ADVERTISEMENT

ರೈತರ ಸ್ವಾಭಿಮಾನಕ್ಕಾಗಿ ತೋಟ ನಿರ್ಮಿಸಿ

ತೋಟಗಾರಿಕೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 9:03 IST
Last Updated 16 ನವೆಂಬರ್ 2017, 9:03 IST

ಚಿತ್ರದುರ್ಗ: ‘ಗಂಗಾ ಕಲ್ಯಾಣ ಯೋಜನೆಯ ಅರ್ಹ ಫಲಾನುಭವಿಗಳಿಗೆ ನೂತನವಾಗಿ ತೋಟಗಳನ್ನು ನಿರ್ಮಿಸಿಕೊಡಿ. ಅವರು ಸ್ವಾಭಿಮಾನದಿಂದ ಬದುಕುವಂತೆ ಮಾಡಿ’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ತೋಟಗಾರಿಕೆ ಅಧಿಕಾರಿಗೆ ಸೂಚನೆ ನೀಡಿದರು.

ಇಲ್ಲಿ ಬುಧವಾರ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

14ನೇ ಹಣಕಾಸು ಯೋಜನೆಯಡಿ ಈಗಾಗಲೇ 186 ಗ್ರಾಮ ಪಂಚಾಯ್ತಿಗಳಿಗೆ ಅನುದಾನ ನೀಡಲಾಗಿದೆ. 79ಪಂಚಾಯ್ತಿಗಳು ಮಾತ್ರ ಕ್ರಿಯಾಯೋಜನೆ ತಯಾರಿಸಿ ಸಲ್ಲಿಸಿವೆ. ಅದರಲ್ಲಿ ಏಳು ಪಂಚಾಯ್ತಿಗಳು ಕ್ರಿಯಾಯೋಜನೆಗೆ ಜಿಲ್ಲಾ ಪಂಚಾಯ್ತಿಯಿಂದ ಅನುಮೋದನೆ ಪಡೆದಿವೆ. ಉಳಿದ ಪಂಚಾಯ್ತಿಗಳೇಕೆ ಕ್ರಿಯಾ ಯೋಜನೆ ತಯಾರಿಸುತ್ತಿಲ್ಲ? ನೀಡಿರುವ ಅನುದಾನ ಏಕೆ ಖರ್ಚು ಮಾಡುತ್ತಿಲ್ಲ? ಎಂದು ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ADVERTISEMENT

ಎಲ್ಲ ಗ್ರಾಮ ಪಂಚಾಯ್ತಿಗಳ ಪಿಡಿಒಗಳು ನ.18ರೊಳಗೆ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾ ಪಂಚಾಯ್ತಿಯಿಂದ ಅನುಮೋದನೆ ಪಡೆದು ಕಾಮಗಾರಿ ಪ್ರಾರಂಭಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪಿ.ಎನ್‌.ರವೀಂದ್ರ ಸೂಚನೆ ನೀಡಿದರು.

ಜಿಲ್ಲೆಯಾದ್ಯಂತ ಅಂತರ್ಜಲ ಮಟ್ಟ ವೃದ್ಧಿಸಲು 70ಕ್ಕೂ ಹೆಚ್ಚಿನ ಚೆಕ್ ಡ್ಯಾಂ ನಿರ್ಮಿಸಲು ತೀರ್ಮಾನಿಸಿ ಅನೇಕ ದಿನಗಳಾಗಿವೆ. ಈವರೆಗೂ ಒಂದು ನಿರ್ಮಾಣವಾಗಿಲ್ಲ. ಕೂಡಲೇ ಗುಣಮಟ್ಟದ ಕಾಮಗಾರಿ ಆರಂಭಿಸಬೇಕು ಎಂದು ಅಧ್ಯಕ್ಷರು ತಾಕೀತು ಮಾಡಿದರು.

ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ನಿರ್ಮಿಸಲು ಹೆಚ್ಚುವರಿಯಾಗಿ ₹ 5 ಸಾವಿರ ನೀಡಲಾಗಿದೆ. ಆದರೂ ನಿರ್ಮಿತಿ ಕೇಂದ್ರದವರು ಇನ್ನೂ ಕಾಮಗಾರಿ ಆರಂಭಿಸಿಲ್ಲ. ಒಂದು ತಿಂಗಳ ಒಳಗೆ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ₹ 20 ಸಾವಿರ ವೆಚ್ಚದಲ್ಲಿ ಗುಣಮಟ್ಟದ ಶೌಚಾಲಯ ನಿರ್ಮಾಣವಾಗಬೇಕು ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.

‘ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿಗಳಲ್ಲಿ ಶೌಚಾಲಯ ನಿರ್ಮಿಸಲಾಗಿದ್ದು, ನೀವೇ ಬಳಕೆ ಮಾಡದಿದ್ದರೆ ಯಾರೂ ಬಳಕೆ ಮಾಡಲಿದ್ದಾರೆ ಎಂದು ಸಿಇಒ ಅವರು ಇಒಗಳಿಗೆ ತರಾಟೆ ತೆಗೆದುಕೊಂಡರು. ಅಂಗನವಾಡಿ, ಶಾಲಾ ಕಟ್ಟಡಗಳ ದುರಸ್ತಿ, ನೂತನ ಕಟ್ಟಡ ನಿರ್ಮಾಣದ ಪ್ರಗತಿ ಬಗ್ಗೆ ವಾರಕ್ಕೊಮ್ಮೆ ಗಮನಹರಿಸಬೇಕು’ ಎಂದು ಹೇಳಿದರು.

ಜಿಲ್ಲೆಯ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ಬಾಕಿ ಇರುವ ಆಕ್ಷೇಪಣೆ ಮೊತ್ತವನ್ನು ಯಾಕೆ ವಸೂಲು ಮಾಡುತ್ತಿಲ್ಲ ಎಂದು ಪ್ರಶ್ನಿಸಿದ ಸಿಇಒ, ಅಡ್‌ಹಾಕ್ ಸಮಿತಿ ನೀಡಿರುವ ವರದಿ ಅನ್ವಯ ನೂರಾರು ಕೋಟಿ ರೂಪಾಯಿ ಜಿಲ್ಲೆಯಲ್ಲಿ ಬಾಕಿ ಇದ್ದು, ಕಡ್ಡಾಯವಾಗಿ ಪಿಡಿಒಗಳಿಂದ ಬಾಕಿ ವಸೂಲಿ ಮಾಡಬೇಕು ಎಂದು ಇಒಗಳಿಗೆ ಸೂಚನೆ ನೀಡಿದರು.

ಸೈನಿಕ ಹುಳುಗಳ ದಾಳಿಯಿಂದ ಫಸಲು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ದೊರೆಯಬೇಕು. ಬೆಳೆ ಸಮೀಕ್ಷೆಗೆ ತೆರಳುವ ಅಧಿಕಾರಿಗಳು ಕಡ್ಡಾಯವಾಗಿ ಯಾವ ರೈತರ ಜಮೀನನ್ನೂ ಕೈ ಬಿಡದೆ ಕಡ್ಡಾಯವಾಗಿ ಸಮೀಕ್ಷೆ ಮಾಡಿಕೊಂಡು ಬರಬೇಕು ಎಂದು ಅಧ್ಯಕ್ಷರು ತಿಳಿಸಿದರು.

ಉಪಾಧ್ಯಕ್ಷೆ ಸುಶೀಲಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗೇಂದ್ರ ನಾಯ್ಕ್, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.