ADVERTISEMENT

ರಾಷ್ಟ್ರೀಯ ಪಕ್ಷಗಳಿಂದ ರಾಜ್ಯ ಅಭಿವೃದ್ಧಿಯಾಗದು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 8:40 IST
Last Updated 22 ಆಗಸ್ಟ್ 2017, 8:40 IST
ಚಿತ್ರದುರ್ಗದಲ್ಲಿ ಸೋಮವಾರ ನಡೆದ ಜೆಡಿಎಸ್ ಪರಿಶಿಷ್ಟ ಜಾತಿ, ಪಂಗಡ ಸಂಘಟನಾ ಸಭೆಯಲ್ಲಿ ಜೆಡಿಎಸ್ ಮುಖಂಡ ಅನ್ನದಾನಿ ಮಾತನಾಡಿದರು.
ಚಿತ್ರದುರ್ಗದಲ್ಲಿ ಸೋಮವಾರ ನಡೆದ ಜೆಡಿಎಸ್ ಪರಿಶಿಷ್ಟ ಜಾತಿ, ಪಂಗಡ ಸಂಘಟನಾ ಸಭೆಯಲ್ಲಿ ಜೆಡಿಎಸ್ ಮುಖಂಡ ಅನ್ನದಾನಿ ಮಾತನಾಡಿದರು.   

ಚಿತ್ರದುರ್ಗ: ರಾಷ್ಟ್ರೀಯ ಪಕ್ಷಗಳಿಂದ ರಾಜ್ಯ ಎಂದಿಗೂ ಅಭಿವೃದ್ಧಿಯಾಗದು. ಆದ್ದರಿಂದ ಜೆಡಿಎಸ್ ಅನ್ನು ಅಧಿಕಾರಕ್ಕೆ ತರುವ ಮೂಲಕ ಪ್ರಗತಿಯ ಮುನ್ನುಡಿ ಬರೆಯೋಣ ಎಂದು ಜೆಡಿ ಎಸ್ ಪರಿಶಿಷ್ಟ ಜಾತಿ ರಾಜ್ಯ ಘಟಕದ ಅಧ್ಯಕ್ಷ ಅನ್ನದಾನಿ ಪಕ್ಷದ ಸಂಘಟಕರಿಗೆ, ಕಾರ್ಯಕರ್ತರಿಗೆ ಸಲಹೆ ನೀಡಿದರು.

ಜೆಡಿಎಸ್‌ ಜಿಲ್ಲಾ ಘಟಕದಿಂದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಪಕ್ಷದ ಪರಿಶಿಷ್ಟ ಜಾತಿ, ಪಂಗಡ ಘಟಕದ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುವುದೇ ನಮ್ಮ ಉದ್ದೇಶವಾಗಿದೆ. ಅದಕ್ಕಾಗಿ ಸೆ. 21ರಂದು ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿ, ಪಂಗಡ ಸಮುದಾಯದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಈ ಮೂಲಕ ಶಕ್ತಿ ಪ್ರದರ್ಶಿಸಲು ಮುಂದಾಗಿದ್ದೇವೆ ಎಂದರು.

ADVERTISEMENT

ಕಾಂಗ್ರೆಸ್ ಕೊಡುಗೆ ಏನಿಲ್ಲ: ‘ದಲಿತರ ಪರವಾಗಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಯಾವುದೇ ಯೋಜನೆ ಜಾರಿಗೆ ತಂದಿಲ್ಲ. ಗಂಗಾ ಕಲ್ಯಾಣ ಯೋಜನೆಯನ್ನು ದಲಿತರಿಗೆ ಕೊಡುಗೆಯಾಗಿ ನೀಡಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಎಂಬುದನ್ನು ಯಾರೂ ಮರೆಯಬಾರದು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಹೆಚ್ಚಿನ ಕೊಡುಗೆ ನೀಡಿರುವುದು ಜೆಡಿಎಸ್. ಆದ್ದರಿಂದ ನಮ್ಮ ಪಕ್ಷವನ್ನು ಬೆಂಬಲಿಸಿ’ ಎಂದು ಮನವಿ ಮಾಡಿದರು.

