ADVERTISEMENT

ಷಟ್ಪಥ ರಸ್ತೆಗೆ ಹಸಿರು ನಿಶಾನೆ

ಕ್ಯಾದಿಗೆರೆ–ಸೀಬಾರ ಬೈಪಾಸ್, ಮೇಲ್ಸೇತುವೆ, ಕೆಳಸೇತುವೆಗಳ ನಿರ್ಮಾಣ

ಗಾಣಧಾಳು ಶ್ರೀಕಂಠ
Published 28 ಮಾರ್ಚ್ 2017, 5:17 IST
Last Updated 28 ಮಾರ್ಚ್ 2017, 5:17 IST
ಷಟ್ಪಥ ರಸ್ತೆಗೆ ಹಸಿರು ನಿಶಾನೆ
ಷಟ್ಪಥ ರಸ್ತೆಗೆ ಹಸಿರು ನಿಶಾನೆ   
ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಚಿತ್ರದುರ್ಗ – ಹಾವೇರಿವರೆಗೆ ಆರು ಪಥಗಳ (ಷಟ್ಪಥ) ರಸ್ತೆ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿದ್ದು, ಸೆಪ್ಟೆಂಬರ್ ಒಳಗೆ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ.
 
ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಚಿತ್ರದುರ್ಗದಿಂದ ಹಾವೇರಿವರೆಗೆ ಒಟ್ಟು 151 ಕಿ.ಮೀ ಉದ್ದದ ಆರು ಪಥಗಳ ರಸ್ತೆ ನಿರ್ಮಾಣವಾಗುತ್ತಿದೆ. ಇದರಲ್ಲಿ ಚಿತ್ರದುರ್ಗ – ದಾವಣಗೆರೆ - 72.70 ಕಿ.ಮೀ ಹಾಗೂ ದಾವಣಗೆರೆ – ಹಾವೇರಿ 78.92 ಕಿ.ಮೀ ರಸ್ತೆ ಒಳಗೊಂಡಿದೆ. 
 
ಷಟ್ಪಥ ರಸ್ತೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಚಿತ್ರದುರ್ಗ– ದಾವಣಗೆರೆ ಭಾಗದ ಕಾಮಗಾರಿಗಾಗಿ ಕಡಿಮೆ ಬಿಡ್ ಕೂಗಿರುವ ಆಗ್ರಾ ಮೂಲದ ಪಿಎನ್ ಸಿ ಕಂಪೆನಿಗೆ ರಸ್ತೆ ನಿರ್ಮಾಣದ ಗುತ್ತಿಗೆ ದೊರೆತಿದೆ.
 
‘ಇದೇ 31ರೊಳಗೆ ಕಂಪೆನಿಯವರು ರಸ್ತೆ ಕಾಮಗಾರಿ ಕೈಗೊಳ್ಳಲು ಒಪ್ಪಿಗೆ ಪತ್ರ ನೀಡುವ ಸಾಧ್ಯತೆ ಇದೆ. ಒಪ್ಪಿಗೆ ಪತ್ರ ಸಲ್ಲಿಸಿ ಆರು ತಿಂಗಳೊಳಗೆ ಕಾಮಗಾರಿ ಆರಂಭಿಸಬೇಕಾಗುತ್ತದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸೋಮಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
 
ದಾವಣಗೆರೆ – ಹಾವೇರಿ ನಡುವಿನ ಷಟ್ಪಥ ಕಾಮಗಾರಿ ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಆದರೆ ಇನ್ನೂ ಬಿಡ್ ತೆರೆದಿಲ್ಲ. ಆ ಪ್ರಕ್ರಿಯೆ ಕೂಡ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.  ಏಕಕಾಲದಲ್ಲೇ ಎರಡೂ ಕಡೆಯ ಕಾಮಗಾರಿಗಳು ಆರಂಭವಾಗಬಹುದು ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.
 
ಕ್ಯಾದಿಗೆರೆ – ಸೀಬಾರ ಬೈಪಾಸ್ : ಷಟ್ಪತ ರಸ್ತೆ ನಿರ್ಮಾಣದ ‘6 ಲೇನ್’ ಯೋಜನೆಯಲ್ಲಿ, ಚಿತ್ರದುರ್ಗ ತಾಲ್ಲೂಕಿನ ಕ್ಯಾದಿಗೆರೆಯಿಂದ ಸೀಬಾರಕ್ಕೆ ಸಂಪರ್ಕ ಕಲ್ಪಿಸುವ ಚತುಷ್ಪಥ ಬೈಪಾಸ್ ರಸ್ತೆ ಕಾಮಗಾರಿಯೂ ಒಳಗೊಂಡಿದೆ.  ಈ ಬೈಪಾಸ್‌ ನಿರ್ಮಾಣದ ವೇಳೆ ಭವಿಷ್ಯದಲ್ಲಿ ಷಟ್ಪಥ ರಸ್ತೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ..
 
ಕ್ಯಾದಿಗೆರೆಯಿಂದ ಆರಂಭವಾಗುವ ಈ ಬೈಪಾಸ್ ರಸ್ತೆ ದೊಡ್ಡಸಿದ್ದವ್ವನಹಳ್ಳಿ, ಮದಕರಿಪುರ, ರಾಷ್ಟ್ರೀಯ ಹೆದ್ದಾರಿ 13 (ಮಲ್ಲಾಪುರ ಸಮೀಪ), ಗೋನೂರು, ತಮಟಕಲ್ಲು ಮೂಲಕ ಸೀಬಾರ (ಗುತ್ತಿನಾಡು)ಬಳಿ ಮುಖ್ಯ ಹೆದ್ದಾರಿಗೆ ಸೇರುತ್ತದೆ.

