ADVERTISEMENT

‘ರಾಮಗಿರಿ ಅಭಿವೃದ್ಧಿಗೆ ₹ 104 ಕೋಟಿ’

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 8:33 IST
Last Updated 16 ಏಪ್ರಿಲ್ 2017, 8:33 IST

ಹೊಳಲ್ಕೆರೆ: ‘ರಾಮಗಿರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ₹ 104 ಕೋಟಿ ಅನುದಾನ ಒದಗಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.ತಾಲ್ಲೂಕಿನ ರಾಮಗಿರಿಯಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

‘ಅತ್ಯಂತ ಹಿಂದುಳಿದ ರಾಮಗಿರಿ ಹೋಬಳಿಗೆ ಹೆಚ್ಚು ಅನುದಾನ ನೀಡಿದ್ದೇನೆ. ರಸ್ತೆ, ಆಸ್ಪತ್ರೆ, ಸಮುದಾಯ ಭವನಗಳನ್ನು ನಿರ್ಮಿಸುತ್ತಿದ್ದೇನೆ. ನಮ್ಮ ಸರ್ಕಾರ ಬಡವರಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ’ ಎಂದರು.

‘ಜನರು ಸೌಲಭ್ಯಗಳನ್ನು ಪಡೆಯಲು ಸರ್ಕಾರದ ಬಳಿಗೆ ಬರಬಾರದು. ಸರ್ಕಾರವೇ ಜನರ ಬಳಿಗೆ ಹೋಗಿ ಸಮಸ್ಯೆ ಬಗೆಹರಿಸಬೇಕು ಎಂಬ ಉದ್ದೇಶ
ದಿಂದ ಗ್ರಾಮ ವಾಸ್ತವ್ಯ ನಡೆಸುತ್ತಿದ್ದೇನೆ. ಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಜನಸ್ನೇಹಿಯಾಗಿ ಕೆಲಸ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ’ ಎಂದು ಆಂಜನೇಯ ಹೇಳಿದರು.

ADVERTISEMENT

ಜವಾಬ್ದಾರಿ ಹೆಚ್ಚಿದೆ: ‘ಸಮಾಜ ಕಲ್ಯಾಣ ಇಲಾಖೆ ದೊಡ್ಡ ಇಲಾಖೆಯಾಗಿದ್ದು,ಶೇ 85ರಷ್ಟು ಜನ ಇದರ ವ್ಯಾಪ್ತಿಗೆ ಬರುತ್ತಾರೆ. ಹೀಗಾಗಿ ಕ್ಷೇತ್ರಕ್ಕೆ ಭೇಟಿ ನೀಡಲು ಸಮಯ ಸಾಕಾಗುತ್ತಿಲ್ಲ. ಕೇವಲ ಕ್ಷೇತ್ರದಲ್ಲೇ ಇದ್ದರೆ ಸಚಿವರು ಯಾವ ಜಿಲ್ಲೆಗೂ ಭೇಟಿ ಕೊಟ್ಟಿಲ್ಲ. ವಿಧಾನಸೌಧದಲ್ಲೂ ಸಿಗುವುದಿಲ್ಲ. ನಿಷ್ಕ್ರಿಯ ಸಚಿವರು ಎಂದು ಟೀಕೆ ಮಾಡುತ್ತಾರೆ. ನಾನು ಸಚಿವನಾದರೂ ಕ್ಷೇತ್ರವನ್ನು ಕಡೆಗಣಿಸಿಲ್ಲ. ಎಲ್ಲಾ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ’ ಹೇಳಿದರು.

257 ಮಹಿಳೆಯರಿಗೆ ಸಹಾಯಧನದ ಸಾಲ, ಕೃಷಿಭಾಗ್ಯ, ವಸತಿ ಯೋಜನೆ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ಗಂಗಾಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಮೋಟಾರ್, ಪಂಪ್ ವಿತರಿಸಲಾಯಿತು. 103 ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್‌, ಸ್ಟೌ ವಿತರಿಸಲಾಯಿತು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಜಿಲ್ಲಾಧಿಕಾರಿ ಶ್ರೀರಂಗಯ್ಯ, ಜಿಲ್ಲಾ ಪಂಚಾಯ್ತಿ ಸಿಇಒ ನಿತೇಶ್ ಪಾಟೀಲ್, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸವಿತಾ ಬಸವರಾಜ್, ತಾಲ್ಲೂಕು ಪಂಚಾಯ್ತಿ ಇಒ ಬಾಲಸ್ವಾಮಿ ದೇಶಪ್ಪ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಡಿ.ಉಮೇಶ್, ತಹಶೀಲ್ದಾರ್ ಸೋಮಶೇಖರ್, ತಾಲ್ಲೂಕು ಪಂಚಾಯ್ತಿ ಸದಸ್ಯ ರಾಮಚಂದ್ರಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಕುಮಾರ್, ನೀಲಮ್ಮ, ಪಾಡಿಗಟ್ಟೆ ಸುರೇಶ್,ಗಂಗಾಧರ್, ರಾಜಪ್ಪ, ಹೇಮಂತ್ ಕುಮಾರ್, ರಾಜೇಶ್, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.