿಗೆ ಆದರ್ಶವಾಗಿದ್ದಾರೆ.
 
ಬಯಲುಸೀಮೆ ಚಿತ್ರದುರ್ಗ ಯಾವಾಗಲೂ ಬರದ ಶಾಪಕ್ಕೆ ಒಳಗಾಗುತ್ತದೆ. ಇಲ್ಲಿಯ ರೈತರು ಈಗಾಗಲೇ ಬೇಸಾಯ ತೊರೆದು ದೂರದ ಬೆಂಗಳೂರು ಮತ್ತಿತರ ಕಡೆ ಗುಳೆ ಹೋಗಿದ್ದಾರೆ. ಐತಿಹಾಸಿಕ ಧರ್ಮಪುರ ಕೆರೆ ತುಂಬಿ ಮೂವತ್ತು ವರ್ಷಗಳೇ ಕಳೆದಿವೆ. ಇನ್ನೂ ಈ ಕೆರೆಗೆ ಯಾವುದೇ ನೀರಾವರಿ ಮೂಲವಿಲ್ಲ. ಶತಮಾನದಿಂದಲೂ ಈ ಕೆರೆಗೆ ಫೀಡರ್‌ ಚಾನೆಲ್‌ ಕಲ್ಪಿಸಬೇಕೆಂಬ ಹೋರಾಟದ ಬೇಡಿಕೆ ಹಾಗೆಯೇ ಉಳಿದಿದೆ.
 
ಧರ್ಮಪುರ ಹೋಬಳಿಯ ಸುತ್ತ ಮುತ್ತ 800 ಅಡಿ ಕೊರೆದರೂ ನೀರು ಅಲಭ್ಯ. ತನ್ನ ಜಮೀನಿನಲ್ಲಿದ್ದ ನಾಲ್ಕು ಬೋರ್‌ವೆಲ್‌ಗಳು ನೀರಿಲ್ಲದೆ ನಿಂತಾಗ ಧೃತಿಗೆಡದ ತಿಪ್ಪೇಸ್ವಾಮಿ ಬೇರೆಯವರ ಬೋರ್‌ನಿಂದ ಮತ್ತು ಟ್ಯಾಂಕರ್‌ ನೀರಿನಲ್ಲಿಯೇ ಹನಿ ನೀರಾವರಿ ಅಳವಡಿಸಿ ಯಶಸ್ಸು ಸಾಧಿಸಿದ್ದಾರೆ.
 
ಒಟ್ಟು ನಾಲ್ಕು ಎಕರೆ ಜಮೀನಿನಲ್ಲಿ 1,800 ದಾಳಿಂಬೆ ಗಿಡಗಳನ್ನು ಬೆಳಸಲಾಗಿದೆ. ಪ್ರತಿ ಗಿಡದಲ್ಲಿ ಕನಿಷ್ಟ 60 ರಿಂದ 70 ಹಣ್ಣುಗಳನ್ನು ಕಾಣಬಹುದು. ಪ್ರತಿ ಹಣ್ಣು 500ರಿಂದ 800 ಗ್ರಾಂ ತೂಕ ಬರುತ್ತದೆ. ಈಗಾಗಲೇ ₹ 105ರಂತೆ ಸ್ಥಳದಲ್ಲಿಯೇ ಮಾರಾಟ ಮಾಡಿದ್ದು, ಸುಮಾರು ₹ 20 ಲಕ್ಷ ಆದಾಯ ಗಳಿಸಲಾಗಿದೆ. ಇನ್ನೂ ಕನಿಷ್ಠ ₹ 20 ಲಕ್ಷ ಆದಾಯದ ನಿರೀಕ್ಷೆ ಇದೆ ಎನ್ನುತ್ತಾರೆ ಅವರು.
 
‘ಮರಳಿ ಯತ್ನವ ಮಾಡು, ಮರಳಿ ಯತ್ನವ ಮಾಡು’ ಎನ್ನುವ ಮಾತಿನಂತೆ, ಧರ್ಮಪುರ ಹೋಬಳಿಯಲ್ಲಿ 2006–07ರಲ್ಲಿ 1,300 ಹೆಕ್ಟೇರ್‌ ಪ್ರದೇಶದಲ್ಲಿ ದಾಳಿಂಬೆ ಇತ್ತು. ಆದರೆ, ಬರಸಿಡಿಲಿನಂತೆ ಅಪ್ಪಳಿಸಿದ  ಬ್ಯಾಕ್ಟೀರಿಯಾ ಬ್ಲೈಟ್‌ ದಾಳಿಯ ಪರಿಣಾಮ 2010ರ ವೇಳೆಗೆ ರೈತರು ಸಂಪೂರ್ಣವಾಗಿ ದಾಳಿಂಬೆ ಗಿಡಗಳನ್ನು ತೆಗೆಸಿದರು. ಅದು ಈಗ ಕೇವಲ 100 ಹೆಕ್ಟೇರ್‌ ಪ್ರದೇಶಕ್ಕೆ ಸೀಮಿತವಾಗಿದೆ. ಈಗ ಮತ್ತೆ ರೈತರು ದಾಳಿಂಬೆಯತ್ತ ಮುಖ ಮಾಡಿದ್ದಾರೆ.
 
ತಾಂತ್ರಿಕತೆ: ಧರ್ಮಪುರ ಹೋಬಳಿ ದಾಳಿಂಬೆ ಬೆಳೆಯಲು ಒಳ್ಳೆಯ ವಾತಾವರಣ ಇದೆ. ಎರಡು ವರ್ಷಗಳಿಂದ ದಾಳಿಂಬೆ ಮತ್ತು ಬಾಳೆ ರೋಗಕ್ಕೆ ತುತ್ತಾಗಿ ಬಹಳ ನಿರಾಸೆ ಹೊಂದಿದ್ದ ತಿಪ್ಪೇಸ್ವಾಮಿಗೆ  ತಾಂತ್ರಿಕ ಸಲಹೆ ನೀಡಿ ದೈರ್ಯ ತುಂಬಿದವರು ತಾಂತ್ರಿಕ ಸಲಹೆಗಾರ ಈಶ್ವರಪ್ಪ. ವಿವರಗಳಿಗೆ ಮೊಬೈಲ್‌: 9880892253 ಸಂಪರ್ಕಿಸಬಹುದು. 
ವಿ.ವೀರಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.