ಕ್ಯಾದಿಗೆರೆ– –ಸೀಬಾರ ನಡುವಿನ ಬೈಪಾಸ್‌ ಮಾರ್ಗದಲ್ಲಿ 13 ಹಳ್ಳಿಗಳು ಸೇರುತ್ತವೆ.  ಇಲ್ಲಿ ಅಂಡರ್‌ಪಾಸ್‌ಗಳು, ಸರ್ವೀಸ್ ರಸ್ತೆ, ರಾಷ್ಟ್ರೀಯ ಹೆದ್ದಾರಿ 13ರಲ್ಲಿರುವ ಪ್ರಕೃತಿ ಡಾಬಾ ಬಳಿ ‘ಟ್ರಂಫೆಟ್’ (ಮೇಲೆ ಕೆಳಗೆ ವಾಹನ ಸಂಚಾರ ಹಾಗೂ ಯು ಟರ್ನ್ ತೆಗೆದುಕೊಳ್ಳುವ ವ್ಯವಸ್ಥೆ ವಿಧಾನ) ಸೇತುವೆ ನಿರ್ಮಿಸಲಾಗುತ್ತದೆ.
 
ಎಲ್ಲೆಲ್ಲಿ ಎಷ್ಟೆಷ್ಟು ಅಂಡರ್‌ಪಾಸ್ : ಮದಕರಿಪುರ ಸಮೀಪ ಹಾಗೂ ದಾವಣಗೆರೆ ಬೈಪಾಸ್ ಹತ್ತಿರದಲ್ಲಿ ಎರಡು ರೈಲು ಸೇತುವೆ, ಬೈಪಾಸ್ ಪ್ರವೇಶಿಸುವ ಕ್ಯಾದಿಗೆರೆ, ಎನ್ ಎಚ್ 13 ಪ್ರಕೃತಿ ಡಾಬಾ ಬಳಿ ಹಾಗೂ ಮುಖ್ಯ ಹೆದ್ದಾರಿ ಸೇರುವ ಸೀಬಾರ ಬಳಿ ಇಂಟರ್‌ಚೇಂಜ್ ಮೇಲ್ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ.

ಪದೇ ಪದೇ ಅಪಘಾತಗಳ ಸಂಭವಿಸುತ್ತಿರುವ ಹಾಗೂ ಅಪಘಾತವಲಯಗಳೆಂದೇ ಗುರುತಿಸುವ ಚಿತ್ರದುರ್ಗ ನಗರದ ಹೌಸಿಂಗ್ ಬೋರ್ಡ್‌, ಮುರುಘಾ ಮಠದ ವೃತ್ತ, ಜೆಎಂಐಟಿ ವೃತ್ತ, ಭರಮಸಾಗರ ಸಮೀಪದ ಎಮ್ಮೆಹಟ್ಟಿ, ಇತ್ತೀಚೆಗೆ ಅಪಘಾತದ ಸಂಭವಿಸಿದ ಕೊಳಾಳ್ ಬಳಿ ಅಂಡರ್‌ಪಾಸ್‌ಗಳನ್ನು ಮಾಡಲಾಗುತ್ತಿದೆ. ವಾಹನ ಸಂಚಾರಕ್ಕೆ ಮತ್ತು ಪಾದಚಾರಿಗಳಿಗೆ ಅನುಕೂಲವಾಗುವಂತೆ ಈ ಕೆಳಸೇತುವೆಗಳನ್ನು ನಿರ್ಮಿಸಲಾಗುತ್ತಿದೆ.
 
ಸರ್ವೀಸ್ ರಸ್ತೆಗೆ ಆದ್ಯತೆ : ಬೈಪಾಸ್, ಹೆದ್ದಾರಿಯಲ್ಲಾಗುವ ಹೊಸ ಷಟ್ಪಥ ರಸ್ತೆ ಮತ್ತು ಪ್ರಸ್ತುತ ನಗರದಲ್ಲಿ ಹಾದು ಹೋಗಿರುವ ಚತುಷ್ಪಥ ಹೆದ್ದಾರಿಯಲ್ಲೂ (ಸರ್ವೀಸ್ ರಸ್ತೆ ಇಲ್ಲದ ಕಡೆ) 7 ಮೀಟರ್ ಅಗಲದ ಸರ್ವೀಸ್ ರಸ್ತೆಗೆ ಅವಕಾಶ ಕಲ್ಪಿಸಲಾಗಿದೆ.

ಗ್ರಾಮಾಂತರ ಪೊಲೀಸ್ ಠಾಣೆಯಿಂದ ಎಪಿಎಂಸಿ ಕಡೆಗೆ ಹೋಗುವ ರಸ್ತೆಯಲ್ಲಿ ರೈಲ್ವೆ ಬ್ರಿಡ್ಜ್‌ ಬಳಿಯೂ ಇದೇ ಯೋಜನೆಯಲ್ಲಿ ಸರ್ವೀಸ್ ರಸ್ತೆ ಮಾಡಲಾಗುತ್ತಿದೆ. ಸರ್ವೀಸ್ ರಸ್ತೆಗಳಲ್ಲಿ ಎರಡೂ ಕಡೆಗಳಿಂದಲೂ ಬಸ್ ಸಂಚರಿಸಬಹುದಾದಷ್ಟು ವಿಸ್ತಾರವಾದ ಸ್ಥಳಾವಕಾಶವಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.