ADVERTISEMENT

ಕರೋಪಾಡಿ ಯೋಜನೆ ಶೀಘ್ರ ಆರಂಭ: ರೈ

ಬಜ್ಪೆ ಸಮೀಪದ ಮಳವೂರು– ಜಿಲ್ಲೆಯ ಪ್ರಥಮ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 5:37 IST
Last Updated 19 ಏಪ್ರಿಲ್ 2017, 5:37 IST
ಮಂಗಳೂರು: ‘ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ದೃಷ್ಟಿಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮಳ ವೂರು ಯೋಜನೆಯ ಉದ್ಘಾಟನೆಯಾಗಿದ್ದು, ಬಂಟ್ವಾಳ ತಾಲ್ಲೂಕಿನ ಕರೋಪಾಡಿ ಬಹುಗ್ರಾಮ ಯೋಜನೆ ಶೀಘ್ರ ಆರಂಭವಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು. 
 
ಮಂಗಳವಾರ ತಾಲ್ಲೂಕಿನ ಮಳವೂರಿನಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
‘2003 ರಲ್ಲಿ ರಾಜೀವ್‌ಗಾಂಧಿ ಕುಡಿಯುವ ನೀರಿನ ಯೋಜನೆಯಡಿ ಸುಮಾರು ₹5ಕೋಟಿ ವೆಚ್ಚದಲ್ಲಿ ಆರಂಭವಾಗಿದ್ದ ಮಳವೂರು ಬಹುಗ್ರಾಮ ಯೋಜನೆ, ಇದೀಗ ಸುಮಾರು ₹46 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ. 8 ಗ್ರಾಮ ಪಂಚಾಯಿತಿಗಳ 14 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲಿದೆ’ ಎಂದು ತಿಳಿಸಿದರು. 
 
‘ಕಿನ್ನಿಗೋಳಿ ಯೋಜನೆಯನ್ನು ಇದೇ ಸಂದರ್ಭದಲ್ಲಿ ಆರಂಭಿಸಲಾಗಿತ್ತು. ಆದರೆ, ಗುತ್ತಿಗೆದಾರರಿಂದಾಗಿ ಸಂ ಪೂರ್ಣ ಹಾಳಾಗಿದೆ. ಅದನ್ನು ಸರಿಪಡಿಸಲು ಕ್ರಮ ಕೈಗೊ ಳ್ಳಲಾಗುವುದು. ₹26 ಕೋಟಿ ವೆಚ್ಚದ ಕರೋಪಾಡಿ ಯೋಜನೆಯು ಮುಕ್ತಾಯದ ಹಂತದಲ್ಲಿದೆ.
 
₹36 ಕೋಟಿ ವೆಚ್ಚದ ಸಂಗಬೆಟ್ಟು ಯೋಜನೆ, ₹16 ಕೋಟಿ ವೆಚ್ಚದ ಮಾಣಿ ಬಹುಗ್ರಾಮ ಯೋಜನೆಗಳ ಕಾಮಗಾರಿ ನಡೆಯುತ್ತಿದೆ. ಇನ್ನೂ ಎರಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ತಾಂತ್ರಿಕ ಅನುಮೋದನೆಗೆ ಬಾಕಿ ಇವೆ’ ಎಂದು ವಿವರಿಸಿದರು. 
 
‘ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನಿರ್ವಹಣೆಗಾಗಿ ಸಂಬಂಧಿಸಿದ 8 ಗ್ರಾಮ ಪಂಚಾಯಿತಿಗಳ ಉಸ್ತುವಾರಿ ಸಮಿತಿ ರಚಿಸಲಾಗು ವುದು. ಪ್ರತಿ ವರ್ಷ ಒಂದೊಂದು ಪಂಚಾಯಿತಿಗೆ ಸಮಿತಿಯ ನೇತೃತ್ವ ವಹಿಸಲಾಗುವುದು. ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ಸಮರ್ಪಕವಾಗಿ ಪೂರೈಸಲು ಹೆಚ್ಚಿನ ಗಮನ ನೀಡಬೇಕು’ ಎಂದು ಸಲಹೆ ನೀಡಿದರು. 
 
ರಾಜ್ಯಸಭಾ ಸದಸ್ಯ ಆಸ್ಕರ್‌ ಫರ್ನಾಂಡಿಸ್‌ ಮಾತ ನಾಡಿ, ‘ಉಡುಪಿ ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳು ವಿಫಲವಾ ಗಿವೆ. ಇಂತಹ ಸಂದರ್ಭದಲ್ಲಿ ಅವಳಿ ಜಿಲ್ಲೆಯ ಪ್ರಥಮ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಾದ ಮಳವೂರು ಯೋಜನೆ ಆರಂಭವಾಗಿರುವುದು, ಇನ್ನಷ್ಟು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶಗಳನ್ನು ತೆರೆದಿದೆ’ ಎಂದು ಹೇಳಿದರು. 
 
