ADVERTISEMENT

ನಂದನ ಬಿತ್ತ್‌ಲ್‌ಗೆ ಶಿಲಾ ಪರಿಕರ ಮೆರವಣಿಗೆ

ಕೋಟಿ ಚೆನ್ನಯ ಮೂಲಸ್ಥಾನಕ್ಕೆ ಸಾಗಿದ ನಿರ್ಮಾಣ ಕಾಮಗಾರಿ ಸಾಮಗ್ರಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 5:54 IST
Last Updated 19 ಏಪ್ರಿಲ್ 2017, 5:54 IST
ನಂದನ ಬಿತ್ತ್‌ಲ್‌ಗೆ ಶಿಲಾ ಪರಿಕರ ಮೆರವಣಿಗೆ
ನಂದನ ಬಿತ್ತ್‌ಲ್‌ಗೆ ಶಿಲಾ ಪರಿಕರ ಮೆರವಣಿಗೆ   
ಪುತ್ತೂರು:  ಪುನರುತ್ಥಾನ ಕಾಮಗಾರಿ ನಡೆಯುತ್ತಿರುವ ದೇಯಿ ಬೈದ್ಯೆತಿ - ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರ ವಾದ ಪುತ್ತೂರು ತಾಲ್ಲೂಕಿನ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ಗೆ ಭಕ್ತರು ಸಮರ್ಪಿಸಿದ ಶಿಲಾ ಪರಿಕರಗಳನ್ನು ಮಂಗಳವಾರ ಬಂಟ್ವಾಳದಿಂದ ಮೆರವಣಿಗೆ ಮೂಲಕ ತಂದು ಕ್ಷೇತ್ರಕ್ಕೆ ಸಮರ್ಪಿಸಲಾಯಿತು.
 
ಮೆಲ್ಕಾರ್‌ನ ಬಿರ್ವ ಸೆಂಟರ್ ಬಳಿ ಉದ್ಘಾಟನೆಗೊಂಡ ಮೆರವಣಿಗೆಯು ಕಲ್ಲಡ್ಕ, ಮಾಣಿ, ಪುತ್ತೂರು, ಕುಂಬ್ರ, ಕೌಡಿಚ್ಚಾರ್ ಮಾರ್ಗವಾಗಿ ಸಾಗಿತು. ಕೆಂಪುಕಲ್ಲು, ಜಲ್ಲಿ ಮತ್ತಿತರ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿ ಪರಿಕರಗಳನ್ನು ಭಕ್ತರು ದಾನ ರೂಪದಲ್ಲಿ ನೀಡಿದ್ದು,  ಐವತ್ತು ಲಾರಿಗಳಲ್ಲಿ ಅವುಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಕ್ಷೇತ್ರಕ್ಕೆ ಸಮರ್ಪಿಸಲಾಯಿತು.
 
ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಅವರು ಮೆಲ್ಕಾರ್‌ನಲ್ಲಿ ತೆಂಗಿನಕಾಯಿ ಒಡೆಯುವ ಮೂಲಕ ಶಿಲಾ ಪರಿಕರ ಮೆರವಣಿಗೆಗೆ ಚಾಲನೆ ನೀಡಿದರು. ದೇಯಿ ಬೈದ್ಯೆತಿ ಮತ್ತು ಕೋಟಿ ಚೆನ್ನಯರ ಮೂಲಸ್ಥಾನದ ಪುನರುತ್ಥಾನದಲ್ಲಿ ಕರಾವಳಿ ಮತ್ತು ಹೊರನಾಡಿನ ಸಮಸ್ತ ಕೋಟಿ ಚೆನ್ನಯ ಭಕ್ತರು ಭಾಗವಹಿಸುತ್ತಿರುವುದು ಸಂತೋಷ ತಂದಿದೆ. ಇದೊಂದು ಚಾರಿತ್ರಿಕ ವಿದ್ಯಮಾನ ಎಂದು ಅವರು ಹೇಳಿದರು.  
 
