ADVERTISEMENT

ಎಂಡೊ ಆಮರಣಾಂತ ಉಪವಾಸ ಅಂತ್ಯ

​ಪ್ರಜಾವಾಣಿ ವಾರ್ತೆ
Published 29 ಮೇ 2017, 9:08 IST
Last Updated 29 ಮೇ 2017, 9:08 IST
ಉಪ್ಪಿನಂಗಡಿ ಸಮೀಪ ಕೊಕ್ಕಡದಲ್ಲಿ ಎಂಡೊ ವಿರೋಧಿ ಹೋರಾಟ ಪ್ರತಿಭಟನೆಯಲ್ಲಿ ಜಿಲ್ಲಾಧಿಕಾರಿ ಜಗದೀಶ್ ಭಾನುವಾರ ಮಾತನಾಡಿದರು. ಹೋರಾಟ ಸಮಿತಿಯ ಶ್ರೀಧರ ಗೌಡ ಇತರರು ಇದ್ದರು.
ಉಪ್ಪಿನಂಗಡಿ ಸಮೀಪ ಕೊಕ್ಕಡದಲ್ಲಿ ಎಂಡೊ ವಿರೋಧಿ ಹೋರಾಟ ಪ್ರತಿಭಟನೆಯಲ್ಲಿ ಜಿಲ್ಲಾಧಿಕಾರಿ ಜಗದೀಶ್ ಭಾನುವಾರ ಮಾತನಾಡಿದರು. ಹೋರಾಟ ಸಮಿತಿಯ ಶ್ರೀಧರ ಗೌಡ ಇತರರು ಇದ್ದರು.   

ಉಪ್ಪಿನಂಗಡಿ:  ಕೊಕ್ಕಡ ಎಂಡೊ ಹೋರಾಟ ಸಮಿತಿ ನೇತೃತ್ವದಲ್ಲಿ 20 ಬೇಡಿಕೆಗಳನ್ನು ಮುಂದಿಟ್ಟು ಶನಿವಾರ ಬೆಳಿಗ್ಗಿನಿಂದ ಆರಂಭಗೊಂಡ ಎಂಡೊ ಸಂತ್ರಸ್ತರ ಆಮರಣಾಂತ ಉಪವಾಸ 32 ಗಂಟೆಗಳ ಬಳಿಕ ಭಾನುವಾರ ಸಂಜೆ ಅಂತ್ಯಗೊಂಡಿತು.

ಭಾನುವಾರ ಬೆಳಿಗ್ಗಿನಿಂದಲೇ ಬೆಳ್ತಂಗಡಿ ಶಾಸಕ ವಸಂತ ಬಂಗೇರ, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾಧಿಕಾರಿ ಜಗ ದೀಶ್, ಪುತ್ತೂರು ಸಹಾಯಕ ಕಮಿ ಷನರ್ ರಘುನಂದನ್ ಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಮುಂತಾದವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಆಲಿಸಿ ಸಂತ್ರಸ್ತರಿಗೆ ಮತ್ತು ಹೋರಾಟಗಾರರಿಗೆ ಸೂಕ್ತ ಭರವಸೆಗಳನ್ನು ನೀಡಿದ ಬಳಿಕ ಉಪವಾಸ ಸತ್ಯಾಗ್ರಹವನ್ನು ಸಂಜೆ ಕೈಬಿಡಲಾಯಿತು.

ಜಿಲ್ಲಾಧಿಕಾರಿ ಜಗದೀಶ್ ಮಾತನಾಡಿ, ‘20 ಬೇಡಿಕೆಗಳಲ್ಲಿ ಸರ್ಕಾರ ಮಾಡುವಂತದ್ದು ಹೆಚ್ಚು ಇದ್ದು, ಅವುಗಳ ಬಗ್ಗೆ ನಾನು ಭರವಸೆ ಕೊಡಲು ಸಾಧ್ಯವಿಲ್ಲ. ಆದರೆ ನನ್ನ ಹಂತ ದಲ್ಲಿ ಸರಿಪಡಿಸಬಹುದಾದ ಕೊಕ್ಕಡ ದಲ್ಲಿ ಶಾಶ್ವತ ಪುನರ್ವಸತಿ ಕೇಂದ್ರವನ್ನು ಆರಂಭಿಸಲು ಬೇಕಾದ 5 ಎಕರೆ ಸ್ಥಳವನ್ನು ಕೂಡಲೇ ಗುರುತಿಸುವುದು ಮತ್ತು ಶಾಶ್ವತ  ಪುನರ್ವಸತಿ ಕೇಂದ್ರ ವನ್ನು ಕೊಕ್ಕಡದಲ್ಲೂ ರಚಿಸಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ’ ತಿಳಿಸಿದರು.

ADVERTISEMENT

‘ಎಂಡೊ ಪೀಡಿತರಲ್ಲಿ ಅನೇಕ ಮಂದಿ ಮಾಸಾಶನ ವಂಚಿತರಾಗಿದ್ದು, ಅವರೆಲ್ಲರನ್ನು ಗುರುತು ಚೀಟಿ ನೀಡಿ ಗುರುತಿಸುವುದು. ಮಲಗಿದಲ್ಲೇ ಇರುವ ಸಂತ್ರಸ್ತರ ಪೋಷಕರಿಗೂ ಮಾಸಿಕ ವೇತನ ಪಿಂಚಣಿಯನ್ನು ನೀಡಲು ಸರ್ಕಾರಕ್ಕೆ ಪ್ರಸ್ತಾವನೆ, ಸಂಚಾರಿ ಆಸ್ಪತ್ರೆ ಗಳು ಮಲಗಿದಲ್ಲೇ ಇರುವ ಸಂತ್ರಸ್ತರ ಮನೆಗೆ ಭೇಟಿ ನೀಡಿ ಚಿಕಿತ್ಸೆ ನೀಡು ವುದರೊಂದಿಗೆ ಉಚಿತ ಔಷದಿಗಳನ್ನು ವಿತರಿಸಲು ಸ್ಥಳದಲ್ಲೇ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆದೇಶ ನೀಡಿದರು.

ಎಂಡೊ ಸಂತ್ರಸ್ತರ ಬಸ್ ಪಾಸ್‌ನಲ್ಲಿ ಸಂತ್ರಸ್ತರ ಪೋಷಕರಿಗೂ ಉಚಿತ ಪ್ರಯಾಣ ಕಲ್ಪಿಸಲು ಸರ್ಕಾರಕ್ಕೆ ಮನವಿ, ಎಂಡೊ ಸಂತ್ರಸ್ತರಿಗೆ ನ್ಯಾಯಾಲ ಯದಿಂದ ಬಂದ ಆದೇಶವನ್ನು ಸಮ ರ್ಪಕವಾಗಿ ಅನುಷ್ಠಾನಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವುದು,  ಎಂಡೊ ಸಂತ್ರಸ್ತರೆಂಬ ಗುರುತು ಚೀಟಿ ಇದ್ದವರಿಗೆ ಸರ್ಕಾರಿ ಆಸ್ಪತ್ರೆಯಲ್ಲದೇ ಸೂಚಿತ ಖಾಸಗಿ ಆಸ್ಪತ್ರೆಗಳಲ್ಲೂ ಯಾವುದೇ  ಶುಲ್ಕ ಪಾವತಿಸದೇ ಸಂಪೂರ್ಣ ರಿಯಾಯಿತಿ ಚಿಕಿತ್ಸೆ ನೀಡಲು ಜಿಲ್ಲಾ ಆರೋಗ್ಯಾಧಿಕಾರಿ ಗಳಿಗೆ ಆದೇಶ ನೀಡಿದರು.

ಜೂನ್ 15ರಂದು ಕೊಕ್ಕಡದಲ್ಲಿ ಜಿಲ್ಲಾ ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಕರೆದು ಸಭೆ ನಡೆಸಲಾಗುವುದು. ಜಿಲ್ಲೆಯ ಎಂಡೊ ಸಂತ್ರಸ್ತರ ಗುರುತು ಚೀಟಿ ಮತ್ತು ಇನ್ನಿತರ ಎಲ್ಲಾ ಸಮಸ್ಯೆಗಳನ್ನು ಮುಂಚಿ ತವಾಗಿ ಕಂದಾಯ ಇಲಾಖೆಗೆ ತಿಳಿಯ ಪಡಿಸಿದಲ್ಲಿ ಅಂದಿನ ಸಭೆಯಲ್ಲೇ ಇತ್ಯರ್ಥ ಮಾಡಲಾಗುವುದು ಮತ್ತು ಹೊಸದಾಗಿ ನೀಡಿದ ಸಮಸ್ಯೆಗಳನ್ನು ದಾಖಲಿಸಿ ಪರಿಹರಿಸಲಾಗುವುದು ಎಂದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ಡಾ. ಅರುಣ್, ಉಪವಿಭಾಗಾಧಿಕಾರಿ ರಘು ನಂದನ್ ಮೂರ್ತಿ ಇದ್ದರು.

ಉಭಯ ಸದನಗಳಲ್ಲಿ ಚರ್ಚೆ: ಕಾರ್ಣಿಕ್
ವಿಧಾನ ಪರಿಷತ್ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ ‘ಜೂನ್ 4ರಂದು ಆರಂಭವಾಗುವ ಉಭಯ ಸದನಗಳಲ್ಲೂ ನಮ್ಮ ಜಿಲ್ಲೆಯ ಎಂಡೊ ಸಮಸ್ಯೆಯ ಕುರಿತಾಗಿ ಚರ್ಚಿಸಲು ಬೇಕಾದ ನಿಲುವಳಿಗಳ ಬಗ್ಗೆ ಈಗಾಗಲೇ ವಿಧಾನ ಪರಿಷತ್ ಅಧ್ಯಕ್ಷರಲ್ಲಿ ಅನುಮತಿಯನ್ನು ಪಡೆದಿದ್ದು, ಈ ವಿಷಯದಲ್ಲಿ ಚರ್ಚೆಗೆ ಅವಕಾಶ ಕೇಳಲಿದ್ದೇವೆ, ಜಿಲ್ಲೆಯ ಎಲ್ಲ  ಶಾಸಕರಲ್ಲೂ ಈ ಬಗ್ಗೆ ಚರ್ಚಿಸಿ ಅತ್ಯುತ್ತಮ ಮಾದರಿಯಲ್ಲಿ ಎಂಡೊ ಪರಿಹಾರವನ್ನು ಕಲ್ಪಿಸಲು ಚರ್ಚೆಗೆ ಅವಕಾಶ ನೀಡಬೇಕೆಂದು ಕೇಳಿಕೊಳ್ಳಲಿದ್ದೇವೆ’ ಎಂದರು.

ಉಭಯ ಸದನಗಳಲ್ಲೂ ಚರ್ಚೆ ನಡೆದು ಸೂಕ್ತ ಪರಿಹಾರ ಕಾಣದಿದ್ದಲ್ಲಿ ಇಲ್ಲಿ ಎಂಡೊ ಸಂತ್ರಸ್ತರು ಬಂದು ಕುಳಿತು ಉಪವಾಸ ಸತ್ಯಾಗ್ರಹ ನಡೆಸಿದ ಮಾದರಿಯಲ್ಲಿ ನಾವೆಲ್ಲ ಶಾಸಕರೂ ಒಟ್ಟಾಗಿ ಸದನದ ಬಾವಿಗಿಳಿದಾದರೂ ಈ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲಿದ್ದೇವೆ ಎಂದರು.

ಕೊಕ್ಕಡ ಎಂಡೊ ವಿರೋಧಿ ಹೋರಾಟ ಸಮಿತಿ ಗೌರವಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಭಜರಂಗದಳ ವೇಣೂರು ಪ್ರಖಂಡ ಸಂಚಾಲಕ ರಾಮ್ ಪ್ರಸಾದ್ ಮರೋಡಿ, ಬೆಳ್ತಂಗಡಿ ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್ ಗೌಡ, ಹೋರಾಟ ಸಮಿತಿಯ ಬಾಲಕೃಷ್ಣ ಗೌಡ ಇದ್ದರು.

ಉಪವಾಸ ಸತ್ಯಾಗ್ರಹದ ಪ್ರತಿಭಟನಾ ಸಭೆಗೆ ಬೆಳ್ತಂಗಡಿಯ ಉದ್ಯಮಿ ರಮಾನಂದ ಸಾಲಿಯಾನ್, ಇಚಿಲಂಪಾಡಿ ನೀತಿ ಟ್ರಸ್ಟ್ ರಾಜ್ಯಾಧ್ಯಕ್ಷ ಜಯನ್, ಕೊಕ್ಕಡ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್ ಮೊದಲಾದವರು ಭೇಟಿ ನೀಡಿದರು. ತಾಲ್ಲೂಕು ಮತ್ತು ಜಿಲ್ಲೆಯಾದ್ಯಂತದಿಂದ ಬಂದ 100ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.

ಬೆಳ್ತಂಗಡಿ ತಾಲೂಕು ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ನವೀನ್ ನೆರಿಯ ಸ್ವಾಗತಿಸಿ, ಶ್ರೀಧರ ಗೌಡ ಕೆಂಗುಡೇಲುವಂದಿಸಿದರು. ಬೆಳ್ತಂಗಡಿ ಶಾಸಕ ವಸಂತ ಬಂಗೇರ ಮಾತನಾಡಿ, ಎಂಡೊ ಸಂತ್ರಸ್ತರ ಬೇಡಿಕೆಗಳ ಬಗ್ಗೆ ಈಗಾಗಲೇ ಸರ್ಕಾರದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇನ್ನೂ ಹಲವು ಬೇಡಿಕೆಗಳು ಈಡೇರಲು ಬಾಕಿ ಇರುವ ವಿಷಯ ನನ್ನಗಮನಕ್ಕೆ ಬಂದಿದೆ. ಇದನ್ನು ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿ ಉಪವಾಸ ಸತ್ಯಾಗ್ರಹವನ್ನು  ಕೈ ಬಿಡುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.