ADVERTISEMENT

ಸಿ.ಎಂ, ಯಡಿಯೂರಪ್ಪ ಬಂದು ಹೋದರೂ ರಿಪೇರಿ ಕಾಣದ ರಸ್ತೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 9:52 IST
Last Updated 6 ಫೆಬ್ರುವರಿ 2018, 9:52 IST
ಹಿರಿಯೂರಿನಲ್ಲಿ ಬುಧವಾರ ತಾಲ್ಲೂಕು ಭಜರಂಗದಳದ ನೇತೃತ್ವದಲ್ಲಿ  ಡಿ. 26 ರಂದು ಪೊಲೀಸರು ಭಜರಂಗದಳದ ಕಾರ್ಯಕರ್ತರನ್ನು ಸಿಎಂ ಬರುವ ಹಿನ್ನೆಲೆಯಲ್ಲಿ ಬಂಧಿಸಿದ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಹಿರಿಯೂರಿನಲ್ಲಿ ಬುಧವಾರ ತಾಲ್ಲೂಕು ಭಜರಂಗದಳದ ನೇತೃತ್ವದಲ್ಲಿ ಡಿ. 26 ರಂದು ಪೊಲೀಸರು ಭಜರಂಗದಳದ ಕಾರ್ಯಕರ್ತರನ್ನು ಸಿಎಂ ಬರುವ ಹಿನ್ನೆಲೆಯಲ್ಲಿ ಬಂಧಿಸಿದ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.   

ಹಿರಿಯೂರು: ನಗರಕ್ಕೆ ಡಿ. 27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಜ.10 ರಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಬಂದು ಹೋದರೂ ಇಲ್ಲಿನ ರಸ್ತೆಗಳ ರಿಪೇರಿ ಆಗಿಲ್ಲ.

ಈಗ ಚುನಾವಣೆ ಹತ್ತಿರ ಬಂದಿರುವಾಗ ಸಿದ್ದರಾಮಯ್ಯ ಹಿರಿಯೂರಿಗೆ ಬಂದು ₹ 672 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಹೋಗಿದ್ದಾರೆ. ಹಿಂದೆ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗಲೂ ಅವರು ಇಲ್ಲಿಗೆ ಕಾಮಗಾರಿಗಳನ್ನು ಉದ್ಘಾಟಿಸಲೆಂದು ಬಂದಿದ್ದರು. ಆಗ ನಗರದ ರಸ್ತೆಗಳನ್ನು ದುರಸ್ತಿ ಮಾಡಿಸಿದ್ದರು. ಈಗ ಅಷ್ಟಾದರೂ ಕೆಲಸವಾಗಿದ್ದಿದ್ದರೆ ಚೆನ್ನಾಗಿತ್ತು ಎನ್ನುವುದು ವಂದೇಮಾತರಂ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಎಲ್. ಗಿರಿಧರ್ ಅನಿಸಿಕೆ.

ಮುಖ್ಯಮಂತ್ರಿ ಬಂದದ್ದರಿಂದ ಹೆಲಿಪ್ಯಾಡ್‌ನಿಂದ ನೆಹರೂ ಮೈದಾನ ಸಂಪರ್ಕಿಸುವ ರಸ್ತೆಯಲ್ಲಿ ಒಂದೆರಡು ಕಡೆ ಗುಂಡಿ ಮುಚ್ಚಿಸಿದ್ದನ್ನು ಬಿಟ್ಟರೆ  ಅಧಿಕಾರಿಗಳು ಬೇರೇನನ್ನೂ ಮಾಡಲಿಲ್ ಎಂದು ಅವರು ಹೇಳಿದರು.

ADVERTISEMENT

ನಗರದ ಮಹಾತ್ಮ ಗಾಂಧಿ ವೃತ್ತದಿಂದ ಪ್ರವಾಸಿ ಮಂದಿರ ವೃತ್ತದವರೆಗೆ ಎರಡು ಹೆದ್ದಾರಿಗಳು ಹಾದು ಹೋಗಿರುವ ರಸ್ತೆ ತುಂಬಾ ಹದಗೆಟ್ಟಿದೆ. ವೇದಾವತಿ ನದಿಗೆ ನಿರ್ಮಿಸಿರುವ ಸೇತುವೆಯ ಎರಡೂ ಬದಿಯ ಪಾದಚಾರಿ ಜಾಗದ ಸ್ಲ್ಯಾಬ್‌ಗಳು ಮುರಿದುಹೋಗಿ, ಗುಂಡಿಗಳು ಬಿದ್ದಿವೆ. ರಾತ್ರಿ ನಡೆದು ಹೋಗುವವರು ಮೈಯೆಲ್ಲ ಕಣ್ಣಾಗಿ ಓಡಾಡಬೇಕಿದೆ. ಇದಕ್ಕೆ ಮುಕ್ತಿ ಸಿಗುವುದು ಯಾವಾಗ ಎಂದು ಗಿರಿಧರ್ ಪ್ರಶ್ನಿಸುತ್ತಾರೆ.

ಪ್ರವಾಸಿ ಮಂದಿರ ವೃತ್ತದಿಂದ ಮಹಾತ್ಮಗಾಂಧಿ ವೃತ್ತದವರೆಗಿನ ಪ್ರಧಾನ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ವಿಸ್ತರಿಸಬೇಕು. ಸಿದ್ದರಾಮಯ್ಯ ಅವರ ಕನಸಿನ ಇಂದಿರಾ ಕ್ಯಾಂಟೀನ್ ಅನ್ನು ಆದಷ್ಟು ಬೇಗ ಬಸ್ ನಿಲ್ದಾಣ ಇಲ್ಲವೇ ನೆಹರೂ ಮಾರುಕಟ್ಟೆ ಜಾಗದಲ್ಲಿ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.