ADVERTISEMENT

‘ಸಾಧನೆಗೆ ಓದುವ ಹವ್ಯಾಸ ರಹದಾರಿ’

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 4:42 IST
Last Updated 24 ಏಪ್ರಿಲ್ 2017, 4:42 IST

ಚಿತ್ರದುರ್ಗ:‘ದೇಶಕ್ಕೆ ಸರ್ವ ಶ್ರೇಷ್ಠ ಸಂವಿಧಾನ ನೀಡಲು ಅಂಬೇಡ್ಕರ್ ಅವರಿಗೆ ಸಾಧ್ಯವಾಗಿದ್ದು ಅವರ ಓದುವ ಹವ್ಯಾಸದಿಂದ’ ಎಂದು ನಿಲಯಪಾಲಕ ಬಿ.ರುದ್ರಮುನಿ ಅಭಿಪ್ರಾಯಪಟ್ಟರು.

ಕಬೀರಾನಂದಾಶ್ರಮದ ನರ್ಸಿಂಗ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಕನ್ನಡ ಪುಸ್ತಕ ಪ್ರಾಧಿಕಾರ, ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯಿಂದ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪುಸ್ತಕೋದ್ಯಮ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಅಂಬೇಡ್ಕರ್ ಅವರಿಗೆ ಜ್ಞಾನದಾಹ ಇಲ್ಲದಿದ್ದರೆ ನೊಂದ ವರ್ಗಕ್ಕೆ ನ್ಯಾಯ ಕೊಡಿಸಲು ಸಾಧ್ಯವಾಗುತ್ತಿರಲಿಲ್ಲ. ಜ್ಞಾನಕ್ಕಿಂತ ಮಿಗಿಲಾದದ್ದು ಜಗತ್ತಿನಲ್ಲಿ ಮತ್ತೊಂದಿಲ್ಲ. ಇದನ್ನರಿತು ಪ್ರಸ್ತುತ ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು’ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಪ್ರೊ.ಜಿ.ಪರಮೇಶ್ವರಪ್ಪ ಕಪಿಲೆ ಮಾತನಾಡಿ, ‘ಕುವೆಂಪು, ಅಂಬೇಡ್ಕರ್ ಸಮಾನ ಚಿಂತನೆವುಳ್ಳ ವ್ಯಕ್ತಿಗಳಾಗಿದ್ದರು. ಇದನ್ನು ತಿಳಿಯಲು ಅವರ ಕೃತಿಗಳ ಅಧ್ಯಯನ ಅನಿವಾರ್ಯ. ಕೃತಿಗಳನ್ನು ಓದುವ ಹವ್ಯಾಸದಿಂದ ಧೈರ್ಯ, ಆತ್ಮಸ್ಥೈರ್ಯ ಸುಲಭವಾಗಿ ದೊರೆಯುತ್ತದೆ’ ಎಂದು ಹೇಳಿದರು.

‘ಜ್ಞಾನಭಂಡಾರದಿಂದ ನಾಡಿಗೆ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳನ್ನು ಇತ್ತೀಚೆಗೆ ಜಾತಿಯ ಸಂಕೋಲೆಯಲ್ಲಿ ಕಟ್ಟಿಹಾಕುವ ಯತ್ನ ನಡೆಯುತ್ತಿದೆ. ಇದಕ್ಕೆ ಅಧ್ಯಯನದ ಕೊರತೆ ಮುಖ್ಯ ಕಾರಣ. ಯಾರು ಸದಾ ಓದುತ್ತಾರೆ ಅವರ ಮುಖಚರ್ಯೆ, ವ್ಯಕ್ತಿತ್ವದಲ್ಲಿ ಬದಲಾವಣೆ ಕಾಣಬಹುದು’ ಎಂದರು.

ದಶಕದ ಹಿಂದೆ ಕಾದಂಬರಿಗಳನ್ನು ಓದುವ ಹವ್ಯಾಸ ಮನೆ ಮನೆಯಲ್ಲೂ ಕಾಣಬಹುದಿತ್ತು. ಅದರಲ್ಲೂ ಮಹಿಳೆಯರು ಕಾದಂಬರಿ ಇಲ್ಲದೇ ದಿನವನ್ನೇ ಕಳೆಯುತ್ತಿರಲಿಲ್ಲ. ಆ ದಿನಗಳು ಕಾದಂಬರಿಕಾರರಿಗೆ ಸುವರ್ಣ ಯುಗವಾಗಿದ್ದವು. ಆದರೆ, ಇತ್ತೀಚೆಗೆ ಭೈರಪ್ಪ ಅವರಂಥ ಕೆಲವರನ್ನು ಹೊರತು ಪಡಿಸಿದರೆ ಬಹುತೇಕರು ಕಾದಂಬರಿಬರೆಯುವುದನ್ನೇ ಕೈಬಿಟ್ಟಿದ್ದಾರೆ. ಇದಕ್ಕೆ ಕಾರಣ ಮಹಿಳೆಯರು ಧಾರಾವಾಹಿಗಳತ್ತ ವಲಸೆ ಹೋಗಿರುವುದು’ ಎಂದು ಅಭಿಪ್ರಾಯಪಟ್ಟರು.

ಐಡಿಎಫ್ ಅಭಿವೃದ್ಧಿ ಅಧಿಕಾರಿ ಎಚ್.ಗುರುಮೂರ್ತಿ, ಪುಸ್ತಕಗಳನ್ನು ಸದಾ ಹುಡುಕಿ ಓದುವ ವ್ಯಕ್ತಿಗಳಿಗೆ ಸಮಯ ಪ್ರಜ್ಞೆ ಇರುತ್ತದೆ. ಅಂಗೈಯಲ್ಲಿ ಇಂದು ಎಲ್ಲವೂ ಸಿಗಲಿದೆ. ಇದರ ಮೂಲ ಪುಸ್ತಕಗಳ ಅಧ್ಯಯನ ಎಂಬ ಸತ್ಯ ಅರಿತುಕೊಳ್ಳಬೇಕು ಎಂದರು.

ಉಪನ್ಯಾಸಕ ವಿಜಯಕುಮಾರ ತೊಡರನಾಳ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಹೇಶ್‌ಬಾಬು ಇದ್ದರು. ಮಲ್ಲಿಕಾರ್ಜುನ ಪ್ರಾರ್ಥಿಸಿದರು. ರಂಗಸ್ವಾಮಿ ಸ್ವಾಗತಿಸಿದರು. ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಶಿವಕುಮಾರ್ ವಂದಿಸಿದರು.

**

ಪಠ್ಯೇತರ ಕೃತಿಗಳನ್ನು ಯಾರು ಹೆಚ್ಚಾಗಿ ಅಧ್ಯಯನ ಮಾಡುತ್ತಾರೋ ಅವರಿಂದ ಸಮಾಜಕ್ಕೆ ದೊಡ್ಡ ಕೊಡುಗೆ ಲಭ್ಯವಾಗುತ್ತದೆ.
-ಬಿ.ರುದ್ರಮುನಿ, ನಿಲಯಪಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.