ADVERTISEMENT

ಕ್ರೀಡಾಪಟುಗಳಿಗೆ ಕೃಪಾಂಕ: ಸಚಿವ ಪ್ರಮೋದ್‌

ಅಂತರ ಕಾಲೇಜು ಕಬಡ್ಡಿ: ಬೆಸೆಂಟ್ ಸಂಧ್ಯಾ ಕಾಲೇಜು ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 9:10 IST
Last Updated 17 ಮಾರ್ಚ್ 2018, 9:10 IST
ಮಂಗಳೂರಿನ ಎಂ.ಎಸ್‌.ಎನ್‌.ಎಂ. ಬೆಸೆಂಟ್‌ ಸ್ನಾತಕೋತ್ತರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಅಂತರ ಕಾಲೇಜು ಏಕದಿನ ಕಬಡ್ಡಿ ಪಂದ್ಯಾವಳಿಯನ್ನು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್‌ ಉದ್ಘಾಟಿಸಿದರು.
ಮಂಗಳೂರಿನ ಎಂ.ಎಸ್‌.ಎನ್‌.ಎಂ. ಬೆಸೆಂಟ್‌ ಸ್ನಾತಕೋತ್ತರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಅಂತರ ಕಾಲೇಜು ಏಕದಿನ ಕಬಡ್ಡಿ ಪಂದ್ಯಾವಳಿಯನ್ನು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್‌ ಉದ್ಘಾಟಿಸಿದರು.   

ಮಂಗಳೂರು: ನಗರದ ಬೋಂದೆಲ್‌ನಲ್ಲಿರುವ ಎಂ.ಎಸ್.ಎನ್.ಎಂ. ಬೆಸೆಂಟ್ ಸ್ನಾತಕೋತ್ತರ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಬೋಂದೆಲ್‌ನಲ್ಲಿ ಜರುಗಿದ ಅಂತರ ಕಾಲೇಜು ಏಕದಿನದ ಕಬಡ್ಡಿ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಬೆಸೆಂಟ್ ಸಂಧ್ಯಾ ಕಾಲೇಜು ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಮಹಿಳೆಯರ ವಿಭಾಗದಲ್ಲಿ ರಥಬೀದಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ ಪಡೆಯಿತು. ಅಂತಿಮ ಸುತ್ತಿನ ಪಂದ್ಯದಲ್ಲಿ ಪುರುಷರ ವಿಭಾಗದಲ್ಲಿ ಮಂಗಳೂರಿನ ಎಸ್‌ಡಿಎಂ ಕಾಲೇಜು ದ್ವಿತೀಯ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ದ್ವಿತೀಯ ಸ್ಥಾನಗಳಿಸಿತು.

ಪಂದ್ಯಾಟ ಉದ್ಘಾಟಿಸಿ ಮಾತನಾಡಿದ ಕ್ರೀಡೆ, ಯುವ ಸಬಲೀಕರಣ ಮತ್ತು ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್, ರಾಜ್ಯ ಸರ್ಕಾರವು ಕ್ರೀಡೆಗೆ ವಿಶೇಷ ಪ್ರೋತ್ಸಾಹ ನೀಡುತ್ತಿದ್ದು, ಅದರಲ್ಲೂ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ತರಗತಿಯಿಂದಲೇ ಕೃಪಾಂಕ ನೀಡಿ ಸಾಧಕರನ್ನು ಗುರುತಿಸಿ ಬೆಳಕಿಗೆ ತರುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ADVERTISEMENT

ಕ್ರೀಡಾ ಕ್ಷೇತ್ರದ ವಿದ್ಯಾರ್ಥಿಗಳಿಗೆ ಉದ್ಯೋಗ ಕ್ಷೇತ್ರದಲ್ಲಿ ವಿಶೇಷ ಮೀಸಲಾತಿ ನೀಡುತ್ತಿದೆ ಎಂದ ಅವರು, ಸರ್ಕಾರ ಬಜೆಟ್‌ನಲ್ಲಿ ಕ್ರೀಡೆಗೆ ನೀಡುತ್ತಿರುವ ಅನುದಾನವನ್ನು ₹145 ಕೋಟಿಯಿಂದ ₹285 ಕೋಟಿಗೆ ಏರಿಸಿದೆ ಎಂದರು.

ಇಡೀ ದೇಶದಲ್ಲೇ ಅತ್ಯುತ್ತಮವಾದ ಕ್ರೀಡಾ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.

ಯುಪಿಸಿಎಲ್ ಅದಾನಿ ಪವರ್ ಕಾರ್ಪೊರೇಷನ್‌ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮತ್ತು ಪ್ರೊ ಕಬಡ್ಡಿ ಲೀಗ್‌ನ ರಾಷ್ಟ್ರೀಯ ಆಟಗಾರ, ತರಬೇತುದಾರ ಜಗದೀಶ್ ಕುಂಬ್ಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಮೆನ್ಸ್ ನ್ಯಾಷನಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್, ಸದಸ್ಯರಾದ ರಾಘವ ಕಾಮತ್, ನಗರ ನಾರಾಯಣ ಶೆಣೈ, ಸುರೇಶ್ ಮಲ್ಯ, ಸತೀಶ್ ಭಟ್ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಬಹುಮಾನ ವಿತರಿಸಿದರು. ಬೆಸೆಂಟ್ ಸ್ನಾತಕೋತ್ತರ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ. ನಾರಾಯಣ ಕಾಯರ್‌ಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಅಖಿಲೇಶ್ ಆಚಾರ್ಯ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.