ADVERTISEMENT

ದಿಕ್ಕು ತಪ್ಪಿದ ಕುಡಿಯುವ ನೀರಿನ ಯೋಜನೆ

ಬೆಳ್ವೆ ಗ್ರಾಮ ಪಂಚಾಯಿತಿ: ನೀರಿನ ಟ್ಯಾಂಕ್ ಇದ್ದರೂ ಕುಡಿಯಲು ನೀರಿಲ್ಲ!

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 7:35 IST
Last Updated 16 ಫೆಬ್ರುವರಿ 2017, 7:35 IST
ಸಿದ್ದಾಪುರ:  ಸರ್ಕಾರಿ ಯೋಜನೆ ಜನರ ಪರವಾಗಿ ಅನುಷ್ಠಾನವಾಗಲು ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಇವರು ನಿರ್ಲಕ್ಷ್ಯ ವಹಿಸಿದರೆ ಯಾವುದೇ ಯೋಜನೆ ತಂದರು ಯಶಸ್ವಿ ಆಗಲ್ಲ. ಇದಕ್ಕೆ ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್ಡಿಯಲ್ಲಿ ನಿರ್ಮಾಣ ಮಾಡಿರುವ ಕುಡಿಯುವ ನೀರಿನ ಟ್ಯಾಂಕ್ ಸಾಕ್ಷಿ.
 
ಬಿಸಿಲಿನ ತಾಪವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈಗಾಗಲೆ ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿದ್ದು, ನದಿಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಬಹುತೇಕ ಕಡೆಗಳಲ್ಲಿ ನೀರಿನ ಹರಿಯುವಿಕೆ ನಿಂತಿದೆ. ಕೆರೆ ಕಟ್ಟೆಗಳಲ್ಲಿ ನೀರು ತಳಮಟ್ಟಕ್ಕೆ ಸೇರುತ್ತಿದ್ದು, ಈ ಬಾರಿ ಮಾರ್ಚ್ ಅಂತ್ಯಕ್ಕೆ ಕುಡಿಯಲು ನೀರು ಸಿಗದೇ ಇರುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುವ ಭೀತಿ ಎದುರಾಗಿದೆ.  
 
ಪ್ರತಿ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಸರ್ಕಾರದಿಂದ ಸಾಕಷ್ಟು ಅನುದಾನ ಕಾಯ್ದಿರಿಸಿ, ಬಹುತೇಕ ಕಡೆಗಳಲ್ಲಿ ಕಾಮಗಾರಿ ನಡೆಸಲಾಗಿದೆ. ಕೆಲವು ಕಡೆಗಳಲ್ಲಿ ಮಾತ್ರ ಕಾಮಗಾರಿ ಅಪೂರ್ಣವಾಗಿದ್ದರು ಯಾರು ಈ ಕುರಿತು ಮಾತನಾಡುತ್ತಿಲ್ಲ. 
 
ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್ಡಿ ಚಿತ್ತೇರಿ ಕ್ರಾಸ್ ಬಳಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಗ್ರಾಮೀಣ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ನೀರಿನ ಟ್ಯಾಂಕ್ ರಚಿಸಲಾಗಿದೆ. ಟ್ಯಾಂಕ್ ರಚಿಸಿ ಬಹುತೇಕ ವರ್ಷಗಳೆ ಕಳೆದರೂ ಟ್ಯಾಂಕ್‌ಲ್ಲಿ ನೀರು ಸಂಗ್ರಹಿಸಿ ಮನೆ ಮನೆಗೆ ನೀರು ದೊರಕಿತು ಎನ್ನುವ ಖುಷಿ ಈ ಭಾಗದ ಜನರಿಗೆ ಇಂದಿಗೂ ದೊರಕಿಲ್ಲ.
 
ಕಾಮಗಾರಿಯೂ ಪೂರ್ಣಗೊಂಡು ಎರಡು ಮೂರು ವರ್ಷವಾದರೂ  ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಟ್ಯಾಂಕ್‌ಗೆ ಇದೂವರೆಗೆ ಒಂದು ಹನಿ ನೀರು ಕೂಡ ಬಿಟ್ಟಿಲ್ಲ ಎನ್ನುವಾಗ ಜನರಿಗೆ ಕುಡಿಯಲು ನೀರು ದೊರಕಲು ಸಾಧ್ಯವೇ? 
 
ಕಾಮಗಾರಿ ಪೂರ್ಣಗೊಂಡು ಗುತ್ತಿಗೆದಾರರಿಗೆ ಹಣ ದೊರೆತು, ಅಧಿ ಕಾರಿಗಳು ಹಾಗೂ ಕೆಲವು ಜನಪ್ರ ತಿನಿಧಿಗಳು ಬದಲಾವಣೆಯಾದರು ಟ್ಯಾಂಕ್‌ಗೆ ನೀರು ಮಾತ್ರ ಹರಿಯಲಿಲ್ಲ. ಆರ್ಡಿ ಸಮೀಪದಲ್ಲಿ ಕೆರೆ ಅಥವಾ ಬಾವಿಯಲ್ಲಿ ನೀರು ಇಲ್ಲ ಎನ್ನುವ ಕಾರಣ ನೀಡುತ್ತಿದ್ದಾರೆಯೆ ಹೊರತು ಟ್ಯಾಂಕ್‌ಗೆ ನೀರು ಹರಿಸಿ ಜನರಿಗೆ ನೀಡುತ್ತೇವೆ ಎನ್ನುವ ಭರವಸೆ ಕೂಡ ನೀಡುತ್ತಿಲ್ಲ. ಸರ್ಕಾರಿ ಹಣವನ್ನು ಪೋಲು ಮಾಡುವುದಕ್ಕೆ ಇನ್ನೊಂದು ಯೋಜನೆ ರೂಪಿಸುವ ಬದಲು ಈ ಯೋಜನೆ ಪೂರ್ಣಗೊಳಿಸಲು ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. 
 
ಅಲ್ಲದೆ ಗ್ರಾಮೀಣ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಟ್ಯಾಂಕ್ ನಿರ್ಮಾಣ ಮಾಡಿ ಕೆಲವು ವರ್ಷ ಕಳೆದಿರುವುದರಿಂದ ಅದರ ಗುಣಮಟ್ಟ ಕುಸಿದಿರಬಹುದು ಎನ್ನುವ ಮಾತು  ಕೇಳಿ ಬರುತ್ತಿವೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಜನರಿಗೆ ಕುಡಿಯುವ ನೀರು ಒದಗಿಸುವ ಯೋಜನೆ ದಿಕ್ಕು ತಪ್ಪುತ್ತಿರುವುದು ಈ ಭಾಗದ ಜನರಲ್ಲಿ ಆತಂಕ ಮೂಡಲ ಕಾರಣವಾಗಿದೆ.
- ಸಂದೇಶ ಶೆಟ್ಟಿ
 
* ಆರ್ಡಿಯಲ್ಲಿ ನಿರ್ಮಿಸಿದ ಕುಡಿಯುವ ನೀರಿನ ಟ್ಯಾಂಕ್‌ ಮಾಹಿತಿ ಇದುವರೆಗೆ ಬಂದಿಲ್ಲ. ಈ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದೇನೆ
ಸುಪ್ರಿತಾ ಕುಲಾಲ್, ಜಿಲ್ಲಾ ಪಂಚಾಯಿತಿ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.