ಮಾಜಿ ಸಚಿವ, ಹಾಲಿ ಶಾಸಕ ಬಿ.ಬಿ.ನಿಂಗಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಕ್ಷದ ಈ ಎರಡೂ ಘಟಕ, ಸಮುದಾಯದಿಂದ ರಾಜ್ಯ ರಾಜಕಾರಣದ ದಿಕ್ಕನ್ನು ಬದಲಿಸುವ ದಿಟ್ಟ ಹೆಜ್ಜೆ ಇಡಬೇಕಿದೆ ಎಂದು ಸಲಹೆ ನೀಡಿದರು. 

ದೇಶದ ಜನಸಂಖ್ಯೆಯಲ್ಲಿ ಶೇ 25ರಷ್ಟಿರುವ ಪರಿಶಿಷ್ಟ ಜಾತಿ, ಪಂಗಡದ ಸಮುದಾಯದವರು ಮನಸ್ಸು ಮಾಡಿದರೆ ರಾಷ್ಟ್ರದ ರಾಜಕೀಯ ಚಿತ್ರಣವನ್ನು ಬದಲಿಸು
ವಷ್ಟು ಶಕ್ತಿಶಾಲಿಗಳಾಗಿದ್ದಾರೆ. ಆದರೆ, ರಾಜಕೀಯ ಪ್ರಜ್ಞೆ ಇಲ್ಲದ ಕಾರಣ ಇಂದಿಗೂ ಅವಮಾನ, ನೋವು ಅನುಭವಿಸುತ್ತಿದ್ದಾರೆ. ಆದ್ದರಿಂದ ತಳಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಲು ಜೆಡಿಎಸ್ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.

ಸಿನಿಮಾ ನಟ–ನಟಿಯರಿಗೆ, ಸಂಜಯ್‌ ಗಾಂಧಿಗೆ ಭಾರತ ರತ್ನ ಪ್ರಶಸ್ತಿ ನೀಡಿದ ಕಾಂಗ್ರೆಸ್‌ಗೆ ಸಂವಿಧಾನವನ್ನೇ ಕೊಡುಗೆಯಾಗಿ ನೀಡಿದ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರಿಗೆ ‘ಭಾರತ ರತ್ನ’ ನೀಡಬೇಕು ಎಂದು ಎನಿಸಲಿಲ್ಲವೇ ಎಂದು ಪ್ರಶ್ನಿಸಿದ ಅವರು, ‘ಅಂಬೇಡ್ಕರ್ ಅವರ ಸೋಲಿಗೂ ಕಾಂಗ್ರೆಸ್‌ ನೇರ ಕಾರಣವಾಗಿದೆ.

ನೆಪಮಾತ್ರಕ್ಕೆ ನಮ್ಮದು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಪಕ್ಷ ಎಂದು ಹೇಳಿಕೊಂಡು ವಂಚಿಸುತ್ತ ಬಂದಿದೆ’ ಎಂದು ದೂರಿದರು. ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ. ಯಶೋಧರ ಪ್ರಾಸ್ತವಿಕವಾಗಿ ಮಾತನಾಡಿದರು.  ಜೆಡಿಎಸ್ ರಾಜ್ಯ ಪ್ರತಿನಿಧಿ ಬಿ. ಕಾಂತರಾಜ್, ಪಕ್ಷದ ಮುಖಂಡರಾದ ಕಾಶಮಯ್ಯ, ಪಟೇಲ್‌ ತಿಪ್ಪೇಸ್ವಾಮಿ, ಶಿವಪ್ರಸಾದ್, ನಂದೀಶ್, ಶೇಖರ್, ಶ್ರೀನಿವಾಸ್ ಗದ್ಗಿಗೆ, ಎತ್ತನಟ್ಟಿಗೌಡ, ಮಹದೇವಪ್ಪ, ವೆಂಕಟೇಶ್, ಜಯಶೀಲ ನಾಯಕ, ಸಣ್ಣ ತಿಮ್ಮಪ್ಪ, ಭೀಮಪ್ಪ, ಸುಜಾತ, ಲಲಿತಾ ಕೃಷ್ಣಮೂರ್ತಿ, ಜೆಡಿಎಸ್‌ ಪರಿಶಿಷ್ಟ ಪಂಗಡ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಶಂಕರಪ್ಪ, ಪ್ರತಾಪ್‌ ಜೋಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.