ADVERTISEMENT

ರೈತ ಸಂಘದಿಂದ 11ರಂದು ಉದ್ದೇಶಿತ ಪ್ರತಿಭಟನೆ ರದ್ದು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 6:30 IST
Last Updated 8 ನವೆಂಬರ್ 2017, 6:30 IST

ಹಿರಿಯೂರು: ‘ತಾಲ್ಲೂಕು ರೈತ ಸಂಘದವರು ಆರೋಪಿಸಿರುವಂತೆ ಹಿರಿಯೂರಿನ ಕೃಷಿ ಮಾರುಕಟ್ಟೆಯಲ್ಲಿ ವರ್ತಕರು ಶೇಂಗಾಕ್ಕೆ ಕಡಿಮೆ ಬೆಲೆ ನಮೂದಿಸಿಲ್ಲ. ಬೇರೆ ಮಾರುಕಟ್ಟೆಗಳಿಗಿಂತ ಇಲ್ಲಿನ ದರ ಹೆಚ್ಚಿದೆ. ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ತರುವ ಮೂಲಕ ಪ್ರಯೋಜನ ಪಡೆಯಬೇಕು’ ಎಂದು ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಈರಲಿಂಗೇಗೌಡ ಮನವಿ ಮಾಡಿದರು.

ನಗರದ ಕೃಷಿ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ರೈತರು, ಖರೀದಿದಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ನ. 4ರಂದು ಮಾರುಕಟ್ಟೆಗೆ ತಂದಿದ್ದ ಶೇಂಗಾಕ್ಕೆ ಖರೀದಿದಾರರು ಕಡಿಮೆ ದರ ನಮೂದಿಸಿದ್ದಾರೆ ಎಂದು ರೈತರು ಪ್ರತಿಭಟನೆ ನಡೆಸಿದರು. ನಾವು ರಾಜ್ಯದ ಇತರ ಮಾರುಕಟ್ಟೆಗಳಲ್ಲಿ ಹಾಕಿರುವ ದರವನ್ನು ತರಿಸಿ ನೋಡಿದೆವು. ನಮ್ಮ ಮಾರುಕಟ್ಟೆಯಲ್ಲೇ ದರ ಹೆಚ್ಚಿರುವುದು ಕಂಡು ಬಂತು’ ಎಂದು ಅವರು ತಿಳಿಸಿದರು.

‘ಸಮಿತಿಯಲ್ಲಿ ಇರುವವರೆಲ್ಲ ರೈತರೇ ಆಗಿದ್ದು, ರೈತರ ಹಿತಕ್ಕೆ ಮೊದಲ ಆದ್ಯತೆ ಕೊಡುತ್ತೇವೆ. ಹಾಗೆಂದು ವರ್ತಕರಿಗೆ ಇಷ್ಟೇ ದರ ನಮೂದಿಸಿ ಎಂದು ಹೇಳಲು ಸಾಧ್ಯವಿಲ್ಲ. ಶೇಂಗಾ ಖರೀದಿಗೆ ಸ್ಥಳೀಯರೂ ಸೇರಿದಂತೆ ಚಿತ್ರದುರ್ಗ ಮತ್ತು ಚಳ್ಳಕೆರೆಯಿಂದ ಸುಮಾರು 40 ವರ್ತಕರು ಬಂದಿದ್ದರು. ತೂಕದಲ್ಲಿ ಮೋಸ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ಕೊಟ್ಟಿಲ್ಲ, ಕೊಡುವುದೂ ಇಲ್ಲ’ ಎಂದು ಭರವಸೆ ನೀಡಿದರು.

ADVERTISEMENT

‘ಮಾರುಕಟ್ಟೆ ಸಮಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದು ಬೇಡ. ಈ ರೀತಿ ಮಾಡಿದಲ್ಲಿ ರೈತರಿಗೆ ತಪ್ಪು ಸಂದೇಶ ಹೋಗುತ್ತದೆ. ರಾಜ್ಯದ ಬೇರೆ ಮಾರುಕಟ್ಟೆಗಳಿಗಿಂತ ಹೆಚ್ಚಿನ ದರ ನಮೂದಿಸುವಂತೆ ಖರೀದಿದಾರರನ್ನು ಮನ ಒಲಿಸುತ್ತೇವೆ. ಬೇರೆ ಮಾರುಕಟ್ಟೆಗಳಲ್ಲಿ ಏನು ದರ ನಮೂದಿಸಿದೆ ಎಂದು ರೈತರಿಗೆ ಮಾಹಿತಿ ಕೊಡುತ್ತೇವೆ. ಐದಾರು ವರ್ಷಗಳ ನಂತರ ಮಾರುಕಟ್ಟೆಗೆ ಶೇಂಗಾ ಬರುತ್ತಿದೆ. ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಬೇಡ. ರೈತ ಸಂಘದವರು, ಬೆಳೆಗಾರರು, ವರ್ತಕರು ಸಹಮತದಿಂದ ಹೋಗೋಣ’ ಎಂದು ಈರಲಿಂಗೇಗೌಡ ಮನವಿ ಮಾಡಿದರು.

ಈ ವಿವರಣೆಯಿಂದ ತೃಪ್ತರಾದ ರೈತಸಂಘದವರು ನ.11ರಂದು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಹಿಂದೆ ಪಡೆದಿರುವುದಾಗಿ ಪ್ರಕಟಿಸಿದರು. ಸಭೆಯಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಸಿ.ಹೊರಕೇರಪ್ಪ, ಖರೀದಿದಾರರ ಸಂಘದ ಅಧ್ಯಕ್ಷ ಧನರಾಜ್, ದಲ್ಲಾಲರ ಸಂಘದ ಅಧ್ಯಕ್ಷ ಚಂದ್ರಣ್ಣ, ಮಾರುಕಟ್ಟೆ ಸಮಿತಿಯ ಸದಸ್ಯರಾದ ಮಲ್ಲಾನಾಯಕ, ಆರ್.ಜಗನ್ನಾಥ್, ವೇದಮೂರ್ತಿ, ಲಕ್ಷ್ಮಕ್ಕ, ನಾಗರಾಜು ಹಾಗೂ ನಗರಠಾಣೆ ಪಿಎಸ್ಐ ವೆಂಕಟೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.