ಪ್ರಮುಖರಾದ ಸೇಸಪ್ಪ ಕೋಟ್ಯಾನ್, ಡಿ.ಡಿ. ಕಟ್ಟೆಮಾರ್, ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಮಾಯಿಲಪ್ಪ ಸಾಲಿಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಶಿಲಾಪರಿಕರ ಮೆರವಣಿಗೆ ಸಂಘಟಿಸಿದ ಗೆಜ್ಜೆಗಿರಿ ಕ್ಷೇತ್ರದ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಚಂದ್ರ ಶೇಖರ ಉಚ್ಚಿಲ್, ಕಾರ್ಯಾಧ್ಯಕ್ಷ ಯಶ ವಂತ ದೇರಾಜೆ ಮತ್ತು ಉಳ್ಳಾಲ ವಲ ಯದ ನೂರಾರು ಭಕ್ತರು, ವಲಯ ಸಮಿ ತಿಯ ಪದಾಧಿಕಾರಿಗಳು, ಶಿಲಾ ಪರಿಕ ರಗಳನ್ನು ನೀಡಿರುವ ದಾನಿಗಳು ಹಾಜರಿದ್ದರು.  
 
ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಚಿತ್ತರಂಜನ್ ಕಂಕನಾಡಿ, ಕಾರ್ಯಾಧ್ಯಕ್ಷರಾದ ಪೀತಾಂಬರ ಹೆರಾಜೆ, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಗೆಜ್ಜೆಗಿರಿ ಕ್ಷೇತ್ರದ ತಾಂತ್ರಿಕ ಸಲಹೆಗಾರ ಸಂತೋಷ್ ಕುಮಾರ್ ಕೊಟ್ಟಿಂಜ ಮತ್ತಿತರರು ಇದ್ದರು. 
****
ಪುತ್ತೂರಿನಲ್ಲಿ ಸ್ವಾಗತ
ಪುತ್ತೂರಿನ ದರ್ಬೆ ಫಾದರ್ ಪತ್ರಾವೋ ವೃತ್ತದ ಬಳಿ ಮೆರವಣಿಗೆ ಯನ್ನು ಪುತ್ತೂರು ತಾಲ್ಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲ್ ನೇತೃತ್ವದಲ್ಲಿ ಸ್ವಾಗತಿಸಲಾಯಿತು. ಡಿವೈಎಸ್‍ಪಿ ಭಾಸ್ಕರ ರೈ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಮೆರವ ಣಿಗೆಗೆ ಶುಭ ಕೋರಿದರು. ಪಟಾಕಿ ಸಿಡಿಸಿ ಸಂಭ್ರಮ ಆಚರಿಸಲಾಯಿತು.

ಗೆಜ್ಜೆಗಿರಿ ಕ್ಷೇತ್ರದ ಪುತ್ತೂರು ತಾಲ್ಲೂಕು ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು,  ಶಶಿಧರ್ ಕಿನ್ನಿಮಜಲ್, ಯುವವಾಹಿನಿ ಅಧ್ಯಕ್ಷ ಜಯಂತ ಪೂಜಾರಿ ಕೆಂಗುಡೇಲ್, ಕಾರ್ಯ ದರ್ಶಿ ಉದಯ ಕೋಲಾಡಿ, ಬಿಲ್ಲವ ಸಂಘದ ಉಪಾಧ್ಯಕ್ಷ ಬಾಬು ಪೂಜಾರಿ ಬಲ್ನಾಡ್, ಕೋಶಾಧಿಕಾರಿ ಚಂದ್ರಕಾಂತ ಶಾಂತಿವನ, ಗೆಜ್ಜೆಗಿರಿ ಕ್ಷೇತ್ರದ ಕಾರ್ಯದರ್ಶಿಗಳಾದ ಸುಧಾಕರ ಸುವರ್ಣ, ಉಲ್ಲಾಸ್ ಕೋಟ್ಯಾನ್ ಇದ್ದರು. ಮೆರವಣಿಗೆಯು ಸಂಪ್ಯ, ಕುಂಬ್ರ, ಕೌಡಿಚ್ಚಾರ್ ಮೂಲಕ ಸಾಗಿತು. ಕೌಡಿಚ್ಚಾರ್‌ನಲ್ಲಿ ಸರ್ವಧರ್ಮೀ ಯರು ಸೇರಿಕೊಂಡು ಮೆರವಣಿಗೆ ಯನ್ನು ಸ್ವಾಗತಿಸಿದರು. ಸಂಜೆ ಗೆಜ್ಜೆಗಿರಿ ಕ್ಷೇತ್ರದಲ್ಲಿ ಶಿಲಾಪರಿಕರಗಳನ್ನು ಸಮರ್ಪಿಸಲಾ ಯಿತು. ಕ್ಷೇತ್ರದ ಆನುವಂಶಿಕ ಮೊಕ್ತೇ ಸರ ಶ್ರೀಧರ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.