ADVERTISEMENT

ಹರಕೆ ಪ್ರಸಾದ ಸೇವಿಸಿ 138 ಜನರು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 8:39 IST
Last Updated 16 ಏಪ್ರಿಲ್ 2017, 8:39 IST
ಹಾಯ್ಕಲ್ ಗ್ರಾಮದಲ್ಲಿ ಯಲ್ಲಮ್ಮ ದೇವಿಯ ಪ್ರಸಾದ ಸೇವಿಸಿ ಅಸ್ವಸ್ಥಗೊಂಡ ಗ್ರಾಮಸ್ಥರು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು
ಹಾಯ್ಕಲ್ ಗ್ರಾಮದಲ್ಲಿ ಯಲ್ಲಮ್ಮ ದೇವಿಯ ಪ್ರಸಾದ ಸೇವಿಸಿ ಅಸ್ವಸ್ಥಗೊಂಡ ಗ್ರಾಮಸ್ಥರು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು   

ತುರುವನೂರು: ಹೋಬಳಿಯ ಹಾಯ್ಕಲ್ ಗ್ರಾಮದಲ್ಲಿ ಶುಕ್ರವಾರ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ನೀಡಿದ ಪ್ರಸಾದ ಸೇವಿಸಿ 138 ಮಂದಿ ಅಸ್ವಸ್ಥರಾಗಿದ್ದಾರೆ.ಯಲ್ಲಮ್ಮ ದೇವಿಯ ಪೂಜೆಯ ನಂತರ ವಿತರಿಸಿದ ಪ್ರಸಾದ ಸೇವಿಸಿದ ಗ್ರಾಮಸ್ಥರು ಅಸ್ವಸ್ಥಗೊಂಡರು. ಅವರನ್ನು ಹಾಯ್ಕಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಗ್ರಾಮದ ಬಡಗಿ ಬೋರಯ್ಯ ಅವರ ಪತ್ನಿ ಪಾಪಮ್ಮ ಪ್ರತಿ ವರ್ಷದಂತೆ ಈ ವರ್ಷವೂ ಯಲ್ಲಮ್ಮನ ಗುಡ್ಡಕ್ಕೆ ಹೋಗಿ ಬಂದಿದ್ದರು. ದೇವಿಗೆ ಹರಕೆ ತೀರಿಸಲು ಶುಕ್ರವಾರ ರಾತ್ರಿ ಪೂಜೆ ಮತ್ತು ಪ್ರಸಾದ ಏರ್ಪಡಿಸಿದ್ದರು. ಇದರಲ್ಲಿ ಭಾಗವಹಿಸಿ ಹೋಳಿಗೆ ಊಟ ಸೇವಿಸಿದವರಿಗೆ ರಾತ್ರಿ 11ರ ನಂತರ ಹೊಟ್ಟೆನೋವು, ಹೊಟ್ಟೆಯಲ್ಲಿ ಉರಿ, ವಾಂತಿ– ಭೇದಿ ಕಾಣಿಸಿಕೊಂಡಿತು.

ತಕ್ಷಣ­ವೇ ಅವರಿಗೆಸ್ಥಳೀಯ ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. 15ಕ್ಕೂ ಹೆಚ್ಚು ಮಂದಿಯನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ವಿಷಯ ತಿಳಿದ ತಾಲ್ಲೂಕು ವೈದ್ಯಾಧಿಕಾರಿ ಫಾಲಾಕ್ಷ ಮತ್ತು ಸಿಬ್ಬಂದಿ ಶನಿವಾರ ಬೆಳಿಗ್ಗೆ ಹಾಯ್ಕಲ್ ಗ್ರಾಮದಲ್ಲಿ ತಾತ್ಕಾಲಿಕವಾಗಿ ಕ್ಯಾಂಪ್ ತೆರೆದು ಚಿಕಿತ್ಸೆ ನೀಡಿದರು. ‘ಚಿಕಿತ್ಸೆ ಪಡೆಯುತ್ತಿರುವವರೆಲ್ಲರೂ ಆರೋಗ್ಯವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಹಶೀಲ್ದಾರ್ ಭೇಟಿ: ತಹಶೀಲ್ದಾರ್ ಮಲ್ಲಿಕಾರ್ಜುನಪ್ಪ ಆಸ್ಪತ್ರೆಗೆ ಭೇಟಿ ನೀಡಿ, ಅಸ್ವಸ್ಥರ ಆರೋಗ್ಯ ವಿಚಾರಿಸಿದರು. ನಂತರ ಮಾತನಾಡಿದ ಅವರು, ‘ಕಲಬೆರಕೆ ಆಹಾರ ಸೇವನೆಯಿಂದ ಹೀಗಾಗಿರಬಹುದು. ಅಸ್ವಸ್ಥರಾದವರಿಗೆಅಗತ್ಯ ಚಿಕಿತ್ಸೆ ನೀಡಲಾಗಿದೆ’ ಎಂದು ತಿಳಿಸಿದರು.

ಮುಂಜಾಗ್ರತಾ ಕ್ರಮವಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳುವಂತೆ ವೈದ್ಯಾಧಿಕಾರಿಗೆ ಸೂಚಿಸಿದರು. ವೈದ್ಯರಿಗೆ ತೊಂದರೆ ಮಾಡದೇ ಕರ್ತವ್ಯ ನಿರ್ವಹಿ
ಸಲು ಸಹಕಾರ ನೀಡುವಂತೆ ಗ್ರಾಮಸ್ಥರಿಗೆ ಮನವಿ ಮಾಡಿದರು.

‘ಪ್ರಸಾದ ಅಡುಗೆಗೆ ಬಳಸಿದ ಅಕ್ಕಿ, ಬೇಳೆ, ನೀರು ಮತ್ತಿತರ ಸಾಮಗ್ರಿಯ ಮಾದರಿ­ಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು. ಅಲ್ಲಿಂದ ವರದಿ ಬಂದ ನಂತರ ಇದಕ್ಕೆ ಕಾರಣ ತಿಳಿಯಲಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.