ADVERTISEMENT

ಬಿರುಸಿನ ಪ್ರಚಾರ ಆರಂಭಿಸಿದ ಬಿಜೆಪಿ

ಐದು ಜಿಲ್ಲೆ ಒಳಗೊಂಡ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪಚುನಾವಣೆ

ಪ್ರಜಾವಾಣಿ ವಿಶೇಷ
Published 18 ಜನವರಿ 2017, 5:37 IST
Last Updated 18 ಜನವರಿ 2017, 5:37 IST

ಚಿತ್ರದುರ್ಗ:  ವೈ.ಎ.ನಾರಾಯಣಸ್ವಾಮಿ ರಾಜೀನಾಮೆಯಿಂದ ತೆರವಾಗಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಮೂರೂ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ.

ಪಕ್ಷದ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿ, ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿಯು ಚುನಾವಣೆಗೆ ಅಧಿಸೂಚನೆ ಹೊರಡಿಸುವ ಪೂರ್ವದಲ್ಲೇ ಅಭ್ಯರ್ಥಿ ಯನ್ನೂ ಘೋಷಿಸಿ ಪ್ರಚಾರವನ್ನು ಆರಂಭಿಸಿದೆ. ವೈ.ಎ.ನಾರಾಯಣಸ್ವಾಮಿ ರಾಜೀನಾಮೆ ನೀಡಿ ಹೆಬ್ಬಾಳ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಒಂದು ಸುತ್ತು ಜಿಲ್ಲೆಯನ್ನು ಸುತ್ತು ಹಾಕಿದ್ದರು.

ಜೆಡಿಎಸ್‌ನಿಂದ ತುಮಕೂರು ಜಿಲ್ಲೆಯ ಚಿಕ್ಕನಾಯ್ಕಹಳ್ಳಿಯ ರಮೇಶ್ ಬಾಬು ಹಾಗೂ ಕಾಂಗ್ರೆಸ್‌ನಿಂದ ತುಮಕೂರಿನ ಟಿ.ಎಸ್.ನಿರಂಜನ್, ಸುದ್ದಿಗೋಷ್ಠಿ ನಡೆಸಿ, ತಾವು ಸ್ಪರ್ಧಾಕಾಂಕ್ಷಿಗಳೆಂಬುದನ್ನು ಮತದಾರರಿಗೆ ಮಾಹಿತಿ ರವಾನಿಸಿದ್ದರು.

ಈ ನಡುವೆ ಜೆಡಿಎಸ್‌ನಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಪೈಪೋಟಿ ಆರಂಭ ವಾಯಿತು. ಜೆಡಿಎಸ್‌ನಿಂದ ಹರಿಹರ ಶಾಸಕ ಎಚ್.ಎಸ್. ಶಿವಶಂಕರ್ ಸಹೋದರ ಅರವಿಂದ್ ಮತ್ತು ರಮೇಶ್‌ಬಾಬು ನಡುವೆ ಆಯ್ಕೆಯಲ್ಲಿ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ರಮೇಶ್ ಬಾಬು ಅವರನ್ನೇ ಕಣಕ್ಕಿಳಿಸಲು ಜೆಡಿಎಸ್ ತೀರ್ಮಾನಿಸಿತು.

ಈ ಸಂಬಂಧ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಜಿಲ್ಲಾ ಜೆಡಿಎಸ್ ಅಧ್ಯಕ್ಷರಿಗೆ ಪತ್ರ ಬರೆದು, ಚುನಾವಣೆಗೆ ಸಿದ್ಧತೆ ನಡೆಸಲು ಸೂಚಿಸಿದ್ದಾರೆ. ‘ಆ ಪ್ರಕಾರ ಇದೇ 21ರಂದು ಚಿತ್ರ ದುರ್ಗದಲ್ಲಿ ರಮೇಶ್ ಬಾಬು ನೇತೃತ್ವದಲ್ಲಿ ಜೆಡಿಎಸ್ ಮುಖಂಡರ ಸಭೆ ಕರೆಯಲಾಗಿದ್ದು, ಅಂದಿನಿಂದಲೇ ಪ್ರಚಾರ ಆರಂಭವಾಗುತ್ತದೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಯಶೋಧರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿಯಾಗಿ ತುಮಕೂರಿನ ಟಿ.ಎಸ್. ನಿರಂಜನ್ ಅವರ ಹೆಸರು ಅಂತಿಮಗೊಂಡಂತೆ ಕಾಣುತ್ತಿದ್ದರೂ, ಜಿಲ್ಲಾ ಕಾಂಗ್ರೆಸ್‌, ಚಿತ್ರದುರ್ಗ ವ್ಯಾಪ್ತಿಯಲ್ಲಿ ಅಭ್ಯರ್ಥಿಪರ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದಂತೆ ಕಾಣುತ್ತಿಲ್ಲ. ಆದರೆ, ಸಾಮಾನ್ಯವಾಗಿ ಚುನಾವಣಾ ಸಿದ್ಧತೆಯಲ್ಲಿ ಯಾವಗಲೂ ಮುಂದಿರುವ ಬಿಜೆಪಿ, ಈ ಚುನಾವಣೆಯಲ್ಲೂ ಅಭ್ಯರ್ಥಿ ಬಸವರಾಜು ಹೆಸರನ್ನು ಮುಂಚೆಯೇ ಪ್ರಕಟಿಸಿತು.

ಬರ ಅಧ್ಯಯನಕ್ಕೆಂದು ಜಿಲ್ಲೆಗೆ ಬಂದಿದ್ದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಂದ ಪ್ರಚಾರಕ್ಕೆ ಚಾಲನೆ ಕೊಡಿಸಿತು. ಈಗ, ಸೋಮವಾರದಂದು ವಿವಿಧ ವಿಭಾಗಗಳ ಕಾರ್ಯಕರ್ತರೊಂದಿಗೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ನೇತೃತ್ವದಲ್ಲಿ ಸಭೆ ನಡೆದಿದೆ. ಮಂಗಳವಾರದಿಂದ ನಗರದ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮತಯಾಚನೆಯೂ ಆರಂಭವಾಗಿದೆ.

ಈ ಉಪಚುನಾವಣೆ 2018ರ ವಿಧಾನಸಭೆ ಚುನಾವಣೆಯ ರಿಹರ್ಸಲ್‌ ಎಂದೇ ಬಿಂಬಿಸಲಾಗುತ್ತಿದೆ. ಈ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಕೈಗೊಳ್ಳುವ ಪ್ರಚಾರ ತಂತ್ರಗಳು, ಭವಿಷ್ಯದ ವಿಧಾನಸಭಾ ಚುನಾವಣೆ ಯನ್ನು ಗುರಿಯಾಗಿ ಸಿಕೊಂಡು ರೂಪಿಸ ಲಾಗುತ್ತಿದೆ ಎಂಬುದಂತೂ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT