ADVERTISEMENT

ಕಠಿಣ ಶ್ರಮಕ್ಕೆ ತಕ್ಕ ಫಲ ಸಿಗುವುದು: ಶಾಸಕ ಲೋಬೊ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2017, 5:14 IST
Last Updated 19 ಡಿಸೆಂಬರ್ 2017, 5:14 IST

ಮಂಗಳೂರು: ‘ಮಂಗಳೂರನ್ನು ಶಿಕ್ಷಣದ ಕೇಂದ್ರ ಎಂದು ಗುರುತಿಸುತ್ತಾರೆ. ಶಿಕ್ಷಣದ ಎಲ್ಲ ಕ್ಷೇತ್ರಗಳಲ್ಲಿ ಕಲಿಕೆಗೆ ಈ ನಗರದಲ್ಲಿ ಅವಕಾಶವಿದೆ ಎನ್ನುವುದು ಹೆಮ್ಮೆಯ ವಿಷಯ’ ಎಂದು ಶಾಸಕ ಜೆ. ಆರ್‌. ಲೋಬೊ ಹೇಳಿದರು.

ನಗರದ ಟಿ.ವಿ. ರಮಣಪೈ ಸಭಾಂಗಣದಲ್ಲಿ ಸೋಮವಾರ ನಡೆದ ಸಿಎ ವಿದ್ಯಾರ್ಥಿಗಳ ಸಮ್ಮೇಳನ ‘ಆರೋಹಣ್‌’ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಲೆಕ್ಕ ಪರಿಶೋಧನೆ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಕಠಿಣ ಶ್ರಮ ಎಂದಿಗೂ ಒಳ್ಳೆಯ ಫಲವನ್ನೇ ಕೊಡುತ್ತದೆ. ಆದರೆ ಸುಲಭವಾಗಿ ಎಲ್ಲವನ್ನೂ ಸಾಧಿಸುವ ಉಡಾಫೆ ಮನೋಭಾವದಿಂದ ಏನೂ ಸಾಧನೆ ಸಾಧ್ಯವಿಲ್ಲ ಎಂದು ಹೇಳಿದ ಅವರು ತಾವು ಕೆಎಎಸ್‌ ಪರೀಕ್ಷೆಗೆ ಓದುತ್ತಿದ್ದ ದಿನಗಳನ್ನು ಮೆಲುಕು ಹಾಕಿದರು. ’ದಿನಕ್ಕೆ ಸುಮಾರು 14 ಗಂಟೆಗಳ ಕಾಲ ನಾನು ಓದುತ್ತಿದ್ದೆ. ಪರೀಕ್ಷೆಯನ್ನು ಉತ್ತಮವಾಗಿ ಬರೆಯಬೇಕು ಎಂಬ ಹಠ ನನ್ನಲ್ಲಿ ಇತ್ತು’ ಎಂದು ಅವರು ಹೇಳಿದರು.

ADVERTISEMENT

ಸಮ್ಮೇಳನವನ್ನು ಉದ್ಘಾಟಿಸಿದ ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಪತಿ ಡಾ. ಎಂ. ಎಸ್‌. ಮೂಡಿತ್ತಾಯ ಮಾತನಾಡಿ, ‘ವಿದ್ಯಾರ್ಥಿಗಳು ಕಲಿಕೆ ಮುಂದುವರೆಸುತ್ತಿರುವಂತೆಯೇ ವೃತ್ತಿಪರತೆಯನ್ನೂ ರೂಢಿಸಿಕೊಳ್ಳಬೇಕು. ಹತ್ತರೊಟ್ಟಿಗೆ ಹನ್ನೊಂದು ಎಂಬ ಭಾವನೆಯನ್ನು ರೂಢಿಸಿಕೊಳ್ಳದೇ ನಾಯಕತ್ವ ವಹಿಸಿಕೊಳ್ಳುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಬೇಕು. ಓದುವ ಸಂದರ್ಭದಲ್ಲಿ ಪಠ್ಯೇತರ ಚಟುವಟಿಕೆಗಳು ಮುಖ್ಯ. ಆದರೆ ಸಾಧನೆಯತ್ತ ಏಕಾಗ್ರ ಚಿತ್ತ ಇರುವುದೂ ಮುಖ್ಯ’ ಎಂದು ಹೇಳಿದರು.

ಬದಲಾವಣೆಯನ್ನು ತರುವವರು, ಬದಲಾವಣೆಯನ್ನು ಗಮನಿಸುವವರು ಮತ್ತು ಬದಲಾವಣೆಯ ಬಗ್ಗೆ ಅಚ್ಚರಿಪಡುವವರು ಎಂಬ ಮೂರು ವರ್ಗ ಸಮಾಜದಲ್ಲಿದೆ. ಬದಲಾವಣೆಯನ್ನು ತರುವ ವರ್ಗದಲ್ಲಿ ಇಂದಿನ ವಿದ್ಯಾರ್ಥಿಗಳು ನಿಲ್ಲಬೇಕಾಗಿದೆ ಎಂದು ಅವರು ವಿವರಿಸಿದರು.

ದಕ್ಷಿಣ ಭಾರತ ಲೆಕ್ಕ ಪರಿಶೋಧಕರ ವಿದ್ಯಾರ್ಥಿ ಸಂಘಟನೆಯ ಮಂಗಳೂರು ಘಟಕದ ಅಧ್ಯಕ್ಷರಾಗಿರುವ ಲೆಕ್ಕಪರಿಶೋಧಕ ಕೆ. ಎಸ್‌. ಕಾಮತ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಭಾರತೀಯ ಲೆಕ್ಕ ಪರಿಶೋಧಕರ ದಕ್ಷಿಣ ಭಾರತ ಪ್ರಾದೇಶಿಕ ಪರಿಷತ್‌ನ ಅಧ್ಯಕ್ಷರಾದ ಭಾರ್ಗವ ತಂತ್ರಿ ಸ್ವಾಗತಿಸಿದರು. ಶಿವಾನಂದ ಪೈ ಬಿ. ವಂದಿಸಿದರು. ಬಳಿಕ ದಿನವಿಡೀ ವಿವಿಧ ವಿಷಯಗಳ ಬಗ್ಗೆ ವಿಚಾರ ಸಂಕಿರಣಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.