ADVERTISEMENT

ಉಪಗ್ರಹ ಆಧಾರಿತ ಆಸ್ತಿಗಳ ನಕಾಶೆ ತಯಾರಿಕೆ

ಭುವನ್ ಪಂಚಾಯತ್ ಮೊಬೈಲ್ ಅಪ್ಲಿಕೇಷನ್‌ ಅನುಷ್ಠಾನ ಮಾಹಿತಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 5:39 IST
Last Updated 22 ಏಪ್ರಿಲ್ 2017, 5:39 IST
ಮಂಗಳೂರು: ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಆಸ್ತಿ ನಕಾಶೆಯನ್ನು ಉಪಗ್ರಹ ಆಧಾರಿತವಾಗಿ ಪರಿವರ್ತಿಸಲು ಭಾರ ತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ದ ಅಂಗ ಸಂಸ್ಥೆಯಾದ ಹೈದರಾಬಾದ್‌ನ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮತ್ತು ಮೂಡುಬಿದರೆಯ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜುಗಳ ಜಂಟಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ.
 
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಭುವನ್‌ ಪಂಚಾಯತ್‌ ಮೊಬೈಲ್‌ ಆ್ಯಪ್‌ ಬಳಕೆ, ಆಸ್ತಿ ನಕ್ಷೆಯಲ್ಲಿ ಉಪಗ್ರಹ ಆಧಾರಿತ ಗೊಳಿಸುವ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು. 
 
ವಿಶೇಷವಾಗಿ ಈ ಯೋಜನೆಯಲ್ಲಿ ಇಸ್ರೊದ ಅಂಗ ಸಂಸ್ಥೆಯಾದ ಹೈದರಾ ಬಾದ್‌ನ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಅಭಿವೃದ್ಧಿ ಪಡಿಸಿರುವ ಭುವನ್ ಪಂಚಾಯತ್ ಮೊಬೈಲ್ ಅಪ್ಲಿಕೇಶನ್ ಉಪಯೋಗಿಸಿಕೊಂಡು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಮತ್ತು ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಸಹಭಾಗಿತ್ವದಲ್ಲಿ ಅಭಿವೃದ್ಧಿಯ ಗುರಿ ಸಾಧಿಸಲು ಉದ್ದೇಶಿಸಲಾಗಿದೆ. 
 
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ದೇಶದ ಕೇವಲ ಹತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಇದರಲ್ಲಿ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯವು ಒಂದಾಗಿದೆ.
 
ವಿದ್ಯಾರ್ಥಿಗಳ ಮಿನಿ ಸ್ಯಾಟ್‌ಲೈಟ್ ತಯಾರಿಕೆ ಮತ್ತು ಕರಾವಳಿ ವ್ಯಾಪ್ತಿಯಲ್ಲಿ ಆಟೋಮೆಟಿಕ್ ವೆದರ್ ಸ್ಟೇಷನ್ ಸ್ಥಾಪಿಸುವುದಕ್ಕೆ ಈಗಾಗಲೇ ಆಳ್ವಾಸ್ ಸಂಸ್ಥೆ ಇಸ್ರೊದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. 
 
ಪ್ರಾಯೋಗಿಕವಾಗಿ ಭುವನ್ ಪಂಚಾಯತ್ ಮೊಬೈಲ್ ಅಪ್ಲಿಕೇಷನ್ ಬಳಕೆಯನ್ನು ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಕಾರ್ಯಗತಗೊಳಿಸಿ ವಿಮರ್ಶಿಸಿದ ನಂತರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೂ ಯೋಜನೆಯನ್ನು ವಿಸ್ತರಿಸುವುದು ಆಳ್ವಾಸ್ ಸಂಸ್ಥೆಯ ಉದ್ದೇಶವಾಗಿದೆ.
 
ರಿಮೋಟ್‌ ಸೆನ್ಸಿಂಗ್‌ ಸೆಂಟರ್‌ನ ವಿಜ್ಞಾನಿ ಡಾ. ಜಯಶೀಲನ್‌ ಮಾಹಿತಿ ನೀಡಿದರು. ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿ ವಿವೇಕ್‌ ಆಳ್ವ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎನ್‌.ಆರ್‌. ಉಮೇಶ್‌ ಪಾಲ್ಗೊಂಡಿದ್ದರು. ಆಳ್ವಾಸ್‌ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪೀಟರ್ ಫರ್ನಾಂಡಿಸ್‌ ಸ್ವಾಗತಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.