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಭಯಚಂದ್ರ ಜೈನ್‌ ಮಾತನಾಡಿ, ‘3 ತಿಂಗಳ ಹಿಂದೆಯೇ ಈ ಯೋಜನೆಯ ಕಾಮಗಾರಿ ಪೂರ್ಣಗೊಂಡಿದೆ. ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಿಸಬೇಕು ಎನ್ನುವ ಉದ್ದೇಶವಿತ್ತು.
 
ಬೇಸಿಗೆ ಆರಂಭವಾಗಿದ್ದು, ಜನರಿಗೆ ಕುಡಿಯುವ ನೀರು ಒದಗಿಸಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಉದ್ಘಾಟಿಸಲಾಗಿದೆ. ಒಳ್ಳೆಯ ಕಾಮಗಾರಿಯಾಗಿದ್ದು, ಯೋಜನೆಯ ಪ್ರಯೋಜನ ಪಡೆಯಲಿರುವ ಗ್ರಾಮಗಳ ಜನರು ಶುದ್ಧ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು. 
 
ಸಂಸದ ನಳಿನ್‌ಕುಮಾರ್‌ ಕಟೀಲು, ಮಾಜಿ ಶಾಸಕ ವಿಜಯಕುಮಾರ್‌ ಶೆಟ್ಟಿ, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಎಂ.ಎ. ಗಫೂರ್‌, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬ್ಲಾಸಂ ಡಿಸೋಜ, ಜಿಲ್ಲಾ ಪಂಚಾಯಿತಿ ಸದಸ್ಯರಾದ ವಸಂತಿ ಕಿಶೋರ್‌, ಯು.ಪಿ. ಇಬ್ರಾಹಿಂ, ಮಂಗಳೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮೊಹ್ಮದ್‌ ಮೋನು, ಸದಸ್ಯರಾದ ಸುಪ್ರಿತಾ ಶೆಟ್ಟಿ, ಬಶೀರ್‌ ಅಹ್ಮದ್‌, ಪ್ರತಿಭಾ ಶೆಟ್ಟಿ, ಕವಿತಾ ದಿನೇಶ್‌, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಣೇಶ್ ಅರ್ಬಿ, ಸುರೇಶ್‌ ಶೆಟ್ಟಿ, ರೋಝಿ ಮಥಾಯಿಸ್‌, ಆದಂ, ಸರೋಜ, ಪ್ರೆಸಿಲ್ಲಾ ಮೊಂತೆರೋ, ಹರಿಪ್ರಸಾದ್‌ ಶೆಟ್ಟಿ, ಕಸ್ತೂರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಎಸ್‌. ರಂಗನಾಥ ನಾಯಕ್‌, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಲೋಕೇಶ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸದಾನಂದ ಇತರರು ಪಾಲ್ಗೊಂಡಿದ್ದರು.
****
14 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು
ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಸುತ್ತಲಿನ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯ 14 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ.

ನೀರು ಶುದ್ಧೀಕರಣ ಘಟಕ, ಜಾಕ್‌ವೆಲ್‌, ಜಲಸಂಗ್ರಹಾಗಾರಗಳನ್ನು ನಿರ್ಮಿಸಲಾಗಿದ್ದು, ಬಜ್ಪೆ, ಜೋಕಟ್ಟೆ, ಮಳವೂರು, ಕೆಂಜಾರು, ಪೆರ್ಮುದೆ, ಕುತ್ತೆತ್ತೂರು, ಮೂಡುಶೆಡ್ಡೆ, ಪಡುಶೆಡ್ಡೆ, ತೆಂಕ ಎಕ್ಕಾರು, ಬಡಗ ಎಕ್ಕಾರು, ಬಾಳ, ಕಳವಾರು, ಸೂರಿಂಜೆ ಮತ್ತು ದೇಲಂತಬೆಟ್ಟು ಗ್ರಾಮಗಳ ಜನರಿಗೆ ಫಲ್ಗುಣಿ ನದಿಯ ನೀರು ಪೂರೈಕೆಯಾಗಲಿದೆ.
****
‘ಕಾಡಿಗೆ ಕೈ ಹಾಕಬೇಡಿ ’
‘ಶೇ 20 ರಷ್ಟು ಕಾಡಿದೆ. ಉಳಿದ ಶೇ 80 ರಷ್ಟು ಜನವಸತಿ ಇದೆ. ಆದರೆ, ಶೇ 20 ರಷ್ಟು ಕಾಡಿನಲ್ಲೂ ಅತಿಕ್ರಮಣ ಮಾಡಲಾಗುತ್ತಿದೆ. ಯಾದಗಿರಿಯಂತಹ ಸಣ್ಣ ಜಿಲ್ಲೆಯಲ್ಲಿ ಶೇ 5 ರಷ್ಟು ಕಾಡಿದೆ. ಅದನ್ನೂ ಅತಿಕ್ರಮಣ ಮಾಡಲಾಗುತ್ತಿದೆ. ಇಂತಹ ಚಟುವಟಿಕೆಗಳಿಂದ ಪರಿಸರಕ್ಕೆ ಹಾನಿ ಉಂಟಾಗುತ್ತದೆ’ ಎಂದು ಸಚಿವ ಬಿ. ರಮಾನಾಥ ರೈ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.