ADVERTISEMENT

ಬೇಜವಾಬ್ದಾರಿಯಿಂದ ₹ 30 ಕೋಟಿ ವ್ಯರ್ಥ: ಸ್ವಾಮೀಜಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2017, 8:53 IST
Last Updated 26 ನವೆಂಬರ್ 2017, 8:53 IST

ಚಿತ್ರದುರ್ಗ: ‘ಬೆಳಗಾವಿಯಲ್ಲಿ ಕೇವಲ 40 ಗಂಟೆ ನಡೆದ ಅಧಿವೇಶನಕ್ಕೆ ₹ 30 ಕೋಟಿ ಖರ್ಚು ಮಾಡಲಾಗಿದೆ. ಇದನ್ನು ಗಮನಿಸಿದರೆ, ನಮ್ಮ ಜನನಾಯಕರ ಬೇಜವಾಬ್ದಾರಿ ಎಷ್ಟಿದೆಯೆಂಬುದು ಅರ್ಥವಾಗುತ್ತದೆ’ ಎಂದು ಹೊಸದುರ್ಗದ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಶನಿವಾರ ಇಲ್ಲಿ ಮಾತನಾಡಿದ ಅವರು, ‘ಹೀಗೆ ಹಣವನ್ನು ವ್ಯರ್ಥ ಮಾಡುವ ಬದಲು ಕಲೆ, ಸಾಹಿತ್ಯ, ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಡ ಪ್ರತಿಭಾವಂತರಿಗೆ ನೀಡಿದ್ದರೆ ಅವರ ಕುಟುಂಬಕ್ಕೆ ಆಸರೆಯಾಗುತ್ತಿತ್ತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೆಲವರ ಬಳಿ ಸಾಕಷ್ಟು ಹಣವಿದೆ. ಅದು ಸತ್ಕಾರ್ಯಗಳಿಗೆ ಬಳಕೆ ಆಗುತ್ತಿಲ್ಲ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದಾಗ ಜರ್ಜರಿತರಾಗುವ ಬದಲು ಉತ್ತಮ ಕಾರ್ಯಗಳಿಗೆ ಬಳಕೆ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

‘ಮೈಸೂರಿನಲ್ಲಿ ಶುಕ್ರವಾರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನ ಅಧ್ಯಕ್ಷ ಚಂದ್ರಶೇಖರ ಪಾಟೀಲ ಅವರು, ಕನ್ನಡದ ಕುರಿತು ಆಸಕ್ತಿ ಇಲ್ಲದ ಶಿಕ್ಷಣ ಸಚಿವರನ್ನು ಮೊದಲು ಬದಲಾಯಿಸಿ ಎಂದು ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ. ಕೇವಲ ಅವರೊಬ್ಬರೇ ಅಲ್ಲ. ನಿಜವಾಗಿಯೂ ಎಲ್ಲ ಸಚಿವರಿಗೂ ಕನ್ನಡದ ಬಗ್ಗೆ ಒಲವು ಇದ್ದಿದ್ದರೆ, ರಾಜ್ಯದ ಕನ್ನಡ ಶಾಲೆಗಳನ್ನು ಮುಚ್ಚುವಂಥ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ’ ಎಂದು ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.