ADVERTISEMENT

‘ಕಿವಿ ತುಂಬಿಸುವವರಿಗೆ ಅಧಿಕಾರ ನೀಡಬೇಡಿ’

ಬೆಳ್ತಂಗಡಿ: ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 10:31 IST
Last Updated 21 ಏಪ್ರಿಲ್ 2018, 10:31 IST

ಬೆಳ್ತಂಗಡಿ :‘ಕಿವಿ ತುಂಬಿಸುವವರಿಗಿಂತ ಹೊಟ್ಟೆ ತುಂಬಿಸುವವರಿಗೆ ಜನರು ಅಧಿಕಾರ ನೀಡಬೇಕು. ಬಿಜೆಪಿ ಪಕ್ಷದವರ ಕಿವಿ ತುಂಬಿಸುವ ಮರಳು ಮಾತಿಗೆ ಮತದಾರರು ಬಲಿಯಾಗಬಾರದು’ ಎಂದು ಕೆಪಿಸಿಸಿ ಕಾರ್ಯದರ್ಶಿ ವೆಂಕಪ್ಪ ಗೌಡ ಹೇಳಿದರು.

ಬೆಳ್ತಂಗಡಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕ ಕೆ ವಸಂತ ಬಂಗೇರರ ನಾಮಪತ್ರ ಸಲ್ಲಿಕೆ ನಿಮಿತ್ತ ಶುಕ್ರವಾರ ಅಂಬೇಡ್ಕರ್ ಭವನದ ಸಮೀಪ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಅವರು  ಮಾತನಾಡಿದರು.

‘ವಸಂತ ಬಂಗೇರ ರಾಜ್ಯ ಕಂಡ ಸಜ್ಜನ ರಾಜಕಾರಣಿ. ಅವರು ಜನರ ಸೇವೆ ಮಾಡಿದ್ದಕ್ಕಾಗಿ ಋಣ ತೀರಿಸುವ ಕೆಲಸ ಮತದಾರರು ಮಾಡಬೇಕು. ಬಂಗೇರರಲ್ಲಿ ಇರುವ ಗಂಭೀರತೆ, ಕೆಲಸ ಮಾಡದ ಅಧಿಕಾರಿಗಳಿಗೆ ಗರಂ ಆಗುವ ಸ್ವಭಾವದಿಂದಾಗಿ ಜನ ಅವರನ್ನು ಮೆಚ್ಚಿಕೊಂಡಿದ್ದಾರೆ’ ಎಂದರು.

ADVERTISEMENT

ಜಿ.ಪಂ.ಸದಸ್ಯ ಶಾಹುಲ್ ಹಮೀದ್ ಮಾತನಾಡಿ ಈ ಬಾರಿ ವಸಂತ ಬಂಗೇರ ಕೇವಲ ಶಾಸಕರಾಗುವುದು ಮಾತ್ರವಲ್ಲ. ಮಂತ್ರಿಯಾಗಿ ಕಾಣುವ ಸೌಭಾಗ್ಯ ಒದಗಲಿದೆ ಎಂದರು

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ. ವೆಂಕಟೇಶ್ ಮಾತನಾಡಿ, ವಿಧಾನಸಭಾ ಚುನಾವಣೆ ಈ ದೇಶದ ದಿಕ್ಸೂಚಿಯಾಗಬೇಕು. ಶಾಸಕ ಬಂಗೇರರು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಅವರ ಸಾಧನೆಗೆ ಸಾಕ್ಷಿ ಎಂದರು.

ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಕೆ ವಸಂತ ಬಂಗೇರ ಮಾತನಾಡಿ, ‘ನನ್ನನ್ನು ಕಾಯಿ ಒಡೆಯುವ ಶಾಸಕ ಎಂದು ವಿರೋಧ ಪಕ್ಷದವರು ಗೇಲಿ ಮಾಡುತ್ತಿದ್ದಾರೆ. ನಾನು ‌‌ತೆಂಗಿನ ಕಾಯಿ ಒಡೆದ ಜಾಗವೆಲ್ಲ ಅಭಿವೃದ್ಧಿಯಾಗಿದೆ’ ಎಂದರು.

‘ಬಿಜೆಪಿಯವರು ಜನರನ್ನು ದಾರಿ ತಪ್ಪಿಸುವು ಕುತಂತ್ರ ರಾಜಕಾರಣ ಮಾಡಬಾರದು. ತಾನು 5 ವರ್ಷದ ಅವಧಿಯಲ್ಲಿ 38 ಸಾವಿರ ಅಕ್ರಮ ಸಕ್ರಮ ಅರ್ಜಿಗಳಿಗೆ ಹಕ್ಕುಪತ್ರ ನೀಡಿದ್ದೇನೆ. 94 ಸಿ ಮತ್ತು 94 ಸಿಸಿ ಯೋಜನೆಯಲ್ಲಿ ತಾಲೂಕಿನ 21 ಸಾವಿರ ಬಡವರ ಬದುಕು ಬೆಳಗುವ ಕೆಲಸ ಮಾಡಿದ್ದೇನೆ. ಅರ್ಜಿದಾರರು ಯಾವ ಪಕ್ಷದವರು ಎಂದು ನೋಡದೆ ಅವರಿಗೆ ನ್ಯಾಯ ಕೊಟ್ಟಿದ್ದೇನೆ’
ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ, ‘ಈ ಬಾರಿಯ ಚುನಾವಣೆ ಧರ್ಮ ಮತ್ತು ಅಧರ್ಮದ , ಸತ್ಯ ಅಸತ್ಯದ, ನ್ಯಾಯ ಅನ್ಯಾಯದ ಮಧ್ಯೆ ನಡೆಯುವ ಚುನಾವಣೆ’ ಎಂದರು.

ಎ.ಸಿ ಜಯರಾಜ್ ಮಾತನಾಡಿದರು. ಚುನಾವಣಾ ಉಸ್ತುವಾರಿಗಳಾದ ವಿಜಯಕುಮಾರ್ ರೈ, ಸೈಮನ್, ತಾಲ್ಲೂಕು ಪ್ರಚಾರ ಸಮಿತಿ ಅಧ್ಯಕ್ಷ ಇ. ಸುಂದರ ಗೌಡ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಶ್ರೀನಿವಾಸ ಕಿಣಿ, ನಗರ ಅಧ್ಯಕ್ಷ ರಾಜಶೇಖರ ಅಜ್ರಿ, ಕೆಪಿಸಿಸಿ ಸದಸ್ಯರಾದ ಪೀತಾಂಬರ ಹೇರಾಜೆ ಮತ್ತು ರಾಮಚಂದ್ರ ಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದಿವ್ಯಜ್ಯೋತಿ ಇದ್ದರು.

ಸಭೆಯ ಬಳಿಕ ಸಾವಿರಾರು ಕಾರ್ಯಕರ್ತರ ಮೆರವಣಿಗೆಯೊಂದಿಗೆ ಸಾಗಿ ಬೆಳ್ತಂಗಡಿ ಮಿನಿ ವಿಧಾನ ಸೌಧದಲ್ಲಿರುವ ತಾಲ್ಲೂಕು ಚುನಾವಣಾ ಆಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.